ಬೆಂಗಳೂರು: ಕೋವಿಡ್ ಮಹಾಸಂಕಟದಿಂದಾಗಿ ದೇಶ ಮತ್ತು ಜಗತ್ತು ತೀವ್ರ ಸಂಕಟವನ್ನು ಅನುಭವಿಸುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುವುದನ್ನು ಮರೆತ ಕಾಂಗ್ರೆಸ್, ಕಲಾಪವನ್ನು ಧಿಕ್ಕರಿಸಿ, ಯಾವುದೇ ಚರ್ಚೆ ನಡೆಯದಂತೆ ತಡೆಯೊಡ್ಡಿ, ಸಭ್ಯತೆಯ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಸದನದೊಳಗೆ ದಾಂಧಲೆ ನಡೆಸಿ, ಮೇಜು ಹತ್ತಿ ಕಾರ್ಯ ಕಲಾಪದ ನಿಯಮಾವಳಿಯ ಪುಸ್ತಕವನ್ನು ಪೀಠದತ್ತ ತೂರಿ ತನ್ನ ಗೂಂಡಾಗಿರಿ ಪ್ರವೃತ್ತಿಯನ್ನು ದೇಶಕ್ಕೆ ಪರಿಚಯಿಸಿರುವ ಸಂದರ್ಭದಲ್ಲಿ ಮಾನ್ಯ ಸಂಸದರಾದ ಎಲ್.ಹನುಮಂತಯ್ಯ ಮತ್ತು ವಿಧಾನಪರಿಷತ್ತಿನ ಸದಸ್ಯರಾದ ಬಿ.ಕೆ.ಹರಿಪ್ರಸಾದ್‍ರವರ ಪತ್ರಿಕಾಗೋಷ್ಠಿಯ ಹೇಳಿಕೆಗಳು “ದೆವ್ವದ ಬಾಯಿಂದ ಬೈಬಲ್ ನುಡಿದಂತಾಗಿದೆ” ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ತಿಳಿಸಿದ್ದಾರೆ.
ಸಂಸದೀಯ ಸಭೆಗಳಲ್ಲಿ ಸಮಕಾಲೀನ ಸಮಸ್ಯೆಗಳ ಕುರಿತು ಆರೋಗ್ಯಪೂರ್ಣ ಚರ್ಚೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಸಿದ್ಧಾಂತ ಎನ್ನುವುದನ್ನು ಈ ದೇಶವನ್ನು ದೀರ್ಘ ಕಾಲ ಆಳಿದ, ಸಂಸದೀಯ ನಡವಳಿಕೆಗಳ ಬಗ್ಗೆ ಅಪಾರ ಅನುಭವ ಇರುವ ಇಂದಿನ ಕಾಂಗ್ರೆಸ್ ಸಮರ್ಥ ನಾಯಕತ್ವದ ಕೊರತೆಯಿಂದ ಮರೆತಿದ್ದು, ತನ್ನ ಹೊಣೆಗೇಡಿತನದ ನಡವಳಿಕೆಯಿಂದ ನಗೆಪಾಟಲಿಗೀಡಾಗಿದೆ ಎಂದು ತಿಳಿಸಿದ್ದಾರೆ.
ಇದೇ ಕಾಂಗ್ರೆಸ್ ಪಕ್ಷ ತಾನು ಆಡಳಿತ ನಡೆಸುವ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಿರುವ ಕೃಷಿ ಮಸೂದೆಯ ಬದಲಾವಣೆಗಳನ್ನು ಮತ್ತು ಸಂಸತ್ತಿನ ಜಂಟಿ ಸಮಿತಿಯ ವರದಿಯನ್ನು ಆಧರಿಸಿ ಸ್ವಾಮಿನಾಥನ್ ವರದಿಯನ್ನು ಪರಿಗಣಿಸಿ ಸಂಸತ್ತಿನಲ್ಲಿ ಅನುಮೋದನೆಗೊಂಡ ಶಾಸನವನ್ನು ಧೂರ್ತ ರಾಜಕಾರಣಕ್ಕಾಗಿ ಪ್ರತಿಭಟಿಸುವ ಷಡ್ಯಂತ್ರವನ್ನು ಈ ದೇಶದ ಬೆನ್ನೆಲುಬಾಗಿರುವ ಕೃಷಿಕರು ಅರ್ಥೈಸಿಕೊಂಡಿರುವುದರಿಂದಲೇ ಪ್ರಾಮಾಣಿಕ ಕೃಷಿಕರಿಂದ ದೇಶದಾದ್ಯಂತ ಯಾವುದೇ ಬೆಂಬಲ ಸಿಗದಿರುವುದನ್ನು ರಾಜಕಾರಣದಲ್ಲಿ ಅತಿಥಿ ಕಲಾವಿದರಾದ ಎಲ್.ಹನುಮಂತಯ್ಯ ಮತ್ತು ಬಿ.ಕೆ.ಹರಿಪ್ರಸಾದ್‍ರವರು ಅರ್ಥ ಮಾಡಿಕೊಳ್ಳುತ್ತಾರೆಂದು ಭಾವಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ :ಕೋವಿಡ್: ರಾಜ್ಯದಲ್ಲಿಂದು 1365 ಪಾಸಿಟಿವ್ ಪ್ರಕರಣ ಪತ್ತೆ ;1558 ಸೋಂಕಿತರು ಗುಣಮುಖ
ಪೆಗಾಸಿಸ್ ಸ್ಪೈವೇರ್ ಕುರಿತಾಗಿ ಈಗಾಗಲೇ ಸುಪ್ರೀಂ ಕೋರ್ಟ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, “ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ” ಎನ್ನುವಂತೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವಾಗ ಮಾಡಿರುವ ಕದ್ದಾಲಿಕೆ ಮತ್ತು ಗೂಢಚರ್ಯದ ಆರೋಪವನ್ನು ಮಾಡುತ್ತಿರುವುದು ಒಂದು ದೊಡ್ಡ ವಿಡಂಬನೆಯಾಗಿದ್ದು, “ಕೋತಿ ತಾನು ತಿಂದು ಮೇಕೆಯ ಮೂತಿಗೆ ಒರೆಸಿದಂತಿದೆ” ಎಂದು ತಿಳಿಸಿದ್ದಾರೆ.
ಈ ದೇಶದಲ್ಲಿ ವಾಕ್‍ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಕಿತ್ತುಕೊಂಡು, ಬಲಾತ್ಕಾರದ ನಸ್‍ಬಂದಿ ನಡೆಸಿ, ಲಕ್ಷಾಂತರ ನಿರಪರಾಧಿಗಳನ್ನು ಬಂಧಿಸಿ ನಡೆಸಿರುವ ದೌರ್ಜನ್ಯ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿರುವ ಸರ್ವಾಧಿಕಾರಿ ಧೋರಣೆಯ ಕಾಂಗ್ರೆಸ್‍ನ ಮುಖಂಡರು, ಮಿಲಿಟರಿ ಸರಕಾರದ ಕುರಿತಾಗಿ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಸರಕಾರವನ್ನು ಟೀಕಿಸುವ ಮೊದಲು ಕಳೆದ ಅನೇಕ ವರ್ಷಗಳಿಂದ ನಿಮ್ಮ ಪಕ್ಷದ ಅಧ್ಯಕ್ಷರ ಆಯ್ಕೆ ಕುರಿತಾದ ನಿರ್ಣಯ ಕೈಗೊಳ್ಳಲು ವಿಫಲವಾಗಿರುವ ಕಾಂಗ್ರೆಸ್, ಕೇವಲ ಒಂದು ಕುಟುಂಬದ ನಾಯಕತ್ವದಲ್ಲಿ ಸೊರಗುತ್ತಿರುವ ಸಂದರ್ಭದಲ್ಲಿ ಜಿ-23 ನಾಯಕರು ಸಮಯೋಚಿತವಾಗಿ ಮಾಡಿದ ಸಲಹೆಗಳನ್ನು ಪರಿಗಣಿಸದೆ ಅವರುಗಳನ್ನೇ ಮೂಲೆಗುಂಪಾಗಿಸಿರುವ ನಿಮ್ಮ ಪಕ್ಷದೊಳಗಿನ ಮಿಲಿಟರಿ ಧೋರಣೆಯನ್ನು ಸರಿಪಡಿಸುವುದು ಹೆಚ್ಚು ಸೂಕ್ತ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ತಿಳಿಸಿದ್ದಾರೆ.
ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲದಿರುವ ಕಾಂಗ್ರೆಸ್ಸಿಗರು ತಮ್ಮ ತಟ್ಟೆಯಲ್ಲಿ ಸತ್ತು ಬಿದ್ದಿರುವ ಹೆಗ್ಗಣವನ್ನು ಮರೆತಂತೆ ವರ್ತಿಸುತ್ತಿರುವುದು ದೊಡ್ಡ ರಾಜಕೀಯ ದುರಂತ ಎಂದು ತಿಳಿಸಿದ್ದಾರೆ.