ಬೆಂಗಳೂರು: ಹಣಕಾಸಿನ ವಿಚಾರವಾಗಿ ಪರಿಚಿತ ವ್ಯಕ್ತಿಯನ್ನು ಜೈಲಿಗೆ ಕಳುಹಿಸಲು ಹಾಗೂ ತನ್ನ ಪತ್ನಿಯನ್ನು ವೇಶ್ಯಾವಾಟಿಕೆ ದಂಧೆಗೆ ದೂಡುವ ಉದ್ದೇಶದಿಂದ ಆಕೆಯನ್ನೇ ಅಪಹರಿಸಿ ನಾಪತ್ತೆ ಪ್ರಕರಣ ದಾಖಲಿಸಿದ ಯುವಕನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.
ಪಶ್ಚಿಮ ಬಂಗಾಳ ಮೂಲದ ಮೊಹಮದ್ ಸಮೀಮ್ ಜಮಾಲ್ (23) ಬಂಧಿತ. ಇದೇ ವೇಳೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಪಾಯಲ್ ಎಂಬಾಕೆಯನ್ನು ಬಂಧಿಸಲಾಗಿದೆ. ಆರೋಪಿ ಪರಿಚಿತ ಹುಸೇನ್ ಎಂಬಾತನನ್ನು ಜೈಲಿಗೆ ಕಳುಹಿಸಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸಮೀಮ್ ಜಮಾಲ್ ಶಿವಾಜಿನಗರದಲ್ಲಿ ಎಂಬ್ರಾಯಡರಿ ಕೆಲಸ ಮಾಡಿಕೊಂಡಿದ್ದು, ಮಡಿವಾಳದ ಮಾರುತಿ ನಗರದಲ್ಲಿ ಎರಡನೇ ಪತ್ನಿ ಅನಿಸಾಳ ಜತೆ ವಾಸವಾಗಿದ್ದ. ಈ ಮಧ್ಯೆ ಎರಡು ತಿಂಗಳ ಹಿಂದಷ್ಟೇ ಶಿವಾಜಿನಗರದಲ್ಲಿ ಟೈಲರಿಂಗ್ ಕೆಲಸ ಮಾಡುವ ಹುಸೇನ್ ಎಂಬಾತನನ್ನು ಪರಿಚಯಿಸಿಕೊಂಡಿದ್ದ ಆರೋಪಿ, ಈತನಿಂದ 10ಸಾವಿರ ರೂ. ಸಾಲ ಪಡೆದಿದ್ದ. ಆದರೆ, ವಾಪಸ್ ಕೊಟ್ಟಿರಲಿಲ್ಲ. ಹೀಗಾಗಿ ಇಬ್ಬರ ನಡುವೆ ಜಗಳ ನಡೆದಿತ್ತು.
ಇದರಿಂದ ಆಕ್ರೋಶಗೊಂಡ ಆರೋಪಿ, ಹುಸೇನ್‌ನನ್ನು ಜೈಲಿಗೆ ಕಳುಹಿಸಲು ಸಂಚು ರೂಪಿಸಿದ್ದ. ಅದರಂತೆ ತನ್ನ ಸ್ನೇಹಿತೆ, ವೇಶ್ಯಾವಾಟಿಕೆ ದಂಧೆ ನಡೆಸುವ ಪಾಯಲ್ ಜತೆ ಸೇರಿ 2ನೇ ಪತ್ನಿ ಅನಿಸಾಳನ್ನು ಮಡಿವಾಳದ ಲಾಡ್ಜ್ವೊಂದರಲ್ಲಿ ಕೂಡಿ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲೇ ಪತ್ನಿ ಜತೆ ಹೋಗಿ ದೂರು: ಸಂಚಿನಂತೆ ಆರೋಪಿ ಮೊಹಮ್ಮದ್ ಆ.16ರಂದು ಮೊದಲ ಪತ್ನಿ ಹಾಗೂ ಪುತ್ರನ ಜತೆ ಹೋಗಿ ಮಡಿವಾಳ ಠಾಣೆಯಲ್ಲಿ ತನ್ನ ಪತ್ನಿ ಅನಿಸಾಳನ್ನು ಶಿವಾಜಿನಗರದ ಹುಸೇನ್ ಎಂಬಾತ ಅಪಹರಣ ಮಾಡಿದ್ದು, 1ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ ಎಂದು ಪ್ರಕರಣ ದಾಖಲಿಸಿದ್ದ. ಈ ವೇಳೆ ಮೊದಲ ಪತ್ನಿಯನ್ನು ತನ್ನ ಸಹೋದರಿ ಎಂದು ಸುಳ್ಳು ಹೇಳಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಸೇನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆಲ ಮಾಹಿತಿ ಪತ್ತೆಯಾಗಿತ್ತು. ಬಳಿಕ ಆರೋಪಿಯನ್ನು ಕರೆದು ತೀವ್ರ ವಿಚಾರಣೆ ನಡೆಸಿದಾಗ ವಿಷಯ ಬಹಿರಂಗವಾಗಿದೆ.
ಪತ್ನಿಯನ್ನು ವೇಶ್ಯಾವಾಟಿಕೆಗೆ ದೂಡುವ ಯತ್ನ: ಆರೋಪಿ ಮೊಹಮ್ಮದ್ ಸಮೀಮ್ ಈಗಾಗಲೇ ಮದುವೆಯಾಗಿದ್ದು, ಒಂದು ಮಗುವಿದೆ. ಆದರೂ ಆರೋಪಿ ಅನಿಸಾಳನ್ನು 2ನೇ ವಿವಾಹವಾಗಿದ್ದ. ಈಕೆಯನ್ನು ಸ್ನೇಹಿತೆ ಪಾಯಲ್ ಜತೆ ಸೇರಿಕೊಂಡು ದಂಧೆಗೆ ದೂಡಿ ಹೆಚ್ಚು ಹಣ ಸಂಪಾದಿಸಲು ಆರೋಪಿ ನಿರ್ಧರಿಸಿದ್ದ. ಮತ್ತೂಂದೆಡೆ ಹುಸೇನ್‌ನನ್ನು ಜೈಲಿಗೆ ಕಳುಹಿಸಲು ಸಂಚು ರೂಪಿಸಿದ್ದ ಆರೋಪಿ ಅನಿಸಾಗಳಿಗೆ ಸುಳ್ಳು ಹೇಳಿ ಮಡಿವಾಳದ ಲಾಡ್ಜ್ವೊಂದರಲ್ಲಿ ಪಾಯಲ್ ಜತೆ ಇರಿಸಿದ್ದ. ಆದರೆ, ಪತಿಯ ಈ ವಿಚಾರ ಅನಿಸಾಗೆ ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದರು.