Advertisement

ಅರ್ಜಿ ಹಾಕದಿದ್ರೂ KOLAR ಟಿಕೆಟ್‌- ಕೈ ಅಭ್ಯರ್ಥಿ ಕೊತ್ತೂರು ಮಂಜುನಾಥ್‌ ಅಚ್ಚರಿ

09:41 PM Apr 15, 2023 | Team Udayavani |

ಕೋಲಾರ: ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸದಿದ್ದರೂ ತಮಗೆ ಟಿಕೆಟ್‌ ಘೋಷಣೆ ಮಾಡಿರುವುದು ಆಶ್ಚರ್ಯ ತಂದಿದೆ ಎಂದು ಕೊತ್ತೂರು ಮಂಜುನಾಥ್‌ ಹೇಳಿದರು.

Advertisement

ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವೊಬ್ಬ ಉತ್ತಮ ಸಂಘಟನಾಕಾರ, ಮುಳಬಾಗಿಲು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದೇನೆ ಎಂಬುದನ್ನು ಗಮನಿಸಿ ತಮಗೆ ಟಿಕೆಟ್‌ ಘೋಷಣೆ ಮಾಡಿರಬಹುದು ಎಂದರು.

ಈಗಲೂ ಕೋಲಾರ ಟಿಕೆಟ್‌ ಸಿದ್ದರಾಮಯ್ಯ ಅವರಿಗೆ ನೀಡಬೇಕೆಂದು ಪಕ್ಷದ ಹೈಕಮಾಂಡನ್ನು ಒತ್ತಾಯಿಸುತ್ತಿದ್ದೇನೆ. ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧಿಸಿದರೆ ಸಂಪೂರ್ಣವಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದರು.

ಹೈಕಮಾಂಡ್‌ ತಮಗೆ ಟಿಕೆಟ್‌ ನೀಡಿರುವುದಕ್ಕೆ ಬದ್ಧನಾಗಿರುತ್ತೇನೆ. ಜಿಲ್ಲೆಯ ಹಿರಿಯ ಮುಖಂಡರಾದ ರಮೇಶ್‌ ಕುಮಾರ್‌, ನಜೀರ್‌ ಅಹ್ಮದ್‌, ಅನಿಲ್‌ ಕುಮಾರ್‌, ವಿ.ಆರ್‌. ಸುದರ್ಶನ್‌ ಮತ್ತಿತರರ ಒಪ್ಪಿಗೆ ಇದ್ದಲ್ಲಿ ಕೋಲಾರದಿಂದ ಸ್ಪರ್ಧಿಸಲು ತಾವು ಸಿದ್ದ ಎಂದು ಸ್ಪಷ್ಟಪಡಿಸಿದರು.

ಮುನಿಸು ಶಮನಕ್ಕೆ ಸುರ್ಜೇವಾಲ ಯತ್ನ
ಕೋಲಾರ: ಕೋಲಾರಕ್ಕೆ ಸಿದ್ದರಾಮಯ್ಯ ಬಾರದಿದ್ದರೆ ನಾಮಪತ್ರ ಸಲ್ಲಿಸುವುದಿಲ್ಲ ಎಂದು ಮುನಿಸಿಕೊಂಡಿದ್ದ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರನ್ನು ಸಮಾಧಾನಪಡಿಸಲು ಅವರ ನಿವಾಸಕ್ಕೆ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ದಿಢೀರ್‌ ಭೇಟಿ ನೀಡಿದ್ದರು.

Advertisement

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಸುರ್ಜೇವಾಲ, ಜೈ ಭಾರತ ಕಾರ್ಯಕ್ರಮ ಕುರಿತು ಚರ್ಚೆ ಮಾಡಲು ರಮೇಶ್‌ ಕುಮಾರ್‌ ಮನೆಗೆ ಬಂದಿರುವೆ. ಅವರನ್ನು ತಂದೆಯ ಸ್ಥಾನದಲ್ಲಿ ನೋಡುತ್ತಿರುವೆ. ಅವರಿಂದ ಕಲಿಯುವುದು ಸಾಕಷ್ಟಿದೆ ಎಂದು ತಿಳಿಸಿದರು.

ರಮೇಶ್‌ ಕುಮಾರ್‌ ಕೋಪ ಮಾಡಿಕೊಂಡಿಲ್ಲ. ಅವರು ಕೆಲ ವಿಷಯಗಳ ಕುರಿತು ನಮ್ಮ ಬಗ್ಗೆ ಕೋಪ ಮಾಡಿಕೊಳ್ಳುತ್ತಾರೆ. ಆದರೆ ನಮ್ಮ ಮನೆ ಒಡೆಯುವ ಕೆಲಸ ಮಾಡಿಲ್ಲ. ಅವರು ನಮ್ಮ ತಂದೆ ತಾಯಿ ಇದ್ದ ಹಾಗೆ ದ್ವೇಷವಿಲ್ಲ. ಬಿಜೆಪಿಯ ಹಾಗೆ ಒಡೆದಮನೆ ಕಾಂಗ್ರೆಸ್‌ ಅಲ್ಲ ಎಂದರು.

ಸಕ್ರಿಯ ರಾಜಕಾರಣಕ್ಕೆ ವಿ.ಆರ್‌.ಸುದರ್ಶನ್‌ ಗುಡ್‌ ಬೈ
ಕೋಲಾರ: ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ನಾಯಕರಾಗಿ ಪಕ್ಷದಲ್ಲಿ ದಶಕಗಳ ಸೇವೆ ಸಲ್ಲಿಸಿರುವ ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಸಕ್ರಿಯ ರಾಜಕಾರಣಕ್ಕೆ ಗುಡ್‌ ಬೈ ಹೇಳಿದ್ದಾರೆ.

ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಕಳೆದ ಹಲವಾರು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡು ಈಗ ಕಾರಣಾಂತರಗಳಿಂದ ದೂರ ಉಳಿಯುವ ನಿರ್ಧಾರ ತೆಗೆದುಕೊಂಡಿರುವುದಾಗಿ ಘೋಷಿಸಿದರು. ತಮ್ಮ ರಾಜಕೀಯ ನಿವೃತ್ತಿ ಕುರಿತು ಹೆಚ್ಚಿನ ವಿವರಗಳನ್ನು ಏ.25- 26ರ ನಂತರ ಮಾಧ್ಯಮಗಳಿಗೆ ತಿಳಿಸುವುದಾಗಿ ಹೇಳಿದ ಅವರು, ರಾಜಕಾರಣದಿಂದ ದೂರ ಉಳಿದರೂ ಸಾಮಾಜಿಕ ಹಾಗೂ ಅಭಿವೃದ್ಧಿಪರ ಸಂವಿಧಾನಬದ್ಧ ಕಾರ್ಯಕ್ರಮಗಳು ಮತ್ತು ಚಳವಳಿಗಳಲ್ಲಿ ಭಾಗವಹಿಸುವುದಾಗಿ ಸಷ್ಟಪಡಿಸಿದ್ದಾರೆ. ಬೇಡವೆಂದರೂ ಕೊತ್ತೂರು ಮಂಜುನಾಥ್‌ಗೆ ಟಿಕೆಟ್‌ ಘೋಷಿಸಿರುವ ಕಾಂಗ್ರೆಸ್‌ ಪಕ್ಷದ ನಿರ್ಧಾರದ ಕುರಿತು ಮೊದಲೇ ಅರಿತಿದ್ದ ಸುದರ್ಶನ್‌ ಅವರು ಈ ನಿರ್ಧಾರ ಕೈಗೊಂಡಿರಬಹುದೆ ಎಂಬ ಪ್ರಶ್ನೆ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next