Advertisement

ಅಭ್ಯರ್ಥಿ, ಪಕ್ಷ ಅದಲು ಬದಲು!

11:01 AM Dec 13, 2019 | mahesh |

ಬೆಳಗಾವಿ: ಈ ಉಪ ಚುನಾವಣೆಯಲ್ಲಿ ಕಾಗವಾಡ ಕ್ಷೇತ್ರದಲ್ಲಿನ ಸ್ವಾರಸ್ಯಕರ ಸಂಗತಿ ಎಂದರೆ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು ಅದಲು-ಬದಲಾಗಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜು ಕಾಗೆ ಅವರು ಕಾಂಗ್ರೆಸ್‌ನಿಂದ ಹಾಗೂ ಶ್ರೀಮಂತ ಪಾಟೀಲ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ.
ಜೆಡಿಎಸ್‌ನಿಂದ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯಶ್ರೀಶೈಲ ತುಗಶೆಟ್ಟಿ ಕಣದಲ್ಲಿದ್ದಾರೆ. ಮೇಲ್ನೋಟಕ್ಕೆ
ಮೂವರು ಕಣದಲ್ಲಿದ್ದರೂ, ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆಯೇ ನೇರ ಪೈಪೋಟಿ.

Advertisement

ಎರಡನೇ ಉಪ ಚುನಾವಣೆ: ಕಾಗವಾಡ ಕ್ಷೇತ್ರಕ್ಕೆ ಇದು ಎರಡನೇ ಉಪ ಚುನಾವಣೆ. 1999ರಲ್ಲಿ
ಕಾಂಗ್ರೆಸ್‌ ನಿಂದ ಗೆದ್ದಿದ್ದ ಪಾಸಗೌಡ ಪಾಟೀಲ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ 2000ರಲ್ಲಿ ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ರಾಜು ಕಾಗೆ ಅವರು ಜನತಾದಳದಿಂದ ಸ್ಪರ್ಧೆ ಮಾಡಿ, ಜಯ ಗಳಿಸಿದ್ದರು. ತಾಲೂಕು ಕೇಂದ್ರದ ಸ್ಥಾನಮಾನ ಪಡೆದರೂ ಕಾಗವಾಡದಲ್ಲಿ ಹೊಸ ಬಸ್‌ ನಿಲ್ದಾಣ ನಿರ್ಮಾಣ ಬಿಟ್ಟರೆ ಹೇಳಿಕೊಳ್ಳುವಂತಹ ಬದಲಾವಣೆ ಕಾಣುತ್ತಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವಿಶಾಲವಾದ ಜಾಗ ಇದ್ದರೂ ಇದುವರೆಗೆ ಅಲ್ಲಿ ಮಾರುಕಟ್ಟೆ ಪ್ರಾಂಗಣ ನಿರ್ಮಾಣ ಆಗಿಲ್ಲ. ಯಾವುದೇ ಪ್ರಮುಖ ನೀರಾವರಿ ಸೌಲಭ್ಯ ಇಲ್ಲಿಲ್ಲ. ಬಸವೇಶ್ವರ ಏತ ನೀರಾವರಿ ಯೋಜನೆಗೆ ಈಗಾಗಲೇ ಚಾಲನೆ ಸಿಕ್ಕಿದ್ದರೂ ಕಾಮಗಾರಿ ಮಾತ್ರ ಬಹಳ ನಿಧಾನವಾಗಿ ಸಾಗಿದೆ.

ಖ್ಯಾತ ಜಲತಜ್ಞ ರಾಜೇಂದ್ರ ಸಿಂಗ್‌ ಅವರು ಅಗ್ರಾಣಿ ನದಿ ಪುನ:ಶ್ಚೇತನದ ಬಗ್ಗೆ ಮಾತನಾಡಿದಾಗ ಉತ್ತರ ಭಾಗದ ಜನ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ಕನಸು ಕಂಡಿದ್ದರು. ಅಗ್ರಾಣಿ ನದಿ ಪುನ:ಶ್ಚೇತನಕ್ಕಾಗಿ ಉನ್ನತ ಅಧಿಕಾರಿಗಳ ಜತೆ ಹೋರಾಟಗಾರರು ಸಭೆ ನಡೆಸಿದರು. ಆದರೆ, ಶಾಸಕರು ಆಸಕ್ತಿ ವಹಿಸದ ಕಾರಣ ಇದು ಕಾಗದದಲ್ಲೇ ಉಳಿಯಿತು ಎಂಬ ನೋವು ಈ ಭಾಗದ ರೈತರಲ್ಲಿದೆ.

ಇಬ್ಬರಿಗೂ ಒಳ ಹೊಡೆತದ ಭೀತಿ: ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳಿಬ್ಬರಿಗೂ ಒಳಪೆಟ್ಟಿನ ಆತಂಕ ಬಹಳ ಕಾಡುತ್ತಿದೆ. ಟಿಕೆಟ್‌ ವಂಚಿತರು ಹಾಗೂ ಆಕಾಂಕ್ಷಿಗಳು ಎಲ್ಲಿ ತಮ್ಮ ವಿರುದಟಛಿ ತೆರೆಮರೆಯಲ್ಲಿ ಕೆಲಸ ಮಾಡುತ್ತಾರೋ, ತಮ್ಮನ್ನು ಸೋಲಿಸಲು ವಿರೋಧಿಗಳ ಜೊತೆ ಕೈ ಜೋಡಿಸುತ್ತರೋ ಎಂಬ ಭೀತಿ ಅಭ್ಯರ್ಥಿಗಳಲ್ಲಿ ಕಾಣುತ್ತಿದೆ. ಅಭ್ಯರ್ಥಿಗಳ ಪಕ್ಷಾಂತರ ಅವರ ಬೆಂಬಲಿಗರು ಹಾಗೂ ನಾಯಕರ ಮೇಲೆಯೂ ಪರಿಣಾಮ ಬೀರಿದೆ. ಆದರೆ, ಈ ಭಾಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ತಳೆದಿರುವ ತಟಸ್ಥ ನಿಲುವು ಕಾಂಗ್ರೆಸ್‌ ವಲಯದಲ್ಲಿ ಆತಂಕಕ್ಕೆ ಕಾರಣ ವಾಗಿದೆ. ಇದರ ಲಾಭ ಪಡೆಯುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ರಾಜು ಕಾಗೆ ಬೆಂಬಲಿಗರನ್ನು
ಸೆಳೆದಿರುವ ಶ್ರೀಮಂತ ಪಾಟೀಲ ಹೆಚ್ಚಾಗಿ ಈ ಭಾಗದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಬಹಳವಾಗಿ ಅವಲಂಬಿಸಿದ್ದಾರೆ.

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ ಈಗ ಐದನೇ ಸಲ ಅಗ್ನಿ ಪರೀಕ್ಷೆ ಎದುರಿಸುತ್ತಿರುವ ಭರಮ
ಗೌಡ ಕಾಗೆ ಅವರಿಗೆ ಗೆಲುವು ಅಷ್ಟೊಂದು ಸುಲಭವಿಲ್ಲ. ಹಠಕ್ಕೆ ಬಿದ್ದು ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಪಡೆದು ಈ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸವಾಲು ಎದುರಿಸುತ್ತಿದ್ದಾರೆ. ಅದೇ ಇನ್ನೊಂದೆಡೆ, ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದಿರುವ ಶ್ರೀಮಂತ ಪಾಟೀಲ ಅವರಿಗೆ ತಮಗೆ ಅಂಟಿಕೊಂಡಿರುವ “ಅನರ್ಹ’ ಎಂಬ ಅರೋಪದ ಕಳಂಕವನ್ನು ನಿವಾರಣೆ ಮಾಡುವ ಸವಾಲು ಇದೆ.

Advertisement

ಕ್ಷೇತ್ರದ ಇತಿಹಾಸ
1967ರಿಂದ ಇದುವರೆಗೆ ಕಾಗವಾಡ ಕ್ಷೇತ್ರದಲ್ಲಿ 12 ಸಾರ್ವತ್ರಿಕ ಹಾಗೂ ಒಂದು ಉಪಚುನಾವಣೆ
ನಡೆದಿದೆ. ಕಾಂಗ್ರೆಸ್‌ ಒಟ್ಟು ಆರು ಬಾರಿ ಗೆದ್ದಿದೆ. ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕ್ಷೇತ್ರವನ್ನು
2000ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಾಜು
ಕಾಗೆ ಮುರಿದರು. ನಂತರ, 2004ರಿಂದ ಸತತ ಮೂರು ಬಾರಿ ಕಾಗೆ ಬಿಜೆಪಿಯಿಂದ ಶಾಸಕರಾಗಿ
ದಾಖಲೆ ಬರೆದರು. 2008 ಹಾಗೂ 2013ರಲ್ಲಿ ಜೆಡಿಎಸ್‌ದಿಂದ ಸ್ಪರ್ಧಿಸಿ ಸೋತಿದ್ದ ಶ್ರೀಮಂತ
ಪಾಟೀಲ ಅವರು, 2018ರಲ್ಲಿ ಕಾಂಗ್ರೆಸ್‌ನಿಂದ ಜಯ ಗಳಿಸಿ ಮೊದಲ ಬಾರಿಗೆ ಶಾಸಕರಾದರು.

ಪ್ರಮುಖ ವಿಷಯ
ಕ್ಷೇತ್ರದ ಬಹುತೇಕ ಮತದಾರರಲ್ಲಿ ಉಪ ಚುನಾವಣೆ ಬಗ್ಗೆ ಆಸಕ್ತಿ ಇಲ್ಲ. ಪಕ್ಷಾಂತರ ಮಾಡಿದ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಆಕ್ರೋಶ, ಅಸಮಾಧಾನ ಹೆಚ್ಚಾಗಿ ವ್ಯಕ್ತವಾಗುತ್ತಿದೆ. ಎರಡು ತಿಂಗಳ ಹಿಂದೆ ಭೀಕರ ನೆರೆ ಹಾವಳಿ ಸಂದರ್ಭದಲ್ಲಿ ನೆರೆ ಸಂಕಷ್ಟಕ್ಕೆ ನೆರವಾಗಬೇಕಾದ ಶಾಸಕರು ಕ್ಷೇತ್ರದಿಂದ ಮಾಯವಾಗಿದ್ದರು. ಕ್ಷೇತ್ರದಲ್ಲಿ ಗುಪ್ತಗಾಮಿನಿಯಂತೆ ಹರಿಯುತ್ತಿರುವ ಈ ಸಂತ್ರಸ್ತರ ಸಿಟ್ಟು ಚುನಾವಣೆಯಲ್ಲಿ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕಬ್ಬು ಬೆಳೆಗೆ ಖ್ಯಾತಿ ಪಡೆದ ಈ ಕ್ಷೇತ್ರದಲ್ಲಿ ಕಬ್ಬಿನ ಬಾಕಿ ವಿಷಯ ಗೌಣವಾಗಿದೆ. ರೈತರ ಕೂಗು ಅರಣ್ಯರೋದನವಾಗಿದೆ.

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next