ಶಿವಮೊಗ್ಗ: ಚಾಕು ಹಾಕಿದವರಿಗೆ ಹಾರ ಹಾಕಿ ಸನ್ಮಾನ ಮಾಡಲು ಸಾಧ್ಯವಿಲ್ಲ. ಪೊಲೀಸರು ಯಾವ ಕ್ರಮ ಕೈಗೊಳ್ಳಬೇಕು ಅದನ್ನು ಕೈಗೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾದ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ ಬಿ ವೈ ವಿಜಯೇಂದ್ರ ಸೋಮವಾರ ಚಾಕು ಇರಿತಕ್ಕೊಳಗಾದ ಪ್ರೇಮ್ ಸಿಂಗ್ ಅರೋಗ್ಯ ವಿಚಾರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಡಾರಿಗಳು ಈ ದೇಶದ ಇತಿಹಾಸ ಗೊತ್ತಿಲ್ಲದೆ ಇರುವವರು. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಮಹಾನ್ ವ್ಯಕ್ತಿಗಳ ಬಗ್ಗೆ ಅಪಚಾರ ಮಾಡಿದ್ದಾರೆ. ಮಂಗಳೂರು ಶಿವಮೊಗ್ಗ ಜಿಲೆಯಲ್ಲಿ ಪುನರವರ್ತನೆಯಾಗುತ್ತಿದೆ. ಇದರ ಹಿಂದೆ ಪಿತೂರಿಯಿದೆ ಎಂದರು.
ಇಲ್ಲಿ ಯಾರು ಏನು ಬೇಕಾದರೂ ಮಾಡಬಹುದು ಎನ್ನುವ ಮನಸ್ಥಿತಿಯಿದೆ. ನಮ್ಮ ಸರ್ಕಾರ ಅಂತವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತದೆ. ನಾವೆಲ್ಲ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತೇವೆ. ಈ ಪ್ರಕರಣಗಳ ಹಿಂದೆ ಯಾವ ಸಂಘಟನೆಯಿದೆ ಎಂದು ಪದೇ ಪದೇ ಹೇಳಲು ಹೋಗುವುದಿಲ್ಲ. ಅದು ಎಲ್ಲರಿಗೂ ತಿಳಿದಿರುವ ಓಪನ್ ಸಿಕ್ರೇಟ್ ಎಂದು ವಿಜಯೇಂದ್ರ ಹೇಳಿದರು.
ಇದನ್ನೂ ಓದಿ:ಕಾಂಗ್ರೆಸ್ ನಿಂದ ತಿಂಗಳಿಗೊಂದು ಹೋರಾಟ? ಚುನಾವಣಾ ವಸ್ತುವಿಗೆ ಇನ್ನೂ ಹುಡುಕಾಟ
ಪ್ರೇಮ್ ಸಿಂಗ್ ಭೇಟಿ ಮಾಡಿ ಆರೋಗ್ಯ ವಿಚಾರಣೆ ಮಾಡಿದೆವು. ದೇವರು ದೊಡ್ಡವನು, ಒಂದು ಕ್ಷಣ ತಡಮಾಡದೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದಷ್ಟು ಬೇಗ ಆಸ್ಪತ್ರೆಗೆ ಸೇರಿದ್ದ ಹಿನ್ನೆಲೆಯಲ್ಲಿ ಪ್ರಾಣಾಪಾಯವಾಗಿಲ್ಲ. ಇನ್ನು ಎಂಟು ದಿನಗಳ ಕಾಲ ಚಿಕಿತ್ಸೆ ಪಡೆಯಬೇಕಿದೆ ಎಂದು ವಿಜಯೇಂದ್ರ ಮಾಹಿತಿ ನೀಡಿದರು.