ಸುಮಾರು ಆರು ವರುಷಗಳ ಪ್ರೇಮ ನಮ್ಮಿಬ್ಬರದು. ಆದರೆ, ಕೆಲ ದಿನಗಳ ಹಿಂದೆ ಫೋನ್ ಮಾಡಿದಾಗ ನಮ್ಮ ಪ್ರೀತಿಯನ್ನು ಇಲ್ಲಿಗೇ ನಿಲ್ಲಿಸಿ ಬಿಡೋಣ ಅಂದಳು. ಈ ಮಾತು ಕೇಳಿದಾಗ ಎದೆಯಲ್ಲಿ ನಡುಕ, ಭಯ, ಒಂದೇ ಸಮನೆ ಹೃದಯ ಬಡಿದುಕೊಳ್ಳಲು ಪ್ರಾರಂಭಿಸಿತು. ಕಣ್ಣಿನಿಂದ ಒಂದು ಹನಿ ಜಾರಿ ಬಿತ್ತು.
ಮೊದಲು ಬಸ್ ನಿಲ್ದಾಣದಲ್ಲಿ ಅವಳನ್ನ ನೋಡಿದ್ದೆ. ನಂತರ ವಿಚಾರಿಸಿದಾಗ ಅವಳು ನಮ್ಮ ಕಾಲೇಜು ಅಂತ ತಿಳಿದು, ಪ್ರತಿದಿನ ಅವಳನ್ನು ನೋಡಬೇಕು ಅಂತ ಟ್ಯೂಷನ್ ನೆಪ ಮಾಡಿ ಬೆಳಿಗ್ಗೆನೇ ಬರುತ್ತಿದ್ದೆ. ಏಕೆಂದರೆ, ಅವಳ ಕಾಲೇಜು ಸಮಯ ಬೆಳಗ್ಗೆ ಇತ್ತು, ಅವಳನ್ನ ಮಾತಾಡಿಸಬೇಕು,ಅವಳಿಗೆ ನನ್ನ ಪ್ರೇಮದ ವಿಷಯ ಹೇಳಬೇಕು ಅಂತ ಪ್ರತಿದಿನ ಅವಳ ಹಿಂದೆ ಸುತ್ತುತ್ತಿದ್ದೆ, ಕೊನೆಗೆ ಅವಳೇ ಬಂದು ಮಾತಾಡಿಸಿದಳು. ನಂತರ, ನಮ್ಮಿಬ್ಬರ ನಡುವೆ ಸಲಿಗೆ ಬೆಳೆದು, ಸಲಿಗೆ ಸ್ನೇಹಕ್ಕೆ ತಿರುಗಿ, ಸ್ನೇಹ ನಿಧಾನವಾಗಿ ಪ್ರೀತಿಯ ರೂಪ ಪಡೆದುಕೊಂಡಿತು.
ಎಲ್ಲ ಪ್ರೇಮಿಗಳಂತೆ ನಾವು ಪಾರ್ಕ್, ಸಿನೆಮಾ, ಹೋಟೆಲ್ ಎಲ್ಲ ಕಡೆ ಸುತ್ತಾಡುತ್ತಿದ್ದೆವು. ಅವಳ ಕಣ್ಣಿನ ನೋಟ ಯಾವಾಗಲೂ ಸೆಳೆಯುತ್ತಿತ್ತು, ಕಾರಣವಿಲ್ಲದೆ ಸತಾಯಿಸುವುದು, ರೇಗಿಸುವುದು, ಕೆಣಕುವುದು, ನಂಗೆ ಫೋನ್, ಮೆಸೇಜ್ ಮಾಡದೇ ಇರುವುದು ಅವಳಲ್ಲಿನ ಕೆಟ್ಟ ಗುಣಗಳು.
ನಮ್ಮ ಹುಡುಗಿ ಸುಂದ್ರಿನೇ, ಆದರೆ ವಿಶ್ವಸುಂದರಿ ಏನಲ್ಲ, ಅವಳಿಗೆ ಅಹಂಕಾರವಿತ್ತು. ಆದರೆ ದುರಹಂಕಾರ ಇರಲಿಲ್ಲ. ಮನಸ್ಸಿನಲ್ಲಿ ನೂರಾರು ನೋವುಗಳು ನರ್ತನ ಮಾಡುವಾಗ ನಗುವುದನ್ನು ಕಲಿಸಿದಳು, ಹೆಜ್ಜೆ ಹೆಜ್ಜೆಗೂ ಹರ್ಟ್ ಆದರೂ ಹೆದರದೇ ಹೆಜ್ಜೆ ಇಡುವುದನ್ನು ಕಲಿಸಿದಳು. ಸಹನೆ ನಿನ್ನದಾದರೆ ಸಕಲವೂ ನಿನ್ನದು, ವಿನಯ ನಿನ್ನದಾದರೆ ವಿಜಯವೂ ನಿನ್ನದು ಎಂದು ಉಪದೇಶ ಮಾಡಿದವಳು. ಅಂಥವಳು ಈಗ ಯಾವುದೋ ಕುಂಟು ನೆಪಹೇಳಿ, ನನ್ನ ಬದುಕಿಂದಲೇ ಎದ್ದು ಹೋಗುವ ಮಾತನಾಡಿದ್ದಾಳೆ. ಅದಕ್ಕಾಗಿ ಚಿಂತಿಸಲಾರೆ. ಕಳೆದು ಹೋದ ಐಶ್ವರ್ಯಕ್ಕಾಗಿ ಅಳುತ್ತಾ ಕೂರಲಾರೆ. ಆದರೆ, “ಮಿಸ್ ಯೂ’ ಎಂಬ ಮಾತನ್ನು ಸಂಕಟದಿಂದಲೇ ಹೇಳಿ, ಹೊಸ ಕನಸಿಗಾಗಿ ಹಂಬಲಿಸುತ್ತಿರುವೆ.
ಇಂತಿ ನಿನ್ನವ
ಸಂತೋಷ ಯ ಮೆಟಗುಪ್ಪಿ