Advertisement

ಒಂದಿಂಚೂ ನೆಲ ಬಿಡೆವು ; ಚೀನ ವಿಚಾರದಲ್ಲಿ ಏನನ್ನೂ ಗ್ಯಾರಂಟಿ ಕೊಡಲಾರೆ: ರಾಜನಾಥ್‌

03:12 AM Jul 18, 2020 | Hari Prasad |

ಲಡಾಖ್‌: ‘ಚೀನ ಜತೆಗಿನ ಗಡಿಬಿಕ್ಕಟ್ಟಿನ ಬಗ್ಗೆ ಏನನ್ನೂ ಖಾತ್ರಿಪಡಿಸಲಾರೆ.

Advertisement

ಆದರೆ, ನಮ್ಮ ಭೂಮಿಯ ಒಂದು ಇಂಚು ಜಾಗವನ್ನೂ ವಿಶ್ವದ ಯಾವುದೇ ಶಕ್ತಿಯಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬ ಭರವಸೆಯನ್ನು ನಾನು ನೀಡಬಲ್ಲೆ…’

ಲಡಾಖ್‌ ನೆತ್ತಿಯ ಮೇಲೆ ರಕ್ಷಣಾ ಸಚಿವರು ಸಿಡಿಸಿದ ಈ ಮಾತು, ದೇಶದ ಪಾಲಿಗೆ ಭರವಸೆ ಎನ್ನುವುದು ಎಷ್ಟು ನಿಜವೋ, ಚೀನದ ಆತ್ಮ ಸಾಕ್ಷಿಯ ಎದೆಗೆ ಅಪ್ಪಳಿಸಿದ ಕ್ಷಿಪಣಿ ಎನ್ನುವುದೂ ಅಷ್ಟೇ ಸತ್ಯ.

ಗಾಲ್ವಾನ್‌ ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ಲಡಾಖ್‌ನ ಮುಂಚೂಣಿಯ ನೆಲೆ ಸ್ಟಾಕ್ನಾಗೆ ಭೇಟಿ ನೀಡಿದ ರಾಜನಾಥ್‌, ಚೀನದ ಮುಖವಾಡ ಕಳಚುವ ಮಾತುಗಳನ್ನಾಡಿದರು.

ಮಾತುಕತೆಯೇ ಉತ್ತಮ: ಲಡಾಖ್‌ ಗಡಿ ವಿವಾದ ಪರಿಹರಿಸಲು ನಿರಂತರ ಮಾತುಕತೆಗಳು ನಡೆಯುತ್ತಿವೆ. ಆದರೆ, ಅವು ಎಷ್ಟರ ಮಟ್ಟಿಗೆ ಸಫ‌ಲತೆ ಕಾಣುತ್ತವೆ ಎಂಬುದನ್ನು ಹೇಳಲಾರೆ ಎಂಬ ಸಚಿವರ ಮಾತು ಚೀನದ ಕಪಟಬುದ್ಧಿಗೆ ಹಿಡಿದ ಕನ್ನಡಿ.

Advertisement

‘ಮಾತುಕತೆಯಿಂದ ಬಿಕ್ಕಟ್ಟು ತಣ್ಣಗಾಗುವುದಾದರೆ ಅದಕ್ಕಿಂತ ಉತ್ತಮ ಮಾರ್ಗ ಬೇರೇನಿದೆ?’ ಎಂಬ ಪ್ರಶ್ನೆಯಲ್ಲಿ ಭಾರತದ ಶಾಂತಿತತ್ವದ ಪ್ರತಿಧ್ವನಿ ಮೇಳೈಸಿತ್ತು.

ಹುತಾತ್ಮರ ಸ್ಮರಣೆ: ಜೂ.15ರಂದು ಗಾಲ್ವಾನ್‌ ತೀರದ ಸಂಘರ್ಷದಲ್ಲಿ ನಮ್ಮ ವೀರಯೋಧರು ಗಡಿರಕ್ಷಣೆಗಾಗಿ ಹುತಾತ್ಮರಾದರು. ನಿಮ್ಮೆಲ್ಲರನ್ನು ಭೇಟಿಯಾಗಿ ಇಂದು ನನಗೆ ಸಂತೋಷವಾಗಿದೆ. ಆದರೆ, ಆ ಹುತಾತ್ಮ ಯೋಧರ ನಷ್ಟದಿಂದಾಗಿ ನನ್ನ ಹೃದಯ ಭಾರವಾಗಿದೆ. ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ ಎಂದು ಸಚಿವರು ಹೇಳಿದರು.

ರಕ್ಷಣಾ ಸಚಿವರು ಲಡಾಖ್‌ ಪ್ರವಾಸ ಮುಗಿಸಿ ಶನಿವಾರ ಜಮ್ಮು ಮತ್ತು ಕಾಶ್ಮೀರದ ನೆಲೆಗಳಿಗೆ ಭೇಟಿ ನೀಡಲಿದ್ದಾರೆ. ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌, ಭೂಸೇನೆ ಮುಖ್ಯಸ್ಥ ಜನರಲ್‌ ಎಂ.ಎಂ. ನರವಾಣೆ ಸಚಿವರಿಗೆ ಸಾಥ್‌ ನೀಡಿದ್ದಾರೆ.


ಹಿಂದಕ್ಕೆ ತಳ್ಳುವ ಸಮಯ:
‘ಚೀನದ ಕಮ್ಯುನಿಸ್ಟ್‌ ಪಕ್ಷವು ಒಡ್ಡಿರುವ ಸವಾಲನ್ನು ಹಿಂದಕ್ಕೆ ತಳ್ಳುವ ಸಮಯ ಬಂದಿದೆ ಎಂದು ಅಮೆರಿಕ ವಿದೇಶಾಂಗ ಸಚಿವ ಮೈಕ್‌ ಪೊಂಪ್ಯೊ ಎಚ್ಚರಿಸಿದ್ದಾರೆ. ಭಾರತದಂಥ ಏಷ್ಯನ್‌ ರಾಷ್ಟ್ರಗಳಲ್ಲದೆ ಯೂರೋಪ್‌ ಕೂಡ ಚೀನದ ಬೆದರಿಕೆಯನ್ನು ಅರ್ಥಮಾಡಿಕೊಂಡಿದೆ. ಆದರೆ, ಅಮೆರಿಕ ಇಷ್ಟು ವರ್ಷ ಈ ವಿಚಾರದಲ್ಲಿ ನಿದ್ರೆಯಲ್ಲಿತ್ತು. ಈ 40 ವರ್ಷಗಳಲ್ಲಿ ಬಂದ ಯುಎಸ್‌ ಆಡಳಿತಗಳೆಲ್ಲ ಅಮೆರಿಕದ ಮೇಲೆ ಚೀನ ಸವಾರಿ ಮಾಡಲು ಅವಕಾಶ ಮಾಡಿಕೊಟ್ಟಿದ್ದವು. ಆದರೆ, ಟ್ರಂಪ್‌ ಸರಕಾರದ ಮುಂದೆ ಚೀನದ ಆಟ ನಡೆಯುವುದಿಲ್ಲ’ ಎಂದು ಖಡಕ್‌ ಸಂದೇಶ ರವಾನಿಸಿದ್ದಾರೆ.


ಭಾರತ ಬಲಿಷ್ಠವಾದರೆ ಚೀನ ಮಂಕಾಗುತ್ತದೆ: ಅಮೆರಿಕ

ಭಾರತ ಆರ್ಥಿಕವಾಗಿ ಬಲಿಷ್ಠಗೊಂಡು ದೊಡ್ಡ ಪ್ರತಿಸ್ಪರ್ಧಿಯಾಗಿ ಮಿಂಚಿದರೆ, ಜಗತ್ತಿಗೆ ಚೀನದ ಮೇಲಿನ ನಂಬಿಕೆಯೇ ಮಂಕಾಗುತ್ತದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ. ಭಾರತದಲ್ಲಿ ಕಾರ್ಪೋರೇಟ್‌ ತೆರಿಗೆಗಳನ್ನು ಕಡಿತಗೊಳಿಸಲಾಗಿದೆ. ಇದರಿಂದಾಗಿ ಭಾರತ ಹೂಡಿಕೆಗೆ ಅತ್ಯಂತ ಪ್ರಶಸ್ತ ಸ್ಥಳವಾಗಿ ಮಾರ್ಪಟ್ಟಿದೆ ಎಂದು ಶ್ವೇತ ಭವನದ ಆರ್ಥಿಕ ಸಲಹೆಗಾರ ಲ್ಯಾರಿ ಹೇಳಿದ್ದಾರೆ.

ವಿದೇಶಿ ಕಂಪೆನಿಗಳಿಗೆ ಅತಿದೊಡ್ಡ ತಡೆಯಾಗಿದ್ದ ಕಾರ್ಪೊರೇಟ್‌ ತೆರಿಗೆಯನ್ನು ಕಳೆದ ವರ್ಷವಷ್ಟೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಕಡಿತಗೊಳಿಸಿದ್ದರು. ಚೀನ ಉತ್ಪನ್ನಗಳ ವಿರುದ್ಧ ಭಾರತ ಸಹಿತ ಹಲವು ದೇಶಗಳು ನಿಷೇಧ ಘೋಷಿಸಿವೆ. ಈ ನಡುವೆ ಯುಎಸ್‌ ಕಂಪೆನಿಗಳಾದ ಗೂಗಲ್‌, ಫೇಸ್‌ಬುಕ್‌ ಭಾರತದಲ್ಲಿ ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡುವುದಾಗಿ ಘೋಷಿಸುತ್ತಿರುವುದರಿಂದ ಅಮೆರಿಕ ಈ ಅನಿಸಿಕೆ ವ್ಯಕ್ತಪಡಿಸಿದೆ.

ನಾನು ಭಾರತೀಯರನ್ನೂ ಪ್ರೀತಿಸುತ್ತೇನೆ, ಚೀನೀಯರನ್ನೂ ಪ್ರೀತಿಸುತ್ತೇನೆ. ಆ ಜನರಿಗಾಗಿ ಶಾಂತಿ ಕಾಪಾಡಲು ನಾನು ಎಲ್ಲವನ್ನೂ ಮಾಡಲು ಸಿದ್ಧನಿದ್ದೇನೆ.
– ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next