Advertisement

ದೆವ್ವ ಬಿಡಿಸುವ ನೆಪದಲ್ಲಿ ಅಪ್ರಾಪ್ತೆ ಕೊಂದವರ ಸೆರೆ

11:40 AM May 05, 2018 | |

ಬೆಂಗಳೂರು: ದೆವ್ವ ಬಿಡಿಸುವ ನೆಪದಲ್ಲಿ ಸ್ನೇಹಿತೆಯ ಪುತ್ರಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದ ತಾಯಿ, ಮಗಳು ಸೇರಿ ಒಂದೇ ಕುಟುಂಬದ ಮೂವರನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Advertisement

ವಿಜ್ಞಾನನಗರದ ಪ್ರಮೀಳಾ ಮತ್ತು ಈಕೆಯ ಪುತ್ರಿ ರಮ್ಯಾ ಹಾಗೂ ಅಪ್ರಾಪ್ತ ಪುತ್ರನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಮೇ 2ರಂದು ದೆವ್ವ ಬಿಡಿಸುವ ನೆಪದಲ್ಲಿ ಗಾಯಿತ್ರಿ ಎಂಬುವವರ 13 ವರ್ಷದ ಮಗಳು ಶರಣ್ಯ ಎಂಬಾಕೆಯನ್ನು ಹತ್ಯೆಗೈದಿದ್ದರು. ಬಳಿಕ ಸಂತ್ರಸ್ತೆ ತಾಯಿ ವಿರುದ್ಧವೇ ಕೊಲೆ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬೈಯಪ್ಪನಹಳ್ಳಿ ಮಾರುತಿ ನಗರದ ಚನ್ನಮ್ಮ ಲೇಔಟ್‌ನಲ್ಲಿ ಪುತ್ರಿ ಶರಣ್ಯ ಜತೆ ಗಾಯಿತ್ರಿ ವಾಸವಾಗಿದ್ದಾರೆ. ಗಾಯಿತ್ರಿ ಮತ್ತು ಆರೋಪಿ ಪ್ರವೀಳಾ ಮನೆ ಕೆಲಸಕ್ಕೆ ಹೋಗುತ್ತಿದ್ದು, ಇಬ್ಬರು ಸ್ನೇಹಿತರು. ಈ ಮಧ್ಯೆ ಸದಾ ಟಿವಿ, ಮೊಬೈಲ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದ ಪುತ್ರಿ ಶರಣ್ಯ ಬಗ್ಗೆ ತಾಯಿ ಗಾಯಿತ್ರಿ ಸ್ನೇಹಿತೆ ಪ್ರಮೀಳಾ ಬಳಿ ಹೇಳಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಹಿಂದೆ ಪ್ರಮೀಳಾ, ನಾನು ಆಕೆಯನ್ನು ಸರಿ ಮಾಡುತ್ತೇನೆ ಎಂದು ಮನೆಗೆ ಕರೆಸಿಕೊಂಡಿದ್ದಾಳೆ. ಬಳಿಕ ಆಕೆಯ ವರ್ತನೆಯನ್ನು ಗಮನಿಸಿ ಶರಣ್ಯ ದೇಹದಲ್ಲಿ ದೆವ್ವ ಸೇರಿಕೊಂಡಿದೆ ಎಂದು ದೊಣ್ಣೆಯಿಂದ ಹಲ್ಲೆ ನಡೆಸಿ, ವಾಪಸ್‌ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಬಳಿಕ ಹೆದರಿದ ಶರಣ್ಯ ಕೆಲ ದಿನಗಳ ಕಾಲ ಸುಮ್ಮನಿದ್ದಳು.

ಅನಂತರ ಮೇ 2ರಂದು ಗಾಯಿತ್ರಿ ಸ್ನೇಹಿತೆ ಪ್ರಮೀಳಾಗೆ ಮತ್ತೆ ಕರೆ ಮಾಡಿ ಪುತ್ರಿಯ ಬಗ್ಗೆ ಹೇಳಿಕೊಂಡಿದ್ದಾರೆ. ಆಗ ಮತ್ತೂಮ್ಮೆ ಮನೆಗೆ ಕರೆಸಿಕೊಂಡ ಪ್ರವೀಳಾ ಹಾಗೂ ಈಕೆಯ ಪುತ್ರಿ ರಮ್ಯಾ ಕಬ್ಬಿಣದ ರಾಡ್‌ ಹಾಗೂ ಇತರೆ ಮಾರಕಾಸ್ತ್ರಗಳಿಂದ ಶರಣ್ಯ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಅರೆ ಪ್ರಜ್ಞಾಸ್ಥಿತಿಯಲ್ಲಿದ್ದ ಬಾಲಕಿಯನ್ನು ಗಾಯಿತ್ರಿ ಜತೆಯೇ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಮನೆಗೆ ಹೋದ ಕೆಲವೇ ಕ್ಷಣಗಳಲ್ಲಿ ಶರಣ್ಯ ಕೊನೆಯುಸಿರೆಳೆದಿದ್ದಾಳೆ.

Advertisement

ದೇವಿ ಕೋಪವಾಗುತ್ತಾಳೆ: ಏಕಾಏಕಿ ಪುತ್ರಿ ಮೃತಪಟ್ಟಿದ್ದರಿಂದ ಆತಂಕಗೊಂಡ ಗಾಯಿತ್ರಿ ಸ್ನೇಹಿತೆ ಪ್ರಮೀಳಾಗೆ ತಿಳಿಸಿದ್ದಾಳೆ. ಆದರೆ, ಈ ವಿಚಾರವನ್ನು ಯಾವುದೇ ಕಾರಣಕ್ಕೂ ಹೊರಗಡೆ ಹೇಳಬೇಡ. ಒಂದು ವೇಳೆ ಹೇಳಿದರೆ ದೇವಿ ಕೋಪಗೊಳ್ಳುತ್ತಾಳೆ. ನಿನ್ನ ಮಗಳ ವರ್ತನೆಯಿಂದ ಕೋಪಗೊಂಡು ಆಕೆಯ ಬಲಿ ಪಡೆದುಕೊಂಡಿದ್ದಾಳೆ ಎಂದು ಪ್ರಮೀಳಾ ಬೆದರಿಕೆ ಹಾಕಿದ್ದಾಳೆ. ಇದರಿಂದ ಹೆದರಿದ ಗಾಯಿತ್ರಿ ಯಾರಿಗೂ ವಿಷಯ ತಿಳಿಸಿರಲಿಲ್ಲ.

ತಾಯಿ ವಿರುದ್ಧವೇ ದೂರು: ಇದೇ ವೇಳೆ ಕೊಲೆ ಆರೋಪ ತನ್ನ ಮೇಲೆ ಬರುತ್ತದೆ ಎಂದು ಹೆದರಿದ ಪ್ರಮೀಳಾ, ಕೂಡಲೇ ಠಾಣೆಗೆ ಹೋಗಿ ಗಾಯಿತ್ರಿ ವಿರುದ್ಧವೇ ಪುತ್ರಿ ಕೊಂದ ಆರೋಪದ ದೂರು ನೀಡಿದ್ದಾರೆ. ಈ ಸಂಬಂಧ ಶರಣ್ಯ ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಗಾಯಿತ್ರಿ ಗೊಂದಲದ ಹೇಳಿಕೆ ನೀಡಿದ್ದಾರೆ.

ಜತೆಗೆ ಗಾಯಿತ್ರಿ ಮನೆ ಪರಿಶೀಲಿಸಿದಾಗ ಹಲ್ಲೆಯ ಯಾವುದೇ ಕುರುಹು ಪತ್ತೆಯಾಗುವುದಿಲ್ಲ. ಕೊನೆಗೆ ದೆವ್ವದ ವಿಚಾರ ಬಂದಾಗ ಪ್ರಮೀಳಾ ಹೆಸರನ್ನು ಗಾಯಿತ್ರಿ ಹೇಳಿದ್ದರು. ಈ ಸಂಬಂಧ ಪ್ರವೀಳಾ ಮೇಲೆ ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next