Advertisement

ಚರ್ಮಗಂಟು ರೋಗ ತಡೆಗಟ್ಟಲು ಜಾನುವಾರು ಸಂತೆ-ಸಾಗಾಣಿಕೆ ನಿಷೇಧ: ಪ್ರಭು ಚವ್ಹಾಣ್

05:33 PM Oct 13, 2022 | Team Udayavani |

ಬೆಂಗಳೂರು: ಇತ್ತಿಚೀನ ದಿನಗಳಲ್ಲಿ ರಾಸುಗಳಲ್ಲಿ ಕಾಣಿಸಿಕೊಳ್ಳುತ್ತಿರುವ   ಚರ್ಮಗಂಟು ರೋಗ ತಡೆಗಟ್ಟಲು ರೋಗ ಪತ್ತೆಯಾದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾನುವಾರು ಸಂತೆ ಮತ್ತು ಜಾನುವಾರು ಸಾಗಾಣಿಕೆಗೆ ನಿಷೇಧ ಹೇರಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ತಿಳಿಸಿದ್ದಾರೆ.

Advertisement

ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಚರ್ಮಗಂಟು ರೋಗ ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಜಾನುವಾರು ಜಾತ್ರೆ, ಜಾನುವಾರು ಸಂತೆ ‌ಮತ್ತು ಸಾಗಾಣಿಕೆಯನ್ನು ನಿಷೇಧಿಸಲು ಆಯಾ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಚರ್ಮಗಂಟು ರೋಗಕ್ಕೆ ಕ್ಯಾಪ್ರಿಪಾಕ್ಸ್ ಹೆಸರಿನ ವೈರಾಣು ಮುಖ್ಯ ಕಾರಣ. ಈ ವೈರಾಣುವಿನ ಜೀವಂತ ಲಸಿಕೆಯನ್ನೇ ಪ್ರತಿರೋಧಕ ಔಷಧವಾಗಿ ನೀಡಲಾಗುತ್ತಿದೆ. ಒಂದು ವೇಳೆ ಈಗಾಗಲೇ ಜಾನುವಾರು ರೋಗದಿಂದ ಬಳಲುತ್ತಿದ್ದರೆ ಸೂಕ್ತ ಚಿಕಿತ್ಸೆ ಜತೆಗೆ ಔಷಧ-ಆರೈಕೆ ಸಿಗಬೇಕು. ಆರೋಗ್ಯವಂತ ಜಾನುವಾರುಗಳಿಗೆ ಲಸಿಕೆ ನೀಡಬೇಕು. ಲಸಿಕೆ ಪಡೆದ ಜಾನುವಾರುಗಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಮುಂಜಾಗ್ರತಾ ಕ್ರಮಗಳನ್ನು ಜಾನುವಾರು ಮಾಲೀಕರು ಅನುಸರಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.

ರೋಗ ಕಾಣಿಸಿಕೊಂಡ ಪ್ರದೇಶ ಹಾಗೂ ಸುತ್ತಮುತ್ತಲಿನ 5 ಕಿ.ಮೀ ಪ್ರದೇಶ ವ್ಯಾಪ್ತಿಯಲ್ಲಿ ಲಸಿಕೆ ನೀಡಲಾಗುತ್ತಿದೆ. ರೋಗಪೀಡಿತ ರಾಸುಗಳಿಂದ ಆರೋಗ್ಯವಂತ ರಾಸುಗಳನ್ನು ಬೇರ್ಪಡಿಸಿ, ಕೂಡಲೇ ಸ್ಥಳೀಯ ಪಶು ವೈದ್ಯರು ಇಲ್ಲವೇ ಸಹಾಯವಾಣಿ ಸಂಖ್ಯೆ 1962 ಅಥವಾ 8277100200 ಗೆ ಕರೆ ಮಾಡಿ‌ ಮಾಹಿತಿ ನೀಡಿದರೇ ಪಶು ವೈದ್ಯರು ಚಿಕಿತ್ಸೆ ನೀಡಿ ರೋಗ ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಚರ್ಮಗಂಟು ರೋಗದ ಕುರಿತು ಮುಂಜಾಗ್ರತಾ ಕ್ರಮವಾಗಿ ಕರಪತ್ರಗಳು, ಪೋಸ್ಟರ್, ಬ್ಯಾನರ್ ಹಾಗೂ ಸ್ಥಳೀಯವಾಗಿ ಪಶು ವೈದ್ಯರು, ಪಶುಸಂಗೋಪನೆ ಇಲಾಖಾ ಅಧಿಕಾರಿಗಳಿಂದ ಜಾಗೃತಿ ಮೂಡಿಸಲಾಗುತ್ತಿದೆ. ರೈತರು ಹಾಗೂ ಜಾನುವಾರು ಮಾಲೀಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ‌ಹೇಳಿದರು.

Advertisement

ರೋಗ ತಗುಲಿದ ಪ್ರಾಣಿಯಿಂದ ರಕ್ತ ಹೀರುವ ಸೊಳ್ಳೆ, ಉಣ್ಣೆ, ಕಚ್ಚುವ ನೊಣಗಳು, ವೈರಾಣುಗಳಿಂದ ಜಾನುವಾರುಗಳಿಗೆ ಹರಡುತ್ತದೆ. ಅತಿಯಾದ ಜ್ವರ, ಆಹಾರ ನಿರಾಕರಣೆ, ಹಾಲಿನ ಇಳುವರಿ ಕಡಿಮೆಯಾಗುವುದು, ಮೈಮೇಲೆ 2-5 ಸೆ.ಮೀ ಗಾತ್ರದ ಗಂಟುಗಳು ಕಾಣಿಸಿಕೊಳ್ಳುತ್ತವೆ. ತದನಂತರ ಗಂಟುಗಳು ಸಿಪ್ಪೆ ಸುಲಿದಂತೆ ಒಡೆದು ವ್ರಣವಾಗುವ ರೋಗ ಲಕ್ಷಣಗಳು ಜಾನುವಾರುಗಳಲ್ಲಿ ಕಂಡುಬಂದರೆ ಕೂಡಲೇ ಸಮೀಪದ ಪಶು ವೈದ್ಯರನ್ನು ಸಂಪರ್ಕಿಸಿ, ಸಕಾಲದಲ್ಲಿ ಚಿಕಿತ್ಸೆ ಪಡೆಯುವಂತೆ ಪ್ರಭು ಚವ್ಹಾಣ್ ಕೋರಿದ್ದಾರೆ.

ಮಳೆ ಜಾಸ್ತಿಯಾಗುತ್ತಿರುವುದರಿಂದ ನೊಣ, ಸೊಳ್ಳೆ ಮತ್ತು ಉಣ್ಣೆ ಉತ್ಪತ್ತಿಯಾಗುವ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳೊಂದಿಗೂಡಿ ಫಾಗಿಂಗ್ ಮಾಡಿಸಲಾಗುತ್ತಿದೆ‌. ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಿಂದ ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ 50 ಲಕ್ಷ ಲಸಿಕೆ ಲಭ್ಯವಾಗಲಿದೆ ಎಂದು ಇದೇ ವೇಳೆಗೆ ಅವರು ವಿವರಿಸಿದ್ದಾರೆ. ನಿಶ್ಯಕ್ತಿಯಿಂದ ರಾಸುಗಳು ಸಾವನ್ನಪ್ಪುತ್ತಿವೆ. ಜಾನುವಾರು ಮಾಲೀಕರು ರೋಗಪೀಡಿತ ರಾಸುಗಳು ನಿಶ್ಯಕ್ತವಾಗದಂತೆ ಎಚ್ಚರಿಕೆ ವಹಿಸಲು ಎಳನೀರು, ರಾಗಿ ಅಂಬಲಿ, ರೋಗ ನಿರೋಧಕ ಮನೆಮದ್ದು ಔಷಧಿಗಳನ್ನು ನೀಡುವುದರಿಂದ ರಾಸುಗಳು ಸಾವನ್ನುಪ್ಪುವುದನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಪ್ರಭು ಚವ್ಹಾಣ್ ಅವರು ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next