Advertisement
17ನೇ ಲೋಕಸಭೆಯ ಜಂಟಿ ಸದನವನ್ನುದ್ದೇಶಿಸಿ ರಾಷ್ಟ್ರಪತಿಗಳ ಭಾಷಣಕ್ಕೆ ಸದನದಲ್ಲಿ ಸಲ್ಲಿಸಲಾದ ವಂದನಾರ್ಪಣೆ ಮೇಲಿನ ಭಾಷಣದಲ್ಲಿ ಅವರು, ”ಈ ದೇಶಕ್ಕೆ ಮಾಜಿ ಪ್ರಧಾನಿಗಳಾದ ವಾಜಪೇಯಿ ಅವರ ಕೊಡುಗೆ ಅಪಾರವಾಗಿದೆ. ಆದರೆ, ಅದನ್ನೆಂದೂ ಕಾಂಗ್ರೆಸ್ಸಿಗರು ನೆನೆಯುವುದಿಲ್ಲ. ಅದು ಹೋಗಲಿ, ಅವರದ್ದೇ ಪಕ್ಷದ ಇಬ್ಬರು ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್ ಹಾಗೂ ಮನಮೋಹನ್ ಸಿಂಗ್ ಅವರ ಉತ್ತಮ ಕೆಲಸಗಳ ಬಗ್ಗೆಯಾದರೂ ಎಂದಾದರೂ ಮಾತನಾಡಿದ್ದಾರೆಯೇ? ಅದೂ ಇಲ್ಲ” ಎಂದರು. ಅಂದಹಾಗೆ, 2ನೇ ಬಾರಿಗೆ ಪ್ರಧಾನಿಯಾದ ನಂತರ ಲೋಕಸಭೆಯಲ್ಲಿ ಅವರು ಮೊದಲ ಭಾಷಣ ಇದಾಗಿತ್ತು.
Related Articles
Advertisement
ತುರ್ತು ಪರಿಸ್ಥಿತಿ ಕರಾಳ ನೆನಪು
1975ರಿಂದ 1977ರವರೆಗೆ ದೇಶದಲ್ಲಿ ಜಾರಿಯಲ್ಲಿದ್ದು ತುರ್ತು ಪರಿಸ್ಥಿತಿ ಈ ದೇಶದ ಪ್ರಜಾಪ್ರಭುತ್ವದ ಇತಿಹಾಸಕ್ಕೆ ಕಳಂಕವಾಗಿದೆ ಎಂದು ವ್ಯಾಖ್ಯಾನಿಸಿದ ಮೋದಿ, ”ಆ ಕಳಂಕ ಎಂದಿಗೂ ಮಾಸುವುದಿಲ್ಲ. ಇಂದು ಜೂ. 25. 44 ವರ್ಷಗಳ ಹಿಂದೆ, ಇದೇ ದಿನ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಇದನ್ನು ಹೇರಿದವರು ಯಾರು? ಈ ದೇಶದ ಸಂವಿಧಾನವನ್ನು ನೆಲಸಮ ಮಾಡಿದವರು ಯಾರು, ಮಾಧ್ಯಮಗಳನ್ನು ಹತ್ತಿಕ್ಕಿದವರು ಯಾರು, ನ್ಯಾಯಾಂಗ ವನ್ನು ಭೂಗತ ಮಾಡಿದವರು ಯಾರು’ ಎಂದು ನಾನು ಇಂದು ಕಾಂಗ್ರೆಸ್ಸನ್ನು ಕೇಳಬಯಸುತ್ತೇನೆ’ ಎಂದ ಅವರು, ”ಆ ಕರಾಳ ದಿನಗಳನ್ನು ನಾವೆಂದಿಗೂ ಮರೆಯುವುದಿಲ್ಲ” ಎಂದರು.
ಹಲವು ಜನಪರ ಯೋಜನೆಗಳ ಜಾರಿ
ಕೆಲ ದಿನಗಳ ಹಿಂದಷ್ಟೇ ಅಧಿಕಾರಕ್ಕೆ ಬಂದಿರುವ ನಮ್ಮ ಸರ್ಕಾರ, ಈ ದೇಶದ ಅಭಿವೃದ್ಧಿಗಾಗಿ ಹಲವಾರು ಜನಪರ ನೀತಿಗಳನ್ನು ಜಾರಿಗೊಳಿಸಲಿದೆ. ಆ ನೀತಿಗಳು ವರ್ತಕರಿಗೆ, ಯುವಜನರಿಗೆ ಹಾಗೂ ದೇಶದ ಎಲ್ಲಾ ಕ್ಷೇತ್ರಗಳ ಸುಧಾರಣೆಗೆ ಸಹಾಯಕವಾಗುವಂಥ ಕಾನೂನುಗಳಾಗಿರುತ್ತವೆ ಎಂದರು. ಜತೆಗೆ, ದೇಶವನ್ನು ಐದು ಲಕ್ಷಕೋಟಿ ಡಾಲರ್ ಮೊತ್ತದ ಆರ್ಥಿಕತೆಯನ್ನಾಗಿಸಲು ಎಲ್ಲರೂ ಶ್ರಮಪಡಬೇಕು ಎಂದರು.
ಅಂಬೇಡ್ಕರ್ ಸ್ಮರಣೆ
ನಾವಿಂದು ಜಲ ಸಂಪನ್ಮೂಲಗಳ ಬಗ್ಗೆ ಮಾತನಾಡುತ್ತೇವೆ. ಈ ಸಂದರ್ಭದಲ್ಲಿ ನಾವು ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳಬೇಕು. ದೇಶದಲ್ಲಿ ನೀರಾವರಿ ಹಾಗೂ ಕೃಷಿಯ ಬಗ್ಗೆ ಅವರು ಹೆಚ್ಚು ಒತ್ತು ಕೊಟ್ಟಿದ್ದರು ಎಂದ ಅವರು, ಲಾಲ್ ಬಹದ್ದೂರ್ ಶಾಸ್ತ್ರಿಯವರ ‘ಜೈ ಜವಾನ್, ಜೈ ಕಿಸಾನ್’ ಜತೆಗೆ ನಾವಿಂದು ‘ಜೈ ಅನುಸಂಧಾನ್’ ಎಂಬ ಹೊಸ ವಿಚಾರವನ್ನೂ ಸೇರಿಸಿಕೊಳ್ಳಬೇಕಿದೆ ಎಂದರು. ಇದೇ ವೇಳೆ, ಕೃಷಿ ವಲಯದ ಅಭಿವೃದ್ಧಿಗಾಗಿ ಹಲವಾರು ನೀತಿಗಳನ್ನು ಸರ್ಕಾರ ಜಾರಿಗೆ ತರಲಿದೆ. ಹನಿ ನೀರಾವರಿ ಯೋಜನೆಯನ್ನು ದೇಶವ್ಯಾಪಿ ಅಳವಡಿಸಿಕೊಳ್ಳುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಇದೇ ವೇಳೆ, ಕೃಷಿ ಸಂಬಂಧಿತ ವಲಯಗಳಾದ ಗೋದಾಮುಗಳು ಹಾಗೂ ಆಹಾರ ಸಂಸ್ಕರಣಾ ರಂಗಗಳಲ್ಲಿ ಖಾಸಗಿ ಕಂಪನಿಗಳ ಬಂಡವಾಳ ಹೂಡಿಕೆ ಬಗ್ಗೆ ಪ್ರಸ್ತಾಪಿಸಿದರು.