Advertisement

ಮನೆ, ಮಂದಿರಗಳಲ್ಲಿ ಬೆಳಗಿದ ಹಣತೆ, ಮೋಂಬತ್ತಿ

01:48 PM Apr 06, 2020 | Sriram |

ಮಂಗಳೂರು/ಉಡುಪಿ: ಮಾರಕ ಕೋವಿಡ್ 19 ವೈರಸ್‌ ಸೋಂಕಿನ ವಿರುದ್ದದ ಹೋರಾಟಕ್ಕೆ ಸಮಗ್ರ ದೇಶ ಒಂದಾಗಬೇಕು ಎಂಬರ್ಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಮಂಗಳೂರು, ಉಡುಪಿ, ಕಾಸರಗೋಡು ಸೇರಿದಂತೆ ಕರಾವಳಿಯ ಜನರು ರವಿವಾರ ರಾತ್ರಿ 9 ಗಂಟೆಯಿಂದ 9 ನಿಮಿಷಗಳ ಕಾಲ ತಮ್ಮ ಮನೆಯಲ್ಲಿಯೇ ದೀಪ ಬೆಳಗಿಸಿ ವೈರಾಣು ಉಂಟುಮಾಡಿದ ಕಗ್ಗತ್ತಲೆ ತೊಡೆಯುವ ಮಹಾಸಂಕಲ್ಪ ತೊಟ್ಟರು.

Advertisement

ಉಡುಪಿ ಶ್ರೀಕೃಷ್ಣ ಮಠದ ಹೆಬ್ಟಾಗಿಲಿನಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಆಡಳಿತ ಮೊಕ್ತೇಸರ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ದೀಪಗಳನ್ನು ಬೆಳಗಿ ರಾಷ್ಟ್ರಕ್ಕೆ ಒಳಿತನ್ನು ಕೋರಿದರು.
ಬಿಷಪ್‌ ಅವರ ಸೂಚನೆಯಂತೆ ವಿವಿಧ ಚರ್ಚ್‌ಗಳ ಧರ್ಮಗುರುಗಳು ಅವರವರ ನಿವಾಸದಲ್ಲಿ, ಭಕ್ತರು ಮನೆಗಳಲ್ಲಿ ದೀಪಗಳನ್ನು ಬೆಳಗಿದರು. ರಾತ್ರಿ 9 ಗಂಟೆವರೆಗೆ ತೆರೆದಿರುವ ದೇವಸ್ಥಾನಗಳಲ್ಲಿ ದೀಪಗಳನ್ನು ಬೆಳಗಲಾಯಿತು.

ಜಿಲ್ಲೆಯಾದ್ಯಂತ ಮನೆ ಮನೆಗಳಲ್ಲಿ ದೀಪ ಬೆಳಗಿ ಕೋವಿಡ್ 19 ಅಂಧಕಾರ ಅಳಿಸೋಣ ಎಂದು ಶಪಥ ಮಾಡಿದ ದೃಶ್ಯ ಎಲ್ಲೆಡೆ ಕಂಡುಬಂತು. ಪ್ರಧಾನಿಯ ಕರೆಯ ಪ್ರಕಾರ ಬಹುತೇಕ ಮನೆಮಂದಿಯೆಲ್ಲ ದೀಪ ಬೆಳಗಿಸಿ ಕೋವಿಡ್ 19 ಅಂಧಕಾರ ಅಳಿಸುವತ್ತ ಪಣತೊಟ್ಟರು. ಈ ಮೂಲಕ ಹತ್ತಾರು ದಿನಗಳಿಂದ ಗೃಹದಿಗ್ಬಂಧನ ಅಥವಾ ಕ್ವಾರಂಟೈನ್‌ನಲ್ಲಿ ಇರುವ ಕೊರೊನಾ ಸೋಂಕುಪೀಡಿತರಿಗೆ ಧೈರ್ಯ, ಆತ್ಮವಿಶ್ವಾಸ ತುಂಬಲಾಯಿತು.

ಮನೆಯ ಬಾಗಿಲಲ್ಲಿ , ಟೆರೇಸ್‌ನಲ್ಲಿ ಹಣತೆ!
ರವಿವಾರ ರಾತ್ರಿ 9 ಗಂಟೆಗೆ ಜಿಲ್ಲೆಯ ಬಹುತೇಕ ಜನರು ತಮ್ಮ ಮನೆಯ ಬಾಗಿಲಲ್ಲಿ ನಿಂತು, ಇನ್ನೂ ಕೆಲವರು ಮನೆಯ ಟೆರೇಸ್‌ ಮೇಲೇರಿ, ಫ್ಲಾ ಟ್‌ಗಳ ಬಾಲ್ಕನಿಯಲ್ಲಿ ನಿಂತು ಒಬ್ಬೊಬ್ಬರಾಗಿ ಒಂದೊಂದು ದೀಪ ಬೆಳಗಿದರು. ಬಹುತೇಕ ಕಡೆಗಳಲ್ಲಿ ಮೋಂಬತ್ತಿ, ಟಾರ್ಚ್‌, ಮೊಬೈಲ್‌ ಲೈಟ್‌ ಮೂಲಕವೂ ದೀಪವನ್ನು ಪ್ರಾತಿನಿಧಿಕವಾಗಿ ಬೆಳಗಲಾಯಿತು. ಈ ಮೂಲಕ 9 ನಿಮಿಷ ಜಿಲ್ಲೆಯಿಡೀ ಪ್ರಕಾಶಮಾನವಾಗಿ ಬೆಳಗಿದಂತೆ ಭಾಸವಾಯಿತು.

ದೀಪಾವಳಿಯ ಸಂದರ್ಭದಲ್ಲಿಯಾದರೂ ಎಲ್ಲರೂ ಮನೆಗಳಲ್ಲಿ ಏಕಕಾಲದಲ್ಲಿ ಇರುವುದು ಸಂಶಯ, ಆದರೆ ಈ ಬಾರಿ ಲಾಕ್‌ಡೌನ್‌ನಿಂದ ಎಲ್ಲರೂ ಮನೆಯಲ್ಲಿದ್ದ ಕಾರಣ ದೀಪವಾಳಿಗಿಂತಲೂ ಅಧಿಕ ಜನರ ಪಾಲ್ಗೊಳ್ಳುವಿಕೆಯಲ್ಲಿ ದೀಪಗಳು ಬೆಳಗಿದವು. ದೀಪ ಬೆಳಗಿಸುವಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲಾಗಿತ್ತು.

Advertisement

ವಿಶೇಷ ಪ್ರಾರ್ಥನೆ
ಮುಸ್ಲಿಮರ ಮನೆಗಳಲ್ಲಿ ಕೋವಿಡ್ 19 ನಾಶವಾಗುವಂತೆ ವಿಶೇಷ ಪ್ರಾರ್ಥನೆಯನ್ನು ನಡೆಸಲಾಯಿತು.ದೀಪ ಹಚ್ಚುವಾಗ ಮನೆಯ ಉಳಿದ ಬಲ್ಬ್ ಲೈಟ್‌ಗಳನ್ನು ಬಂದ್‌ ಮಾಡುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ ಬಹುತೇಕ ಕಡೆಗಳಲ್ಲಿ ದೀಪದ ಬೆಳಕು ಪ್ರಜ್ವಲಿಸುವಂತೆ ಕಂಡಿತು. ಟಿವಿ ಫ್ರಿಜ್‌, ಫ್ಯಾನ್‌, ಎಸಿ ಸೇರಿದಂತೆ ಎಲೆಕ್ಟ್ರಾನಿಕ್‌ ಉಪಕರಣಗಳು ಎಂದಿನಂತೆ ನಡೆಯುತ್ತಿದ್ದವು. ಈ ಬಗ್ಗೆ ಮೆಸ್ಕಾಂ ಸಲಹೆ ನೀಡಿದ್ದರೂ ಕೂಡ ಕೆಲವೆಡೆಗಳಲ್ಲಿ ಮಾತ್ರ ಇಡೀ ಮನೆಯ ಮೈನ್‌ ಸ್ವಿಚ್ಚನ್ನೇ ಆಫ್‌ ಮಾಡಿದ್ದರು.

ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಶ್ರಮಿಸು ತ್ತಿರುವವರಿಗೆ ಬೆಂಬಲ ಸೂಚಿಸುವ ನೆಲೆ ಯಲ್ಲಿ ಇತ್ತೀಚೆಗೆ ಪ್ರಧಾನಿ ಕರೆಯಂತೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಲಾಗಿತ್ತು. ಈ ವೇಳೆ ಕೆಲವರು ಮನೆಯಿಂದ ಹೊರಬಂದು ಸಂಭ್ರಮಾಚರಣೆ ಮಾಡಿದ್ದೂ ಇದೆ. ಆದರೆ, ದೀಪ ಬೆಳಗಿಸುವ ಕಾರ್ಯಕ್ಕಾಗಿ ಯಾರೂ ರಸ್ತೆಗೆ ಇಳಿಯಬಾರದು; ಎಲ್ಲರೂ ಮನೆಯಲ್ಲಿಯೇ ಆಚರಿಸಿ ಎಂದು ಪ್ರಧಾನಿ ಸೂಚನೆಯ ಪ್ರಕಾರ ಮನೆಯಿಂದ ಹೊರ ಬರುವ ಪ್ರಯತ್ನವನ್ನು ಯಾರೂ ಮಾಡಿಲ್ಲ ಎಂಬುದು ವಿಶೇಷ. ನಗರದ ಆಸ್ಪತ್ರೆ, ಪೊಲೀಸ್‌ ಠಾಣೆ, ಉತ್ಪಾದನಾ ಘಟಕ, ಎಟಿಎಂ, ಮೆಡಿಕಲ್‌ ಸೇರಿದಂತೆ ಅಗತ್ಯ ವಸ್ತುಗಳ ಮಳಿಗೆಯಲ್ಲಿ ಎಂದಿನಂತೆಯೇ ವಿದ್ಯುತ್‌ ಇತ್ತು.

ಗಣ್ಯರ ಸಾಥ್‌
ವಿವಿಧ ಸ್ವಾಮೀಜಿಯವರು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ, ಶಾಸಕರಾದ ವೇದವ್ಯಾಸ ಕಾಮತ್‌, ಡಾ|ವೈ.ಭರತ್‌ ಶೆಟ್ಟಿ, ಕೆ. ರಘುಪತಿ ಭಟ್‌ ಅವರು ತಮ್ಮ ಮನೆಯಲ್ಲಿ ಮನೆಮಂದಿಯೊಂದಿಗೆ ದೀಪ ಬೆಳಗಿದರು.

ಪಾಲಿಕೆ ಮೇಯರ್‌, ಉಪಮೇಯರ್‌, ಬಹುತೇಕ ಕಾರ್ಪೊರೇಟರ್‌, ಜಿ.ಪಂ./ತಾ.ಪಂ./ ಗ್ರಾ.ಪಂ.ನ ಹಲವು ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮನೆಯ ವಿದ್ಯುತ್‌ ದೀಪ ಆರಿಸಿ, ದೀಪ ಬೆಳಗಿದರು. ಕಲಾವಿದರು, ವೈದ್ಯರು, ಎಂಜಿನಿಯರ್‌ಗಳು ಸೇರಿದಂತೆ ಎಲ್ಲಾ ಸ್ತರದ ಜನರು ಇದೇ ವೇಳೆ ದೀಪ ಬೆಳಗಿ ಕೊರೊನಾ ಸೋಂಕು ತಂದಿಟ್ಟ ಅಂಧಕಾರ ಹೊಡೆದೋಡಿಸುವ ಭರವಸೆ ಮೂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next