Advertisement

ಮದ್ಯದ ಅಮಲಲ್ಲಿ ಸ್ನೇಹಿತನ ಕೊಂದವನ ಸೆರೆ

06:37 AM Feb 15, 2019 | |

ಬೆಂಗಳೂರು: ಮದ್ಯದ ಅಮಲಿನಲ್ಲಿ ಮೊಬೈಲ್‌ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಅಮೃತಹಳ್ಳಿಯ ಜಕ್ಕೂರು ಲೇಔಟ್‌ನಲ್ಲಿ ಬುಧವಾರ ತಡರಾತ್ರಿ ನಡೆದಿದ್ದು, ಈ ಸಂಬಂಧ ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ಗುರುವಾರ ಬೆಳಗ್ಗೆ ಬಂಧಿಸಿದ್ದಾರೆ.

Advertisement

ಜಕ್ಕೂರು ಲೇಔಟ್‌ನ ಜಯರಾಮ್‌ (32) ಕೊಲೆಯಾದವ. ಕೃತ್ಯವೆಸಗಿದ ಶಕೀಬ್‌ (21) ಎಂಬಾತನನ್ನು ಬಂಧಿಸಲಾಗಿದೆ. ತುಮಕೂರು ಮೂಲದ ಜಯರಾಮ್‌ಗೆ ವಿವಾಹವಾಗಿದ್ದು, ಜಕ್ಕೂರು ಲೇಔಟ್‌ನ ಬಾಡಿಗೆ ಮನೆಯಲ್ಲಿ ಒಬ್ಬನೇ ವಾಸವಾಗಿದ್ದ. ಆರೋಪಿ ಶಕೀಬ್‌ನ ಚಿಕ್ಕಪ್ಪ ಪಾತ್ರೆ ವ್ಯಾಪಾರಿಯಾಗಿದ್ದು, ನಾಲ್ಕೈದು ತಳ್ಳುವ ಗಾಡಿಗಳನ್ನು ಹೊಂದಿದ್ದಾರೆ.

ಈ ಪೈಕಿ ಒಂದು ತಳ್ಳುವ ಗಾಡಿಯನ್ನು ಶಕೀಬ್‌ ನೋಡಿಕೊಳ್ಳುತ್ತಿದ್ದ. 15 ದಿನಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ಜಯರಾಮ್‌, ಶಕೀಬ್‌ ಜತೆ ಪಾತ್ರೆ ವ್ಯಾಪಾರಕ್ಕೆ ಹೋಗುತ್ತಿದ್ದ. ಶಕೀಬ್‌ನ ಚಿಕ್ಕಪ್ಪ, ಜಯರಾಮ್‌ಗೆ ಪ್ರತಿನಿತ್ಯ 200 ರೂ. ಕೂಲಿ ಕೊಡುತ್ತಿದ್ದರು. ಈ ಹಣದಲ್ಲಿ ಇಬ್ಬರೂ ಪಾರ್ಟಿ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಮೊಬೈಲ್‌ ವಿಚಾರಕ್ಕೆ ಕೊಲೆ: ಆರೋಪಿ ಶಕೀಬ್‌ ನಾಲ್ಕೈದು ದಿನಗಳ ಹಿಂದಷ್ಟೇ ಜಯರಾಮ್‌ಗೆ ತನ್ನ ಮೊಬೈಲ್‌ ಕೊಟ್ಟಿದ್ದ. ನಂತರ ಮೊಬೈಲ್‌ ಹಿಂದಿರುಗಿಸುವಂತೆ ಸಾಕಷ್ಟು ಬಾರಿ ಕೇಳಿದರೂ ಜಯರಾಮ್‌ ವಾಪಸ್‌ ಕೊಟ್ಟಿರಲಿಲ್ಲ. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆಯುತ್ತಿತ್ತು. ಬುಧವಾರ ಬೆಳಗ್ಗೆ ಕೂಡ ಇಬ್ಬರ ನಡುವೆ ಗಲಾಟೆಯಾಗಿತ್ತು.

ಆದರೂ ರಾತ್ರಿ 9 ಗಂಟೆ ಸುಮಾರಿಗೆ ಜಯರಾಮ್‌ ಪಾರ್ಟಿ ಮಾಡಲು ಸ್ನೇಹಿತ ಶಕೀಬ್‌ನನ್ನು ಮನೆಗೆ ಕರೆಸಿಕೊಂಡಿದ್ದಾನೆ. ಬಳಿಕ ಇಬ್ಬರೂ ತಡರಾತ್ರಿ 1 ಗಂಟೆವರೆಗೂ ಮದ್ಯ ಸೇವಿಸಿದ್ದಾರೆ. ಈ ವೇಳೆ ಜಯರಾಮ್‌ ಮೊಬೈಲ್‌ ವಿಚಾರಕ್ಕೆ ಗಲಾಟೆ ಮಾಡಿದ್ದು, ಮದ್ಯದ ಅಮಲಿನಲ್ಲಿಯೇ ಮನೆಯಿಂದ ಹೊರಬಂದು ಜೋರಾಗಿ ಕೂಗಾಡಿದ್ದಾನೆ. ಆತನ ಕೂಗಾಟ ಕೇಳಿ ಎಚ್ಚರಗೊಂಡ ಅಕ್ಕ-ಪಕ್ಕದವರು ತೊಂದರೆ ಕೊಡದಂತೆ ಬೈದಿದ್ದರು.

Advertisement

ಇದರಿಂದ ಬೇಸರಗೊಂಡ ಶಕೀಬ್‌, ಜಯರಾಮ್‌ಗೆ ಹೊಡೆದು ಒಳಗೆ ಕರೆದೊಯ್ಯಲು ಯತ್ನಿಸಿದ್ದಾನೆ. ಈ ವೇಳೆ ಮತ್ತೆ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಆಗ ಕೋಪಗೊಂಡ ಶಕೀಬ್‌ ಅಲ್ಲೇ ಇದ್ದ ಡಂಬಲ್ಸ್‌ನಿಂದ ಜಯರಾಮ್‌ ತಲೆಗೆ ಹೊಡೆದಿದ್ದು, ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.

ಹೊಸಕೋಟೆಗೆ ಹೋಗುವಾಗ ಬಂಧನ: ಕೃತ್ಯ ಎಸಗಿದ ಬಳಿಕ ಗಾಬರಿಗೊಂಡ ಆರೋಪಿ ಶಕೀಬ್‌ ಜಯರಾಮ್‌ನ ಮೃತ ದೇಹವನ್ನು ಮನೆಯೊಳಗೆ ಇಟ್ಟು ಪರಾರಿಯಾಗಿದ್ದ. ಗುರುವಾರ ಬೆಳಗ್ಗೆ ಸುಹೇಲ್‌ ಎಂಬಾತ ಕೆಲಸಕ್ಕೆ ಕರೆದೊಯ್ಯಲು ಜಯರಾಮ್‌ ಮನೆ ಬಳಿ ಬಂದಿದ್ದಾನೆ. ಮನೆ ಬಾಗಿಲ ಬಳಿ ಬಿದ್ದಿದ್ದ ರಕ್ತದ ಕಲೆಗಳನ್ನು ಕಂಡು ಗಾಬರಿಗೊಂಡು ಸ್ಥಳೀಯರನ್ನು ಪ್ರಶ್ನಿಸಿದ್ದಾನೆ.

ಅನುಮಾನಗೊಂಡ ಅಕ್ಕ-ಪಕ್ಕದ ನಿವಾಸಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಬಾಗಿಲು ಒಡೆದು ನೋಡಿದಾಗ ಜಯರಾಮ್‌ ಮೃತದೇಹ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಜಯರಾಮ್‌, ಶಕೀಬ್‌ ಜತೆ ಪಾರ್ಟಿ ಮಾಡಿದ ವಿಚಾರ ಗೊತ್ತಾಗಿದೆ. ಆ ವೇಳೆಗಾಗಲೇ ಆರೋಪಿ ಸ್ವಂತ ಊರಾದ ಹೊಸಕೋಟೆಗೆ ಪರಾರಿಯಾಗಲು ಯತ್ನಿಸಿದ್ದ.

ಈ ಮಾಹಿತಿ ಸಂಗ್ರಹಿಸಿದ ಪೊಲೀಸರು, ಆರೋಪಿಯನ್ನು ಮಾರ್ಗಮಧ್ಯೆ ಬಂಧಿಸಿದ್ದಾರೆ. ಜಯರಾಮ್‌, ಕುಡಿದ ಅಮಲಿನಲ್ಲಿ ಮನೆ ಬಳಿಯ ಅಂಗಡಿಯವರು ಹಾಗೂ ಇತರರಿಗೆ ತೊಂದರೆ ಕೊಡುತ್ತಿದ್ದ. ಈ ಕುರಿತು ಆತನ ವಿರುದ್ಧ ನಾಲ್ಕೈದು ದೂರುಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು. ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next