Advertisement
ತಾಲೂಕಿನ ಪಿಂಡಿಗನಗರ ಗ್ರಾಮದ ರೈತ ವೆಂಕಟೇಶ್ ತನ್ನ ಎರಡು ಎಕರೆ ಜಮೀನಿನಲ್ಲಿ 8 ಲಕ್ಷ ರೂ. ಖರ್ಚು ಮಾಡಿ ಗ್ರೀನ್‌ಹೌಸ್‌ನಲ್ಲಿ ಕ್ಯಾಪ್ಸಿಕಂ ಬೆಳೆದಿದ್ದಾರೆ. ಎರಡೂವರೆ ತಿಂಗಳಿನಿಂದ ಫಸಲು ಸಿಗುತ್ತಿದೆ. ನಾಲ್ಕು ಕೊಯ್ಲು ಮಾಡಿ 1.5 ಲಕ್ಷ ರೂ. ಗಳಿಸಿದ್ದಾರೆ. ಅಷ್ಟರಲ್ಲಿ ಲಾಕ್‌ಡೌನ್ ಆದ ಕಾರಣ ಬೆಳೆ ಸಾಗಿಸಲಾಗದೇ, ಬೆಲೆಯೂ ಇಲ್ಲದೆ ಬೆಳೆ ತೋಟದಲ್ಲೇ ಉಳಿದಿದೆ.ಸದ್ಯ ಕೂಲಿಗೆ 50 ಸಾವಿರ ರೂ., ಕ್ಯಾಪ್ಸಿಕಂ ಸಾಗಾಣಿಕೆಗೆ 26 ಸಾವಿರ ರೂ.ನಲ್ಲಿ 500 ಕಾಟನ್ ಬಾಕ್ಸ್‌ಗಳನ್ನು ಖರೀದಿ ಮಾಡಿದ್ದಾರೆ. ಈ ಬೆಳೆಗೆ ಹೊರಗಡೆಯಿಂದ ಕೈಸಾಲವಾಗಿ 6 ಲಕ್ಷ ರೂ. ಪಡೆದುಕೊಂಡಿದ್ದು, ಒಟ್ಟಾರೆ ಬೆಳೆ ಇಡಲು 8 ಲಕ್ಷ ರೂ. ಖರ್ಚು ಮಾಡಿದ್ದಾರೆ. ಸದ್ಯ ಕೈಗೆ 1 ಲಕ್ಷ ರೂ. ಸಿಕ್ಕಿದೆ ಎನ್ನುತ್ತಾರೆ ರೈತ ವೆಂಕಟೇಶ್. ಒಂದು ಸಲ ಕಾಯಿ ಕೀಳಬೇಕಾದರೆ ಕೂಲಿ, ಆಟೋ ಬಾಡಿಗೆ 10 ಸಾವಿರ ರೂ. ಆಗುತ್ತದೆ. ಮಾರುಕಟ್ಟೆಯಲ್ಲಿ ಕೆ.ಜಿ.ಗೆ 5 ರೂ.ನಿಂದ 6 ರೂ. ಬೆಲೆ ಇದೆ. ಕೋಲಾರ ಎಪಿಎಂಸಿಯಲ್ಲಿ ಕೆ.ಜಿಗೆ 5 ರಿಂದ 6 ರೂ. ಬೆಲೆ ಇದೆ. ಚೆನ್ನೈನಲ್ಲಿ 7 ರಿಂದ 10 ರೂ. ಇದೆ. ಚೆನ್ನೈಗೆ ಸಾಗಾಣಿಕೆ ಮಾಡಲು ಒಂದು ಬಾಕ್ಸ್‌ಗೆ 75 ರೂ. ಕೊಡಬೇಕಾಗಿದೆ. ಒಮ್ಮೆ 120 ರಿಂದ 130 ಬಾಕ್ಸ್‌ಗಳ ಕ್ಯಾಪ್ಸಿಕಂ ಮಾರುಕಟ್ಟೆಗೆ ಸಾಗಿಸಿದರೆ ಸಾಗಾಣಿಕೆ, ಕೂಲಿ, ಬಾಡಿಗೆ, ಔಷಧಿ ಖರ್ಚು ಲೆಕ್ಕ ಹಾಕಿದ್ರೆ ಆದಾಯಕ್ಕಿಂತ ಹೆಚ್ಚಾಗುತ್ತದೆ. ಹೀಗಾಗಿ ತಿಂಗಳಿನಿಂದ ಕಾಯಿ ಕೀಳದೇ ತೋಟದಲ್ಲಿ ಬಿಟ್ಟಿದ್ದೇನೆ ಎನ್ನುತ್ತಾರೆ ವೆಂಕಟೇಶ್. ಸಾಲ ಮಾಡಿ ಬೆಳೆ ಬೆಳೆದ ರೈತನ ನೆರವಿಗೆ ಸರ್ಕಾರ, ಜನಪ್ರತಿನಿಧಿಗಳಾದ್ರೂ ಬರಬೇಕಿದೆ.