Advertisement

ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕ್ಯಾಂಟೀನ್‌ ಭಾಗ್ಯ

05:01 PM May 14, 2019 | Team Udayavani |

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಕೇಂದ್ರದಲ್ಲಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲೇ ಇನ್ನು ಮುಂದೆ ರೋಗಿಗಳಿಗೆ ಉಪಾಹಾರ ಗೃಹ ಲಭ್ಯವಾಗಲಿದೆ.

Advertisement

ಈಗಾಗಲೇ ಆಸ್ಪತ್ರೆ ಹೊರಾಂಗಣದಲ್ಲಿ 500 ಚದರ ಅಡಿ ವಿಸ್ತೀರ್ಣದಲ್ಲಿ ಹೊಸದಾಗಿ ಕ್ಯಾಂಟೀನ್‌ ಕಟ್ಟಡ ಹಾಗೂ ಹಾಲಿನ ಡೇರಿ/ಹಣ್ಣಿನ ಮಳಿಗೆ ಸೇವೆ ನೀಡಲು ಕಟ್ಟಡ ಸಿದ್ಧಗೊಂಡಿದ್ದು, ಟೆಂಡರ್‌ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ಕೆಎಚ್ಎಸ್‌ಡಿಆರ್‌ಪಿ ಎಂಜಿನಿಯರ್‌ ವಿಭಾಗದಿಂದ ಕಟ್ಟಡ ಕೆಲಸ ಪೂರ್ಣಗೊಳಿಸಲಾಗಿದೆ. ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯಿಂದ ಟೆಂಡರ್‌ ಪ್ರಕ್ರಿಯೆ ಕುರಿತು ಪುತ್ತೂರು ಎಸಿ ಅವರಿಗೆ ಅನುಮೋದನೆ ಕಳುಹಿಸಲಾಗಿದೆ. ಆದೇಶ ಜಾರಿಯಾದ ಬಳಿಕ ಕಡಿಮೆ ದರ ಪಟ್ಟಿ ನೀಡಿದವರಿಗೆ ಮೇ ಅಂತಿಮ ವಾರದೊಳಗೆ ಉಪಾಹಾರ ಗೃಹಕ್ಕೆ ಸಮಿತಿಯಿಂದ ಅನುಮತಿ ಸಿಗಲಿದೆ.

ಕನಿಷ್ಠ ದರವಿದ್ದರೆ ಅವಕಾಶ

ಇಡ್ಲಿ, ಅನ್ನ-ಸಾರು, ಅನ್ನ-ರಸಂ, ಚಪಾತಿ-ಪಲ್ಯ ಇರಲಿದ್ದು, ಸರಕಾರದಿಂದ ಇಂತಿಷ್ಟು ಗ್ರಾಂ ಎಂದು ನಿಗದಿಪಡಿಸಿದೆ. ಅತೀ ಕಡಿಮೆ ದರ ನಮೂದು ಮಾಡಿರುವವರಿಗೆ ಟೆಂಡರ್‌ ಲಭ್ಯವಾಗಲಿದ್ದು, ಸಂಘ-ಸಂಸ್ಥೆ, ವಿಧವೆಯರು, ಅಂಗವಿಕಲರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ಕ್ಯಾಂಟೀನ್‌ ನಡೆಸಲು ಈಗಾಗಲೇ 6 ಮಂದಿ ಅವಕಾಶ ಕೋರಿರುವವರ ಮನವಿ ಹಾಗೂ ದರಪಟ್ಟಿ ಪ್ರಕ್ರಿಯೆಯನ್ನು ಆರೋಗ್ಯ ರಕ್ಷಾ ಸಮಿತಿ ಎ. 31ರಂದು ಪೂರ್ಣಗೊಳಿಸಿದೆ.

Advertisement

ಜಿಲ್ಲೆಯಲ್ಲಿ ಮೊದಲ ಬಾರಿಗೆ ಬೆಳ್ತಂಗಡಿಯಲ್ಲಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 21 ಜಿಲ್ಲಾ ಆಸ್ಪತ್ರೆಗಳು ಮತ್ತು 146 ತಾಲೂಕು ಆಸ್ಪತ್ರೆಗಳ ಆವರಣದಲ್ಲಿ ಅತೀ ಹೆಚ್ಚಿನ ರಿಯಾಯಿತಿ ದರದಲ್ಲಿ ಕ್ಯಾಂಟೀನ್‌ ಸೌಲಭ್ಯ ಒದಗಿಸುತ್ತಿದೆ. ಜಿಲ್ಲೆಯಲ್ಲಿ ಮೊದಲೆಂಬಂತೆ ಬೆಳ್ತಂಗಡಿ ತಾಲೂಕಲ್ಲಿ ಸೇವೆ ಆರಂಭಿಸುವ ನಿರೀಕ್ಷೆಯಿದೆ. ಆಸ್ಪತ್ರೆಗಳ ಹೊರ ರೋಗಿಗಳಿಗೆ, ಒಳರೋಗಿಗಳಿಗೆ, ರೋಗಿಗಳ ಜತೆಗಿರುವ ಸಹಾಯಕರಿಗೆ ಹಾಗೂ ಆಸ್ಪತ್ರೆ ಡಿ ದರ್ಜೆ ಸಿಬಂದಿ ವರ್ಗಕ್ಕೆ ದಿನಕ್ಕೆ ಸಾವಿರ ಊಟ ಮತ್ತು ಉಪಾಹಾರ ಪೂರೈಸಲು ಅರ್ಹರಿರುವವರನ್ನು ನೇಮಿಸಲು ಈಗಾಗಲೇ ಆರೋಗ್ಯ ರಕ್ಷಾ ಸಮಿತಿಗೆ ಸೂಚಿಸಲಾಗಿದೆ.

ಹಾಲಿನ ಡೇರಿ/ ಹಣ್ಣಿನ ಮಳಿಗೆ

ಸಮೀಪದಲ್ಲೇ ಹಾಪ್‌ಕಾಮ್ಸ್‌ನಿಂದ ಹಣ್ಣಿನ ಮಳಿಗೆ ಹಾಗೂ ನಂದಿನಿ ವತಿಯಿಂದ ಹಾಲಿನ ಉತ್ನನ್ನದ ಮಳಿಗೆಯೂ ಆರಂಭಗೊಳ್ಳಲಿದೆ.

ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕ್ಯಾಂಟೀನ್‌ ಭಾಗ್ಯ

ಅಂತಿಮ ಹಂತದಲ್ಲಿ

ರೋಗಿಗಳ ಆರೋಗ್ಯ ದೃಷ್ಟಿ ಯಿಂದ ಉತ್ತಮ ಆಹಾರ ಒದಗಿಸುವ ನೆಲೆಯಲ್ಲಿ ಆಸ್ಪತ್ರೆ ಆವರಣದಲ್ಲೇ ಕ್ಯಾಂಟೀನ್‌ ತೆರೆಯಲಾಗುತ್ತಿದೆ. ಈಗಾಗಲೇ ಎಲ್ಲ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ.
– ಡಾ| ಕಲಾಮಧು ತಾ| ವೈದ್ಯಾಧಿಕಾರಿ, ಬೆಳ್ತಂಗಡಿ

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next