Advertisement

ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಬೀಳ್ಕೊಡುಗೆ

10:45 AM Oct 29, 2020 | sudhir |

ಮೈಸೂರು: 2020ನೇ ಸಾಲಿನ ದಸರಾ ಜಂಬೂ ಸವಾರಿಯನ್ನು ಯಶಸ್ವಿಯಾಗಿ ಪೂರೈಸಿದ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ಗಜಪಡೆಗೆ ಬುಧವಾರ ಅರಮನೆ ಅಂಗಳದಲ್ಲಿ ಬೀಳ್ಕೊಡಲಾಯಿತು. ಕಳೆದೊಂದು ತಿಂಗಳಿನಿಂದ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ದಸರಾ ಆನೆಗಳೊಂದಿಗೆ, ಮಾವುತರು ಮತ್ತು ಕಾವಾಡಿಗಳು ನಾಡಿನಿಂದ ಮತ್ತೆ ಕಾಡಿನತ್ತ ಪಯಣ ಬೆಳೆಸಿದರು.
ಅಂಬಾರಿ ಆನೆ ಅಭಿಮನ್ಯು ಮತ್ತಿಗೋಡು ಶಿಬಿರಕ್ಕೆ, ಕಾವೇರಿ, ವಿಕ್ರಮ, ಗೋಪಿ ಆನೆಗಳು ದುಬಾರೆ ಶಿಬಿರಕ್ಕೆ ಹಾಗೂ ವಿಜಯಾ ಆನೆಕಾಡು ಶಿಬಿರಕ್ಕೆ ಹೊರಟವು. ಈ ಬಾರಿ ಒಂದೇ ತಂಡದಲ್ಲಿ ಮೈಸೂರಿಗೆ ಆಗಮಿಸಿದ್ದ 5 ಆನೆಗಳನ್ನು ಪ್ರತ್ಯೇಕ 5 ಲಾರಿಯಲ್ಲಿ ರವಾನಿಸಲಾಯಿತು. ಸಾರ್ವಜನಿಕರಿಗೆ ಅರಮನೆಯೊಳಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

Advertisement

ಹೀಗಾಗಿ ಅರಮನೆ ಆವರಣದಿಂದ ಹೊರಟ ಆನೆಗಳನ್ನು ರಸ್ತೆಯಲ್ಲಿ ನಿಂತಿದ್ದ ಜನರು ಕಂಡು ಜೈಕಾರ ಕೂಗಿ ಹರ್ಷ ವ್ಯಕ್ತಪಡಿಸಿದರು.

ಅಧಿಕಾರಿಗಳಿಂದ ಪೂಜೆ: ದಸರಾ ಜಂಬೂ ಸವಾರಿ ಯಶಸ್ವಿಗೊಳಿಸಿದ ಗಜಪಡೆಗೆ ಅರಮನೆ ಆವರಣದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು. ಅರಣ್ಯಾಧಿಕಾರಿಗಳು ಹಾಗೂ ಅರಮನೆ ಮಂಡಳಿ ಅಧಿಕಾರಿಗಳು ಆನೆಗಳ
ಪಾದಗಳನ್ನು ತೊಳೆದು ಪೂಜಿಸಿ, ಬೂದುಗುಂಬಳ ಒಡೆದು ದೃಷ್ಟಿ ತೆಗೆದರು. ನಂತರ ಎಲ್ಲಾ ಆನೆಗಳಿಗೂ ವಿವಿಧ ಹಣ್ಣು, ಕಬ್ಬು ತಿನ್ನಿಸಿದರು. ಇದಕ್ಕೂ ಮುನ್ನ ಮಾವುತರು ಹಾಗೂ ಕಾವಾಡಿಗಳಿಗೆ ಉಪಾಹಾರ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಈ ವೇಳೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಡಿಸಿಎಫ್ ಅಲೆಗ್ಸಾಂಡರ್, ಅರಮನೆ ಭದ್ರತೆ ಎಸಿಪಿ ಚಂದ್ರಶೇಖರ್‌, ಪಶುವೈದ್ಯ ಡಾ.ನಾಗರಾಜು ಇದ್ದರು.

ಇದನ್ನೂ ಓದಿ:ಮೈಸೂರು ನಿವೃತ್ತ ಪ್ರಾಂಶುಪಾಲ ಹತ್ಯೆ ಪ್ರಕರಣ : ಸುಪಾರಿ ಹಂತಕರು ಸೇರಿ ಐವರ ಬಂಧನ

ಆನೆ ಶಿಬಿರಗಳಿಗೆ ಮರಳಿದ ಮಾವುತರು, ವಿಶೇಷ ಮಾವುತರು, ಕಾವಾಡಿಗಳಿಗೆ ಅರಣ್ಯ ಇಲಾಖೆ ವತಿಯಿಂದ ತಲಾ 2.5 ಸಾವಿರ ರೂ. ನಗದು, 25 ಕೆ.ಜಿ.ಅಕ್ಕಿ, ಒಂದು ಬಾಕ್ಸ್‌ ತಿನಿಸು ನೀಡಲಾಯಿತು.

Advertisement

ಅರಮನೆ ಅಂಗಳದಲ್ಲಿ ಯದುವೀರ್‌ ಸುತ್ತಾಟ
ನವರಾತ್ರಿ ಹಾಗೂ ದಸರಾ ಹಬ್ಬದ ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನರಾಗಿದ್ದ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಬುಧವಾರ ತಮ್ಮ ಪುತ್ರ ಆದ್ಯವೀರ್‌ ಜತೆ ಅರಮನೆ ಆವರಣದಲ್ಲಿ ಕಾರಿನಲ್ಲಿ ಸುತ್ತಾಡಿದರು.
ಮೊದಲು ಅರಮನೆಯ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಯದುವೀರ್‌ ನಂತರ ಗಜಪಡೆ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಆಗಮಿಸಿದರು. ಗಜಪಡೆ ಬೀಳ್ಕೊಡುಗೆ ಸಮಾರಂಭದಲ್ಲಿ ಇದೇ ಮೊದಲ ಬಾರಿಗೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಭಾಗವಹಿಸಿ ಗಮನ ಸೆಳೆದರು. ನಂತರ ಅಭಿಮನ್ಯು ನೇತೃತ್ವದ ದಸರಾ ಆನೆಗಳನ್ನು ಕಾಡಿಗೆ ಕಳುಹಿಸಲು ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಈ ವೇಳೆ ಗಜಪಡೆಯ ನಾಯಕ ಅಭಿಮನ್ಯು ಜೊತೆ ಯದುವೀರ್‌ ಮಗನೊಂದಿಗೆ ಫೋಟೋ ತೆಗೆಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next