Advertisement

ಇನ್ನೂ ಪಕ್ಕಾ ಆಗದ ಕ್ಯಾಂಟೀನ್‌ ಭಾಗ್ಯ

12:06 PM Oct 24, 2017 | Team Udayavani |

ಬೆಂಗಳೂರು: ರಾಜಧಾನಿಯ ಬಡವರಿಗೆ ರಿಯಾಯಿತಿ ದರದಲ್ಲಿ ತಿಂಡಿ-ಊಟ ನೀಡುವ ಇಂದಿರಾ ಕ್ಯಾಂಟೀನ್‌ ಸೇವೆ, ಕನ್ನಡ ರಾಜ್ಯೋತ್ಸವದ ವೇಳೆಗೆ 198 ವಾರ್ಡ್‌ಗಳ ಎಲ್ಲ ಅರ್ಹ ಫ‌ಲಾನುಭವಿಗಳಿಗೆ ಸಿಗುವುದು ಅನುಮಾನ.

Advertisement

ಬಿಬಿಎಂಪಿಯ ಎಲ್ಲ ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಎರಡನೇ ಬಾರಿ ನೀಡಿದ ಗಡುವು ಮುಗಿಯುತ್ತಿದ್ದರೂ, 15ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಈವರೆಗೆ ಕ್ಯಾಂಟೀನ್‌ ಸ್ಥಾಪನೆಗೆ ಸ್ಥಳ ನಿಗದಿಯಾಗಿಲ್ಲ. ಇನ್ನು ಬಾಡಿಗೆ ಕಟ್ಟಡಗಳಲ್ಲಿ ಕ್ಯಾಂಟೀನ್‌ ಆರಂಭಿಸುವ ಪ್ರಯತ್ನವೂ ಕೈಗೂಡದ ಹಿನ್ನೆಲೆಯಲ್ಲಿ 25ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ನವೆಂಬರ್‌ 1ರ ವೇಳೆಗೆ ಕ್ಯಾಂಟೀನ್‌ ಆರಂಭವಾಗುವ ನಿರೀಕ್ಷೆ ಈಡೇರುವ ಸಾಧ್ಯತೆಯಿಲ್ಲ. 

ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಆಗಸ್ಟ್‌ 16ರಂದು 101 ಕ್ಯಾಂಟೀನ್‌ಗಳಿಗೆ ಚಾಲನೆ ನೀಡಿದ್ದರು. ಈ ವೇಳೆ ಅಕ್ಟೋಬರ್‌ 2ರ ವೇಳೆಗೆ ನಗರದ ಎಲ್ಲ ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳು ಉದ್ಘಾಟಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಆದರೆ, ಅ.2ರಂದು ಕೇವಲ 50 ಕ್ಯಾಂಟೀನ್‌ಗಳು ಮಾತ್ರ ಆರಂಭಗೊಂಡಿದ್ದವು. ಆನಂತರದಲ್ಲಿ ನವೆಂಬರ್‌ 1ರ ವೇಳೆಗೆ ಎಲ್ಲ ಕ್ಯಾಂಟೀನ್‌ಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಗಡುವು ನೀಡಿದ್ದರು. 

ಮುಖ್ಯಮಂತ್ರಿಗಳ ಗಡುವಿನ ಮುಗಿಯುತ್ತಿದ್ದರೂ ಸದ್ಯ ನಗರದ 15 ಕ್ಯಾಂಟೀನ್‌ಗಳಲ್ಲಿ ಮಾತ್ರ ಕ್ಯಾಂಟೀನ್‌ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದಂತೆ 15 ವಾರ್ಡ್‌ಗಳಲ್ಲಿ ಈವರೆಗೆ ಸ್ಥಳವನ್ನೆ ಗುರುತಿಸಿಲ್ಲ. ಇನ್ನುಳಿದ 17 ವಾರ್ಡ್‌ಗಳಲ್ಲಿ ಪಾಲಿಕೆಯ ಅಧಿಕಾರಿಗಳು ಸ್ಥಳ ನಿಗದಿಗೊಳಿಸಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಕ್ಯಾಂಟೀನ್‌ ನಿರ್ಮಾನ ಕಾಮಗಾರಿ ಆರಂಭವಾಗಿಲ್ಲ. 

ವಿಳಂಬಕ್ಕೆ ಮಳೆ ಕಾರಣ: ನಗರದಲ್ಲಿ ಕಳೆದ ಎರಡು ತಿಂಗಳು ಸುರಿದ ಭಾರಿ ಮಳೆಯಿಂದಾಗಿ ಕ್ಯಾಂಟೀನ್‌ ಕಾಮಗಾರಿ ವಿಳಂಬವಾಗಿದ್ದು, ಪಾಲಿಕೆಯ ಅಧಿಕಾರಿಗಳು ಮಳೆಯ ಅನಾಹುತಗಳನ್ನು ತಡೆಯುವ ಕಾರ್ಯದಲ್ಲಿ ತೊಡಗಿದ್ದರು. ಹಾಗಾಗಿ ಕ್ಯಾಂಟೀನ್‌ ನಿರ್ಮಾಣ ಕಾಮಗಾರಿಗೆ ವಿಳಂಬವಾಗಿದ್ದು, ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಹಿರಿಯ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. 

Advertisement

ವೇಗ ಕಳೆದುಕೊಂಡ ಕಾಮಗಾರಿ: ಮೊದಲ ಹಂತದ 101 ಕ್ಯಾಂಟೀನ್‌ ನಿರ್ಮಾಣ ಕಾಮಗಾರಿ ಸಮರೋಪಾದಿಯಲ್ಲಿ ನಡೆಸಿದ ಅಧಿಕಾರಿಗಳು, ಎರಡನೇ ಹಾಗೂ ಮೂರನೇ ಹಂತದ ಕ್ಯಾಂಟೀನ್‌ಗಳ ನಿರ್ಮಾಣ ಕೆಲಸಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ನಿರಂತರವಾಗಿ ಅಧಿಕಾರಿಗಳ ಬೆನ್ನು ಬಿದ್ದು, ಕ್ಯಾಂಟೀನ್‌ಗೆ ಸ್ಥಳ ನಿಗದಿಗೊಳಿಸಲಾಗಿದೆ. ಆದರೆ, ಮಳೆಯ ನೆಪ ಹೇಳಿ ಕ್ಯಾಂಟೀನ್‌ ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಕೆಲ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ. 

ಅಡುಗೆ ಮನೆಗಳ ನಿರ್ಮಾಣವೂ ಅಪೂರ್ಣ: ನಗರದಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಅಡುಗೆ ಮನೆ ನಿರ್ಮಿಸಲು ಪಾಲಿಕೆಯ ಅಧಿಕಾರಿಗಳು ಯೋಜನೆ ರೂಪಿಸಿದ್ದು, ಇದೀಗ 12 ಕಡೆಗಳಲ್ಲಿ ಅಡುಗೆ ಮನೆಗಳು ಕಾರ್ಯಾರಂಭವಾಗಿವೆ. ಆದರೆ, ಹಲವಾರು ಕಡೆಗಳಲ್ಲಿ ಜಾಗ ಗುರುತಿಸಿದರೂ ಅಡುಗೆ ಮನೆ ನಿರ್ಮಾಣ ಕಾಮಗಾರಿ ಈವರೆಗೆ ಪೂರ್ಣಗೊಂಡಿಲ್ಲ. ಇದರಿಂದಾಗಿ 12 ಅಡುಗೆ ಮನೆಗಳಿಂದಲೇ ಆಹಾರ ಪೂರೈಕೆ ಮಾಡಬೇಕಿರುವುದರಿಂದ ಕೆಲವೊಂದು ಕ್ಯಾಂಟೀನ್‌ಗಳಿಗೆ ಆಹಾರ ತಡವಾಗುತ್ತಿದೆ ಎನ್ನಲಾಗಿದೆ. 

ಈಗಾಗಲೇ ಹಲವೆಡೆ ಕ್ಯಾಂಟೀನ್‌ ಕಾಮಗಾರಿ ಪ್ರಗತಿಯಲ್ಲಿದ್ದು, ಮುಖ್ಯಮಂತ್ರಿಗಳು ನೀಡಿರುವ ಗಡುವಿನೊಳಗೆ ಸ್ಥಳ ಗುರುತಿಸಿರುವ ಎಲ್ಲ ವಾರ್ಡ್‌ಗಳಲ್ಲಿಯೂ ಕ್ಯಾಂಟೀನ್‌ಗಳನ್ನು ನಿರ್ಮಿಸುತ್ತೇವೆ. ಕೆಲವೊಂದು ವಾರ್ಡ್‌ಗಳಲ್ಲಿ ಈವರೆಗೆ ಜಾಗ ದೊರೆಯದ ಹಿನ್ನೆಲೆಯಲ್ಲಿ ಖಾಸಗಿ ಜಾಗ ಅಥವಾ ಕಟ್ಟಡ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ಈ ವಾರ್ಡ್‌ಗಳಲ್ಲಿ ಸ್ಥಳ ಸಿಕ್ಕಿಲ್ಲ
ಛಲವಾದಿಪಾಳ್ಯ, ಬೊಮ್ಮನಹಳ್ಳಿ, ಬನಶಂಕರಿ, ಮೋರ್‌ ರಸ್ತೆ, ಮಾರಪ್ಪನಪಾಳ್ಯ, ಗೋವಿಂದರಾಜನಗರ, ಕೆಂಗೇರಿ, ಆರ್‌.ಆರ್‌.ನಗರ, ಕೋರಮಂಗಲ, ಬಿಟಿಎಂ ಬಡಾವಣೆ, ಜೆ.ಪಿ.ನಗರ, ಯಲಹಂಕ ಉಪನಗರ

* ವೆಂ. ಸುನೀಲ್‌ ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next