ನವದೆಹಲಿ: ಭಾರತೀಯ ಸೇನೆಯ ಏವಿಯೇಷನ್ ವಿಭಾಗಕ್ಕೆ ಕ್ಯಾಪ್ಟನ್ ಅಭಿಲಾಷಾ ಬರಕ್ ಯುದ್ಧ ವಿಮಾನ ಪೈಲೆಟ್ ಆಗಿ ನೇಮಕವಾಗಿದ್ದಾರೆ. ಇದೇ ಮೊದಲನೇ ಬಾರಿಗೆ ಮಹಿಳೆಯೊಬ್ಬರು ಆರ್ಮಿ ಏವಿಯೇಷನ್‌ನ ಪೈಲಟ್ ಆಗಿದ್ದು, ಇದನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನವೆಂದು ಸೇನೆ ಹೇಳಿದೆ.
15 ಮಹಿಳೆಯರು ಆರ್ಮಿ ಏವಿಯೇಷನ್ ಸೇರುವುದಕ್ಕೆಂದು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಕೇವಲ ಇಬ್ಬರು ಪ್ರವೇಶ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಅವರಿಬ್ಬರೂ ನಾಸಿಕ್‌ನಲ್ಲಿರುವ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದಾರೆ.
ಅಭಿಲಾಷಾ ಜತೆ ಒಟ್ಟು 36 ಪೈಲೆಟ್‌ಗಳು ತರಬೇತಿ ಸಂಪೂರ್ಣಗೊಳಿಸಿದ್ದು, ಅವರಿಗೆ ಬುಧವಾರ ವಿಂಗ್ ಪ್ರಧಾನಿಸಲಾಗಿದೆ. ಆರ್ಮಿ ಏವಿಯೇಷನ್‌ನ ಮಹಾ ನಿರ್ದೇಶಕರು ಹಾಗೂ ಕರ್ನಲ್ ಕಮಾಂಡೆಂಟ್ ವಿಂಗ್ ಪ್ರಧಾನ ಮಾಡಿದ್ದಾರೆ.
ಈ ಕಾರ್ಯಕ್ರಮದ ಫೋಟೋಗಳನ್ನು ಆರ್ಮಿ ಏವಿಯೇಷನ್ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, “ಇದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಯುವ ಪೈಲೆಟ್‌ಗಳು ತಮ್ಮ ರೆಕ್ಕೆಯನ್ನು ಬಿಚ್ಚಲು ಸಿದ್ಧರಾಗಿದ್ದಾರೆ’ ಎಂದು ಬರೆದುಕೊಂಡಿದೆ.