ನವ ದೆಹಲಿ : ದೇಶದಲ್ಲಿನ ಕೋವಿಡ್ 19 ಪರಿಸ‍್ಥಿತಿಯನ್ನು ಅವಲೋಕಿಸಿದರೇ, ಈಗಿರುವ ಲಸಿಕೆ ನೀತಿಯನ್ನು ರದ್ದುಗೊಳಿಸುವಂತೆ ನಿರ್ದೇಶನ ನೀಡಲು ಆಗುವುದಿಲ್ಲ, ಮಾತ್ರವಲ್ಲದೇ, ಪ್ರಸ್ತು ಸ್ಥಿತಿಯಲ್ಲಿ ಮನೆ ಮನೆಗೆ ಹೋಗಿ ಲಸಿಕೆಯನ್ನು ನೀಡಿ ಎಂದು ಆದೇಶಿಸಲು ಸಾಧ್ಯವಿಲ್ಲವೆಂದು ಇಂದು(ಸಪ್ಟೆಂಬರ್ 8) ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಯುವ ವಕೀಲರ ಸಂಘವೊಂದು ಅಂಗವಿಕಲರು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ದುರ್ಬಲ ವರ್ಗದವರಿಗೆ ಹಾಗೂ ಕೋವಿನ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಕೊಳ್ಳಲಾಗದೇ, ಲಸಿಕೆ ಸಿಗದೇ ಸಮಸ್ಯೆ ಅನುಭವಿಸುತ್ತಿರುವವರ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಲು ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ತಿಳಿಸಿದೆ.
ಇದನ್ನೂ ಓದಿ : ಪ.ಬಂ: ರಾಜ್ಯದ 61 ಬಿಜೆಪಿ ನಾಯಕರಿಗೆ ವಿಐಪಿ ಭದ್ರತೆ ನೀಡಿ : ದೀದಿ ಸರ್ಕಾರಕ್ಕೆ ಕೇಂದ್ರ ಮನವಿ
ದೇಶದಲ್ಲಿ ಲಸಿಕೆ ನೀಡಿಕೆಯ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೇಕಡಾ, 60 ಕ್ಕಿಂತ ಹೆಚ್ಚು ಮಂದಿಗೆ ಈಗಾಗಲೇ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ ಎಂದು ಹೇಳಿದೆ. ಮಾತ್ರವಲ್ಲದೇ, ಪ್ರದೇಶದಿಂದ ಪ್ರದೇಶಕ್ಕೆ ಕೋವಿಡ್ ಪರಿಸ್ಥಿತಿ ಭಿನ್ನವಾಗಿದೆ. ಲಡಾಖ್, ಉತ್ತರ ಪ್ರದೇಶದಲ್ಲಿರುವ ಪರಿಸ್ಥಿತಿ, ಕೇರಳಕ್ಕಿಂತ ಭಿನ್ನವಾಗಿದೆ. ಕೋವಿಡ್ ಸೋಂಕಿನ ಪರಿಸ್ಥಿತಿ ದೇಶದ ಪ್ರತಿ ರಾಜ್ಯದಲ್ಲೂ ಬೇರೆ ಬೇರೆಯಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಸವಾಲಿದೆ. ಹಾಗಾಗಿ ಮನೆ ಮನೆಗೆ ಹೋಗಿ ಲಸಿಕೆ ನೀಡುವುದು ಸುಲಭವಲ್ಲ. ಕೆಲವೆಡೆ ಸೋಂಕು ಕಡಿಮೆ ಪ್ರಮಾಣದಲ್ಲಿದ್ದರೇ, ಇನ್ನು ಕೆಲವೆಡೆ ಸೊಂಕಿನ ಪ್ರಮಾಣ ಹೆಚ್ಚಳವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಅರ್ಜಿಗೆ ಪೂರಕವಾಗಿ ಆದೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಹಿಮಾ ಕೊಹ್ಲಿ ಅವರಿದ್ದ ತ್ರಿಸದಸ್ಯ ನ್ಯಾಯ ಪೀಠ ಅರ್ಜಿಯನ್ನು ವಿಚಾರಣೆ ಮಾಡಿದ್ದು, ಅರ್ಜಿ ಸಲ್ಲಿಸಿದ ಯುವ ವಕೀಲರ ಸಂಘಕ್ಕೆ, ತಮ್ಮ ಸಲಹೆಗಳೊಂದಿಗೆ ಆರೋಗ್ಯ ಸಚಿವಾಲಯವನ್ನು ಸಂಪರ್ಕಿಸುವಂತೆ ಸೂಚಿಸಿದೆ.
ಇದನ್ನೂ ಓದಿ : ಕೈಗಾರಿಕಾ ವಲಯದ ನೌಕರರಿಗೆ ತಯಾರಾಗುತ್ತಿದೆ ಎಸಿ ಹೆಲ್ಮೆಟ್ | ವಿಶೇಷತೆ ಏನು.?ಇಲ್ಲಿದೆ ಮಾಹಿತಿ