ಬೆಳಗಾವಿ: ಕೇಂದ್ರ ಸರಕಾರದ ಹೊಸ ಶಿಕ್ಷಣ ನೀತಿಯನ್ನು ಒಪ್ಪಲು ಸಾಧ್ಯವೇ ಇಲ್ಲ. ಈ ಹಿಂದೆಯೂ ನಾವು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟವಾಗಿ ಹೇಳಿದರು.
ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೊಸ ಶಿಕ್ಷಣ ನೀತಿಗೆ ನಮ್ಮ ಒಪ್ಪಿಗೆ ಇಲ್ಲ. ಹೀಗಾಗಿ ಪಠ್ಯ ಪರಿಷ್ಕರಣೆ ಆಗಲೇಬೇಕು ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಕೇಸರೀಕರಣ ಆಗಬಾರದು. ಆದರೆ ಬಿಜೆಪಿಯವರು ಅದನ್ನು ಮಾಡಿದ್ದಾರೆ. ಇದರ ಬಗ್ಗೆ ಈಗಾಗಲೇ ಶಿಕ್ಷಣ ತಜ್ಞರು ಪರಿಣಿತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಇದೇ ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ತಜ್ಞರ ಸಮಿತಿ ರಚಿಸಿ ಇದರ ಸಮಗ್ರ ಪರಾಮರ್ಶೆ ಮಾಡಲಾಗುವುದು. ಈ ಸಮಿತಿಯ ಅಭಿಪ್ರಾಯ ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮಕೈಗೊಳ್ಳಲಾಗುವದು ಎಂದು ಹೇಳಿದರು.
ಸುವರ್ಣ ವಿಧಾನಸೌಧಕ್ಕೆ ಸರಕಾರಿ ಕಚೇರಿಗಳನ್ನು ಸ್ಥಳಾಂತರ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಇದು ಅವೈಜ್ಞಾನಿಕ. ನಾನು ಈ ಹಿಂದೆ ವಿರೋಧ ಪಕ್ಷದಲ್ಲಿದ್ದಾಗಲೂ ವಿರೋಧ ಮಾಡಿದ್ದೇನೆ. ಒಂದು ಇಲಾಖೆ ತಂದರೆ ಅದರ ಕಾರ್ಯದರ್ಶಿ ಮಟ್ಟದ ಕಚೇರಿ ಬೆಂಗಳೂರಿನಲ್ಲಿ ಉಳಿಯುತ್ತದೆ. ಆಗ ಒಂದು ಸಹಿಗೆ ಎರಡೆರಡು ಕಡೆ ಅಲೆದಾಡಬೇಕಾಗುತ್ತದೆ. ಅದರ ಬದಲಾಗಿ ಇಲ್ಲಿ ಮೂರು ತಿಂಗಳಿಗೊಮ್ಮೆ ಸಚಿವ ಸಂಪುಟ ಸಭೆ ಮಾಡಬಹುದು ಎಂದರು.
ಆಡಳಿತಾತ್ಮಕ ಅನುಕೂಲದ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವುದು ಸೂಕ್ತ. ಈ ಸಂಬಂಧ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಲಾಗುವುದು ಎಂದು ಅವರು ಹೇಳಿದರು.