Advertisement

ಕಾಂಗ್ರೆಸ್ ಶಾಸಕಿ ಕೀಳುಮಟ್ಟದ ವರ್ತನೆ ಖಂಡನೀಯ –ಕ್ಯಾಪ್ಟನ್ ಕಾರ್ಣಿಕ್ ಖಂಡನೆ

10:39 PM Jan 20, 2021 | Team Udayavani |

ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ರಾಮಲಿಂಗಾರೆಡ್ಡಿ ಅವರ ಮಗಳು, ಶಾಸಕಿ ಸೌಮ್ಯ ರೆಡ್ಡಿ, ಇವತ್ತು ನಡೆದ ಕಾಂಗ್ರೆಸ್ ಪಕ್ಷದ ನಾಟಕೀಯ ಪ್ರತಿಭಟನೆ ಸಂದರ್ಭದಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಸುವ ಕೀಳು ಮಟ್ಟದ ವರ್ತನೆಯನ್ನು ತೋರಿದ್ದಾರೆ. ಇದು ಖಂಡನೀಯ ವಿಷಯ ಎಂದು, ಭಾರತೀಯ ಜನತಾ ಪಕ್ಷದ ರಾಜ್ಯ ವಕ್ತಾರರು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರೂ ಆದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.

Advertisement

ಮಲ್ಲೇಶ್ವರಂನ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಹಿಳಾ ಪೊಲೀಸ್ ಕಾನ್‍ಸ್ಟೆಬಲ್ ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧ, ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿಯವರು ತಮ್ಮ ಮಗಳ ವರ್ತನೆ ಬಗ್ಗೆ ವಿವರಣೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ನಿಮ್ಮ ಮಗಳಿಗೆ ನೀವು ಇದೇರೀತಿಯ ತರಬೇತಿ ನೀಡಿದ್ದೀರಾ ಎಂದು ರಾಮಲಿಂಗಾರೆಡ್ಡಿ ಅವರನ್ನು ಪ್ರಶ್ನಿಸಿದ ಕ್ಯಾಪ್ಟನ್ ಕಾರ್ಣಿಕ್ ಶಾಸಕಿ ಸೌಮ್ಯರೆಡ್ಡಿ ರಾಜ್ಯದ ಜನತೆಯ ಮತ್ತು ಪೊಲೀಸರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರದ ಕೃಷಿ ಸುಧಾರಣಾ ಮಸೂದೆಗಳ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ರೈತ ಮೋರ್ಚಾದ ರಾಜ್ಯಾಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರೂ ಅದ ಶ್ರೀ ಈರಣ್ಣ ಕಡಾಡಿ ಅವರು ಆಕ್ಷೇಪಿಸಿದರು.

2019ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕೃಷಿ ಸುಧಾರಣಾ ಮಸೂದೆಗಳ ಜಾರಿ ಬಗ್ಗೆ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಈಗ ಮಸೂದೆಗಳನ್ನು ವಿರೋಧ ಮಾಡುತ್ತಿರುವುದೇಕೆ ಎಂದು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು. ರೈತರ ಉತ್ಪನ್ನಕ್ಕೆ ಸ್ಪರ್ಧಾತ್ಮಕ ಬೆಲೆ ಕೊಡುವ ಉದ್ದೇಶದಿಂದ ಈ ಮಸೂದೆಗಳನ್ನು ಜಾರಿಗೊಳಿಸಲಾಗಿದೆ ಎಂಬುದು ಕಾಂಗ್ರೆಸ್ ನಾಯಕರಿಗೆ ಗೊತ್ತಿದ್ದರೂ ರಸ್ತೆಯಲ್ಲಿ ದೊಂಬರಾಟ ಮಾಡುತ್ತಿದ್ದಾರೆ ಎಂದರು.

Advertisement

ಮಸೂದೆಗಳನ್ನು ಏಕಾಏಕಿ ಜಾರಿಗೊಳಿಸಿಲ್ಲ. ಕಾಂಗ್ರೆಸ್ ಪಕ್ಷವು ಈ ವಿಚಾರದಲ್ಲಿ ದ್ವಿಮುಖ ನೀತಿಯನ್ನು ಪ್ರದರ್ಶಿಸುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮುಗ್ಧ ರೈತರನ್ನು ಬಳಸಿಕೊಂಡು ನಾಟಕೀಯ ಪ್ರತಿಭಟನೆ ಮಾಡಲಾಗುತ್ತಿದೆ. ತಜ್ಞರ ವರದಿಯನ್ನು ಪರಿಗಣಿಸಿ ಕೇಂದ್ರ ಸರಕಾರವು ಮಸೂದೆಗಳನ್ನು ಜಾರಿಗೊಳಿಸಿದೆ. ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಮಾಧ್ಯಮ ವಿಭಾಗದ ರಾಜ್ಯ ಸಂಚಾಲಕರಾದ ಶ್ರೀ ಕರುಣಾಕರ ಖಾಸಲೆ ಅವರು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next