ವಿಜಯಪುರ: ಬಬಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಲೇ ಅಭ್ಯರ್ಥಿ ವಿಜುಗೌಡ ಪಾಟೀಲ ಮಕ್ಕಳು ಪಿಸ್ತೂಲ್ ಮೂಲಕ ಗುಂಡು ಹಾರಿಸಿ ವಿಜಯೋತ್ಸವ ಮಾಡಿದ್ದಾರೆ. ಇದೀಗ ಮೊಸಳೆ ಕಣ್ಣೀರು ಹಾಕಿ ಅಭ್ಯರ್ಥಿ ಮತ ಯಾಚನೆಗೆ ಮುಂದಾಗಿದ್ದಾರೆ. ಇಂಥವರು ಕ್ಷೇತ್ರದಲ್ಲಿ ಶಾಸಕರಾದರೆ ವಿಜಯಪುರ ಜಿಲ್ಲೆಯನ್ನು ಬಿಹಾರ ಮಾದರಿ ರೂಪಿಸಲು ಹೊರಟಿರುವ ಅಂಥವರನ್ನು ಕ್ಷೇತ್ರದ ಜನರು ಅಯ್ಕೆ ಮಾಡಿಕೊಳ್ಳುವ ಅಗತ್ಯವಿದೆಯೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ವಕ್ತಾರ ಸಂಗಮೇಶ ಬಬಲೇಶ್ವರ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಪ್ರಶ್ನಿಸಿದರು.
ಗುರುವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ವಿಜುಗೌಡ ಪಾಟೀಲ ಅವರ ಪುತ್ರ ಸಮರ್ಥ ಅವರು ಗಾಳಿಯಲ್ಲಿ ಗುಂಡು ಹಾರಿಸಿದ ಹಾಗೂ ವಾಹನದಲ್ಲಿ ಕುಳಿತು ಗುಂಡು ಹಾರಿಸಿದ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, ವಿಜು ಗೌಡ ಅವರ ಮಗ ತಮ್ಮ ತಂದೆಗೆ ಟಿಕೆಟ್ ಘೋಷಣೆ ಆಗುತ್ತಲೇ ಗಾಳಿಯಲ್ಲಿ ಗುಂಡು ಹಾರಿಸಿ ವಿಜಯೋತ್ಸವ ಆಚರಿಸಿದ್ದಾರೆ. ಇದರೊಂದಿಗೆ ಬಿಹಾರ ಮಾದರಿಯನ್ನು ರೂಪಿಸುವುದನ್ನು ಹೇಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದರ ಮೂಲಕ ತೆರೆಯ ಹಿಂದಿನ ಮುಖವಾಡ ಬಯಲಾಗಿದೆ. ದೌರ್ಜನ್ಯ ಮನಸ್ಥಿತಿಯ ಇಂಥ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಈ ಬಗ್ಗೆ ಸಮಜಾಯಿಶಿ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಲಯೋನೆಲ್ ಮೆಸ್ಸಿಗೆ ಎರಡು ವಾರ ನಿಷೇಧ ಹೇರಿದ ಪಿಎಸ್ ಜಿ ಕ್ಲಬ್!
ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ವೇದಿಕೆ ಮೇಲೆ ಕಣ್ಣೀರು ಹಾಕಿ ಮತ ಕೇಳುತ್ತಿದ್ದಾರೆ. ದಶಕಗಳ ಹಿಂದೆ ವಿಜುಗೌಡ ಕೂಡ ಇದೇ ರೀತಿ ಗುಂಡು ಹಾರಿಸುವ ವರ್ತನೆ ತೋರಿದ್ದರು. ಇದೀಗ ವಿಜುಗೌಡ ಜೊತೆ ಅವರ ಮಕ್ಕಳೂ ಸೇರಿ ಬಬಲೇಶ್ವರ ಕ್ಷೇತ್ರವನ್ನು ಬಿಹಾರ ಮಾದರಿಯಲ್ಲಿ ರೂಪಿಸಲು ಮುಂದಾಗಿದ್ದಾರೆ ಎಂದು ದೂರಿದರು.
ಚುನಾವಣಾ ಈ ಹಂತದಲ್ಲಿ ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರ ಹೊಂದಲು ಅವಕಾಶ ಇಲ್ಲ. ಈ ಬಗ್ಗೆ ನಾವೇನೂ ದೂರು ನೀಡುವುದಿಲ್ಲ. ಪೊಲೀಸ್ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳು ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.