ಬೆಂಗಳೂರು: ಅಮೃತಹಳ್ಳಿಯ ಶಂಕರ್ ಎಂಬುವವರ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ 37 ಸಾವಿರ ರೂ. ಹಣ ತನ್ನ ಅಕೌಂಟ್‌ಗೆ ವರ್ಗಾಯಿಸಿಕೊಂಡಿದ್ದ ಮಣಿಪುರ ಮೂಲದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಲಂಗ್ ಮುನ್ ಪಾನ್ ಬಂಧಿತ. ಜೂ.13ರಂದು ತಮ್ಮ ಬ್ಯಾಂಕ್ ಖಾತೆಯಿಂದ 37 ಸಾವಿರ ರೂ. ಹಣವನ್ನು ಯಾರೋ ವರ್ಗಾಯಿಸಿಕೊಂಡಿರುವ ಬಗ್ಗೆ ಶಂಕರ್ ನೀಡಿದ ದೂರಿನ ಅನ್ವಯ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಆರೋಪಿ ಕಳೆದ ಕೆಲ ತಿಂಗಳುಗಳಿಂದ ಆನ್‌ಲೈನ್ ಮೂಲಕ ಹಲವರ ಬ್ಯಾಂಕ್ ಖಾತೆಗಳಲ್ಲಿ ಹಣ ವರ್ಗಾವಣೆ ಮಾಡಿಕೊಂಡಿರುವ ಶಂಕೆಯಿದೆ. ಅಲ್ಲದೆ, ಮಾರ್ಚ್ ತಿಂಗಳಿನಿಂದ ಆರೋಪಿ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 8 ಲಕ್ಷ ರೂ. ವರ್ಗಾವಣೆಯಾಗಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ವಂಚನೆ ಹೇಗೆ?: ಮೆಡಿಕಲ್ ಸ್ಟೋರ್ ಇಟ್ಟುಕೊಂಡಿರುವ ಶಂಕರ್, ವಾರ್ಷಿಕ ಆದಾಯ ತೆರಿಗೆ (ಐಟಿ) ಹಾಗೂ ಜಿಎಸ್‌ಟಿ ತೆರಿಗೆ ಪಾವತಿಸುವ ಸಲುವಾಗಿ ಐಟಿ ವೆಬ್‌ಸೈಟ್‌ನಲ್ಲಿ ಲಾಗ್ ಇನ್ ಹಾಕಿ, ಪಾನ್ ಕಾರ್ಡ್ ಸೇರಿ ಇನ್ನಿತರೆ ಮಾಹಿತಿ ಹಂಚಿಕೊಂಡಿದ್ದರು. ಇದಾದ ಬಳಿಕ ನಿಮ್ಮ ಮನವಿ ಸಲ್ಲಿಕೆಯಾಗಿದೆ ಎಂಬ ಒಕ್ಕಣೆಯುಳ್ಳ ಲಿಂಕ್‌ವೊಂದು ಶಂಕರ್ ಮೊಬೈಲ್ ನಂಬರಿಗೆ ಬಂದಿತ್ತು.
ಇದನ್ನು ನಿಜವೆಂದು ನಂಬಿದ್ದ ಶಂಕರ್ ಲಿಂಕ್ ಓಪನ್ ಮಾಡಿ ತನ್ನ ಬ್ಯಾಂಕ್ ಖಾತೆ ನಂಬರ್ ಸೇರಿ ಇನ್ನಿತರೆ ಮಾಹಿತಿ ಅಪ್ಲೋಡ್ ಮಾಡಿದ್ದರು. ಕೂಡಲೇ ಈ ಮಾಹಿತಿ ಸಂಗ್ರಹಿಸಿ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿದ ಆರೋಪಿ, 37 ಸಾವಿರ ರೂ.ವರ್ಗಾವಣೆ ಮಾಡಿಕೊಂಡಿದ್ದ ಎಂದು ಅಧಿಕಾರಿ ವಿವರಿಸಿದರು.