Advertisement

ಬೆಳ್ಳಾರೆಗೆ ಬೇಕು ಸಮರ್ಪಕ ಪಾರ್ಕಿಂಗ್‌ ವ್ಯವಸ್ಥೆ 

10:15 AM Sep 06, 2018 | Team Udayavani |

ಬೆಳ್ಳಾರೆ: ಸುಳ್ಯ ತಾಲೂಕಿನ ಎರಡನೇ ಅತೀ ದೊಡ್ಡ ಪೇಟೆಯಾದ ಬೆಳ್ಳಾರೆಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಅವೈಜ್ಞಾನಿಕವಾಗಿದ್ದು, ಜನರಿಗೆ ಸಮಸ್ಯೆಯಾಗುತ್ತಿದೆ. ಸುಳ್ಯ ಪೇಟೆಯಿಂದ ಸುಮಾರು 14 ಕಿ.ಮೀ. ದೂರದಲ್ಲಿರುವ ಬೆಳ್ಳಾರೆ ವಾಣಿಜ್ಯ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣ. ಸುಳ್ಯ ಹಾಗೂ ಪುತ್ತೂರಿನ ಗಡಿಭಾಗವೂ ಆಗಿರುವ ಬೆಳ್ಳಾರೆ ಯನ್ನು ಎರಡೂ ತಾಲೂಕುಗಳ ಜನ ಅವಲಂಬಿಸಿದ್ದಾರೆ. ಸುಬ್ರಹ್ಮಣ್ಯ ಹಾಗೂ ಪುತ್ತೂರಿಗೆ ಈ ಭಾಗದ ಅನೇಕ ಊರುಗಳಿಂದ ಬೆಳ್ಳಾರೆ ಮೂಲಕ ತೆರಳುವುದೇ ಅತೀ ಹತ್ತಿರದ ದಾರಿಯೂ ಆಗಿದೆ.

Advertisement

ಆಗಾಗ ರಸ್ತೆ ತಡೆ
ವಾಣಿಜ್ಯ ಹಾಗೂ ಶೈಕ್ಷಣಿಕವಾಗಿ ಬೆಳ್ಳಾರೆ ಪ್ರಗತಿ ಕಂಡಿದ್ದರೂ ಮೂಲಸೌಕರ್ಯಗಳ ಕೊರತೆ ಸಾಕಷ್ಟಿದೆ. ಬೆಳ್ಳಾರೆಯ ಮೂಲಕ ಅನೇಕ ವಿದ್ಯಾರ್ಥಿಗಳು, ನೌಕರರು, ಭಕ್ತರು ಹಾಗೂ ಸಾರ್ವಜನಿಕರು ಸಂಚರಿಸುತ್ತಾರೆ. ಅತಿ ಹೆಚ್ಚು ವಾಹನಗಳು ಸಂಚರಿಸುವುದರಿಂದ ಹಾಗೂ ಚಾಲಕರು ತಮ್ಮ ವಾಹನಗಳನ್ನು ರಸ್ತೆ ಪಕ್ಕದಲ್ಲೇ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಆಗಾಗ ರಸ್ತೆತಡೆ ಉಂಟಾಗುತ್ತದೆ. ಜನನಿಬಿಡ ಪ್ರದೇಶವಾಗಿದ್ದು, ವಾಹನ ದಟ್ಟಣೆ ಇದ್ದರೂ ವ್ಯವಸ್ಥಿತ ಪಾರ್ಕಿಂಗ್‌ ಇಲ್ಲದೆ ಬೆಳ್ಳಾರೆಯಲ್ಲಿ ಆಗಾಗ ಸಮಸ್ಯೆಯಾಗುತ್ತಿದೆ. ಮೂರು ವರ್ಷಗಳ ಹಿಂದೆ ಬೆಳ್ಳಾರೆಯ ವರ್ತಕರ ಸಂಘದವರು ಪೊಲೀಸರ ನೇತೃತ್ವದಲ್ಲಿ ಸಭೆ ನಡೆಸಿ, ಈ ಕುರಿತು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ವ್ಯವಸ್ಥಿತ ಪಾರ್ಕಿಂಗ್‌ ಮಾಡುವ ನಿರ್ಧಾರವನ್ನು ಗ್ರಾಮ ಪಂಚಾಯತ್‌ ತಳೆದಿತ್ತು. ಆದರೆ, ಅದಿನ್ನೂ ಈಡೇರದೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ವ್ಯವಸ್ಥಿತ ಪಾರ್ಕಿಂಗ್‌ ಆಗಲೇಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ನಿರ್ಣಯ ಕಳುಹಿಸಿದ್ದಾರೆ
ಮಳೆ ಕಡಿಮೆಯಾದ ಕೂಡಲೇ ಯಾವ ರೀತಿಯ ಕ್ರಮ ಕೈಗೊಳ್ಳಬಹುದೆಂದು ಯೋಚಿಸಿ, ಕಾರ್ಯಪ್ರವೃತ್ತರಾಗುತ್ತೇವೆ.
– ಈರಯ್ಯ, ಪಿಎಸ್‌ಐ, ಬೆಳ್ಳಾರೆ ಠಾಣೆ 

 ಜಾಗ ಗುರುತಿಸಿದ್ದೇವೆ
ಬೆಳ್ಳಾರೆ ಪೇಟೆ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿ ವ್ಯವಸ್ಥಿತ ಪಾರ್ಕಿಂಗ್‌ ಅಗತ್ಯವಿದೆ. ಮೂರು ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ಬೆಳ್ಳಾರೆ ಪೇಟೆಯಲ್ಲಿ ಕೆಲವು ಸ್ಥಳಗಳನ್ನು ಗುರುತಿಸಿ, ಠಾಣೆಗೆ ಮಾಹಿತಿ ನೀಡಲಾಗಿದೆ.
– ಶಕುಂತಳಾ ನಾಗರಾಜ್‌,
ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next