Advertisement

ಕ್ಯಾನ್ವಾಸ್‌ ಮೇಲೆ ಸಂಗೀತದಲೆಗಳ ಲಾಸ್ಯ 

09:33 PM Jun 22, 2018 | |

ಪವನ್‌ ಕುಮಾರ್‌ ಅವರ ಕಲಾಕೃತಿಗಳಲ್ಲಿ ಬಣ್ಣಗಳ ಬಿಸು ಹೊಡೆತವಿದ್ದರೂ ಸೌಂದರ್ಯವಿದೆ, ವರ್ಣ ಸಾಂಗತ್ಯವಿದೆ. ನೈಜಕ್ಕೆ ಹತ್ತಿರವಾದ ನವ್ಯವನ್ನು ಬಿಡದ ಕಲಾಶೈಲಿಯಿದೆ. ಸಂಗೀತದಲ್ಲಿ ಹೈ ನೋಟ್‌ ಲೋ ನೋಟ್‌ ಇರುವಂತೆ ಚಿತ್ರದಲ್ಲೂ ಡಾರ್ಕ್‌ ಮತ್ತು ಲೈಟ್‌ ವರ್ಣ ಸಾಂಗತ್ಯವಿದೆ.

Advertisement

ಯಾವುದೇ ಕಲೆಯ ಪ್ರಸ್ತುತಿಯಲ್ಲಿ ಹಾವಭಾವಗಳ ಪ್ರದರ್ಶನಕ್ಕೆ ಹೆಚ್ಚು ಮಹತ್ವವಿದೆ. ಕಲಾವಿದನ ಕೈ ಕಾಲು, ದೇಹ- ಮುಖಗಳು ಬಳುಕುವ ಭಂಗಿಯಿಂದಲೇ ಕಲೆಯ ಪ್ರಸ್ತುತಿ ಪುಷ್ಟಿಗೊಳ್ಳುತ್ತದೆ. ಸಂಗೀತದ ಕೊನೆಯಲ್ಲಿ ಮೃದಂಗದ ಪೆಟ್ಟಿಗೆ ಟಪ್ಪನೆ ನಿಲ್ಲುವ ಹಾಡಿನ ರೋಚಕ ಕ್ಷಣ ಅವಿಸ್ಮರಣಿಯವಾಗಿರುತ್ತದೆ. ಇದನ್ನೇ ಕಲಾವಿದ ಪವನ್‌ ಕುಮಾರ್‌ ಅತ್ತಾವರ ತನ್ನ ಚಿತ್ರಕಲಾಕ್ರತಿಗಳಲ್ಲಿ ಪ್ರಸ್ತುಪಡಿಸಿದ್ದಾರೆ. ಅವರ ಕೃತಿಗಳಲ್ಲಿ ಸಂಗಿತದಲೆಗಳ ರಭಸಕ್ಕೆ ಬಣ್ಣಗಳು ತೊಯ್ದು ಕ್ಯಾನ್ವಾಸ್‌ ತುಂಬಾ ರಭಸವಾಗಿ ಹರಡಿ ವಿದ್ಯುತ್‌ ಸಂಚಾರ ನಡೆಸಿವೆ. ಬಣ್ಣಗಳ ರಭಸವಾದ ಸ್ಟ್ರೋಕ್‌ಗಳಲ್ಲಿ ಹಾಡುಗಾರನ ಬಳುಕು ಭಂಗಿ ಮಾರ್ಮಿಕವಾಗಿ ಮೂಡಿದ್ದು ನಮ್ಮೆದುರೇ ಸಂಗೀತ ಕಛೇರಿ ನಡೆಯುತ್ತಿರುವಂತೆ ಅನುಭವವಾಗುತ್ತದೆ. ಹಾಡಿನ ವೇಗಕ್ಕೆ ಅವರ ಕುಂಚಗಳು ನರ್ತಿಸಿ ಕ್ಯಾನ್ವಾಸ್‌ ಮೇಲೆ ನಾದತರಂಗಗಳು ಮೂಡಿವೆ. ಇದು ಅವರ ಅಮಿತೋತ್ಸಾಹ ಹಾಗೂ ಹೊಸತನದ ಹುಡುಕಾಟದಿಂದ ಸಿದ್ಧಿಸಿದೆ. ಅವರ ಅದ್ಭುತ ಕಲಾಕೃತಿಗಳ ಪ್ರದರ್ಶನ ಅನಿಕೇತನ ಶೀರ್ಷಿಕೆಯಡಿ ಉಡುಪಿಯ ದೃಷ್ಟಿ ಗ್ಯಾಲರಿಯಲ್ಲಿ ನಡೆಯಿತು. 

ಮಂಗಳೂರಿನ ಹಿರಿಯ ಕಲಾವಿದ ಓಂಪ್ರಕಾಶ್‌ ಅವರ ಮಗ ಪವನ್‌ ಕುಮಾರ್‌ ಅತ್ತಾವರ ಅವರ ವೃತ್ತಿ ಮತ್ತು ಪ್ರವೃತ್ತಿ ಗಳೆರಡೂ ವಿಭಿನ್ನ. ಇನ್ಫೋಸಿಸ್‌ ಉದ್ಯೋಗಿಯಾಗಿದ್ದರೂ ಕಲಾದೇವಿ ಕೈಬೀಸಿ ಕರೆದಾಗ ಬಾರೆನೆನ್ನಲಾಗದೆ ಕಲೆಯನ್ನೂ ಕೈಗೆತ್ತಿಕೊಂಡರು. ಕಲೆಯನ್ನು ಸಂಶೋಧನಾತ್ಮಕವಾಗಿ ದುಡಿಸಿ ಕೊಂಡರು. ಸೃಜನಾತ್ಮಕ ಅಂಶಗಳನ್ನು ಮೈಗೂಡಿಸಿಕೊಂಡು ಮೂರ್ತ-ಅಮೂರ್ತವನ್ನೊಳಗೊಂಡ ಕಲಾಕೃತಿ ರಚನೆಯನ್ನು ಕೈಗೆತ್ತಿಕೊಂಡರು. ಸಂಗೀತವನ್ನು ಚಿತ್ರವಸ್ತುವನ್ನಾಗಿಸಿಕೊಂಡು ರಾಗತರಂಗಗಳನ್ನು ವರ್ಣತರಂಗಗಳಾಗಿ ರೂಪಿಸಿ ದರು. ಉಡುಪಿಯ ಜನತೆಗೆ ಸಂಗೀತ ಕಲಾಕೃತಿಗಳ ರುಚಿಯನ್ನು ಉಣ್ಣಿಸಬೇಕು ಎಂದು ನಿರ್ಧರಿಸಿ ಆರ್ಟಿಸ್ಟ್ಸ್ ಫೋರಂನ ಅಧ್ಯಕ್ಷರಾದ ರಮೇಶ್‌ ರಾಯರನ್ನು ಭೇಟಿಯಾಗಿ ಅವರ ಮಾರ್ಗದರ್ಶನ ಪಡೆದು ಕಲಾಪ್ರದರ್ಶನಕ್ಕೆ ದಿನವಿಟ್ಟರು. ಹಾಗೆ ಕಾರ್ಯದರ್ಶಿ ಸಕು ಪಾಂಗಾಳ ಬಳಗದ ಸಹಕಾರದೊಂದಿಗೆ ಕಲಾಕೃತಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಉತ್ತಮ ಪ್ರದರ್ಶನ ನೀಡಿದರು. 

 ಕಲಾಕೃತಿ ರಚನೆಯಲ್ಲಿ ಹೊಸತನದ ಹುಡುಕಾಟದೊಂದಿಗೆ ಹೊರಟ ಪವನ್‌ ಕುಮಾರ್‌ ಅತ್ತಾವರ ಅವರ ಕಲಾಕೃತಿಗಳನ್ನು ಕಾಣುವಾಗ ಖ್ಯಾತ ಕಲಾವಿದರಾದ ಎನ್‌.ಎಸ್‌.ಬೇಂದ್ರೆಯವರ ಸಂಗೀತ ಕಲಾಕೃತಿಗಳು, ವೆಂಕಟಪ್ಪರವರ ವೀಣೆಯ ಹುಚ್ಚು ಕಲಾಕೃತಿಗಳು ನೆನಪಾಗುತ್ತದೆ. ಆದರೆ ಇವರ ಕಲಾಕೃತಿಗಳಲ್ಲಿ ಕಲರ್‌ ಸ್ಟ್ರೋಕ್‌ ವೇಗಗತಿಯಲ್ಲಿದೆ. ಕಲಾಕೃತಿಗಳಲ್ಲಿ ಜಲವರ್ಣದಂತೆ ಕ್ಯಾನ್‌ವಾಸ್‌ನ ಬಿಳಿಭಾಗವನ್ನು ಹಾಗೇ ಉಳಿಸಿಕೊಂಡು ಬೇಕಾದೆಡೆ ಮಾತ್ರ ಬಣ್ಣಗಳನ್ನು ಬೀಸು ಹೊಡೆತಗಳಿಂದ ಹಿನ್ನೆಲೆಯೊಂದಿಗೆ ಮಿಶ್ರ ಮಾಡಿ ಚಿತ್ರಿಸಿರುವುದು ತ್ರೀಡಿ ಎನಿಮೇಶನ್‌ನಂತೆ ಅದ್ಭುತವಾಗಿ ಕಾಣುತ್ತಿತ್ತು. ವಿವಿಧ ಗಾತ್ರದ ಕ್ಯಾನ್ವಾಸ್‌ ಮೇಲೆ ತೈಲ ಮತ್ತು ಆಕ್ರಲಿಕ್‌ ಬಣ್ಣಗಳಲ್ಲಿ, ವಿಧವಿದ ಛಾಯೆಗಳಲ್ಲಿ ವೇಗಭರಿತವಾಗಿ ಚಿತ್ರಿಸಿದ್ದಾರೆ. ಸಂಗೀತದಲ್ಲಿ ಹೈ ನೋಟ್‌ ಲೋ ನೋಟ್‌ ಇರುವಂತೆ ಚಿತ್ರದಲ್ಲೂ ಡಾರ್ಕ್‌ ಮತ್ತು ಲೈಟ್‌ ವರ್ಣಸಾಂಗತ್ಯವಿದೆ. ಸಂಗೀತ ವಾದ್ಯಗಳ ಆಕಾರಕ್ಕೆ ತಕ್ಕಂತೆ ಬಳುಕುವ ಸಂಗೀತಗಾರನನ್ನು ಚಿತ್ರಿಸಲಾಗಿದೆ. ಇಲ್ಲಿ ನಾವು ಮೂರು ಅಂಶಗಳನ್ನು ಗಮನಿಸಬಹುದು. ಅದೇನೆಂದರೆ: ಚಿತ್ರದಲ್ಲಿ ಬಣ್ಣಗಳ ಬಿಸು ಹೊಡೆತವಿದ್ದರೂ ಸೌಂದರ್ಯವಿದೆ, ವರ್ಣ ಸಾಂಗತ್ಯವಿದೆ. ನೈಜಕ್ಕೆ ಹತ್ತಿರವಾದ ನವ್ಯವನ್ನು ಬಿಡದ ಕಲಾಶೈಲಿಯಿದೆ. ಕಲಾಕೃತಿ ರಚನೆಯಲ್ಲಿ ಒಂದಕ್ಕೊಂದು ಹೊಂದಾಣಿಕೆಯಿದೆ. ಒಂದೇ ಬಣ್ಣದ ವಿಧವಿಧ ಛಾಯೆಗಳನ್ನು ರೂಪಿಸುವ ಕೌಶಲವಿದೆ. ಎಲ್ಲಕ್ಕಿಂತ ಮಿಗಿಲಾಗಿ ಕಲಾಕೃತಿಗಳೊಳಗೆ ವೇಗವಿದೆ. ಇದೇ ವೇಗದಲ್ಲಿ ಪವನ್‌ ಕುಮಾರ್‌ ವಿಧವಿಧ ಕಲಾಕೃತಿಗಳನ್ನು ರಚಿಸುವಂತಾಗಲಿ.

 ಉಪಾಧ್ಯಾಯ ಮೂಡುಬೆಳ್ಳೆ

Advertisement
Advertisement

Udayavani is now on Telegram. Click here to join our channel and stay updated with the latest news.

Next