ಬೆಂಗಳೂರು: ಮೈತ್ರಿ ಧರ್ಮ ಪಾಲಿಸಲು ಜೆಡಿಎಸ್‌ಗೆ ಎಂಟು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿರುವುದನ್ನೇ
ಸಹಿಸಿಕೊಳ್ಳಲಾಗದ ಕಾಂಗ್ರೆಸ್ ರಾಜ್ಯ ನಾಯಕರು ಮತ್ತು ಕಾರ್ಯಕರ್ತರು, ಈಗ ಜೆಡಿಎಸ್ ಗೆ ಕಾಂಗ್ರೆಸ್‌ನಿಂದಲೇ ಅಭ್ಯರ್ಥಿಗಳ “ದಾನ’ ಮಾಡುತ್ತಿರುವುದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಲೆಕ್ಕಾಚಾರದಲ್ಲಿ 28 ಕ್ಷೇತ್ರಗಳಲ್ಲಿ 8 ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಕಾಂಗ್ರೆಸ್ ಪಕ್ಷ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಎಂಟು ಕ್ಷೇತ್ರಗಳಲ್ಲಿ ಹಸ್ತ ಚಿಹ್ನೆ ಇಲ್ಲದೇ ಸ್ಪರ್ಧಿಸುವಂತಾಗಿದೆ. ರಾಷ್ಟ್ರ ಹಾಗೂ ರಾಜ್ಯ ನಾಯಕರ ಹೊಂದಾಣಿಕೆ ರಾಜಕಾರಣದಲ್ಲಿ ಕಾಂಗ್ರೆಸ್ ಒಂಭತ್ತು ಜಿಲ್ಲೆಗಳ 64 ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳಲಿದ್ದು, ಭವಿಷ್ಯದಲ್ಲಿ ಈ ಕ್ಷೇತ್ರಗಳಲ್ಲಿ ಪಕ್ಷ ಉಳಿಸಿಕೊಳ್ಳುವುದು ಕಷ್ಟ ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.
ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಹಾಸನ, ಮಂಡ್ಯ ಹಾಗೂ ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಬಲವಾಗಿದ್ದು, ಮೂರು ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಪ್ರತಿಸ್ಪರ್ಧಿಯಾಗಿದೆ. ಮೈತ್ರಿಯಿಂದಾಗಿ ಜೆಡಿಎಸ್‌ಗೆ ಬೆಂಬಲ ಸೂಚಿಸಿದರೆ, ಪಕ್ಷ ಕಾರ್ಯಕರ್ತರನ್ನು ಕಳೆದುಕೊಂಡು ಅನಾಯಾಸವಾಗಿ ತಳಮಟ್ಟದಲ್ಲಿ ಅಸ್ತಿತ್ವವೇ ಇಲ್ಲದಂತಾಗುವುಗುತ್ತದೆ. ಇದರಿಂದ ಭವಿಷ್ಯದಲ್ಲಿ ಈ ಜಿಲ್ಲೆಗಳಲ್ಲಿ ಪಕ್ಷದ ಧ್ವಜ ಹಿಡಿಯಲೂ ಕಾರ್ಯಕರ್ತರಿಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.
ಬೆಂಗಳೂರು ಉತ್ತರ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಬಿಜೆಪಿಯನ್ನು ಏಕಾಂಗಿಯಾಗಿಯೇ ಎದುರಿಸುವ ಶಕ್ತಿ ಹೊಂದಿದೆ. ಈಗ ಎರಡೂ ಕ್ಷೇತ್ರಗಳು ಜೆಡಿಎಸ್ ಪಾಲಾಗಿರುವುದರಿಂದ ಈ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹಾಲಿ ಶಾಸಕರು, ಸಚಿವರಿಗೆ ಜೆಡಿಎಸ್ ಪರ ಕೆಲಸ ಮಾಡುವ ಅನಿವಾರ್ಯತೆ ಉಂಟಾಗಿದೆ. ಪಕ್ಷದ ಅಧಿಕೃತ ಕಾರ್ಯಕರ್ತರು ಜೆಡಿಎಸ್‌ಗೆ ಜೈ ಎನ್ನುವಂತೆ ಮಾಡಿರುವುದು ಜೆಡಿಎಸ್‌ಗೆ ಕಾಂಗ್ರೆಸ್‌ನಿಂದಲೇ ಶಕ್ತಿ ತುಂಬುವ ಕೆಲಸ ಆಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಅಭ್ಯರ್ಥಿ “ದಾನ’ಕ್ಕೆ ಆಕ್ರೋಶ: ಉಡುಪಿ- ಚಿಕ್ಕಮಗಳೂರು,ಉತ್ತರ ಕನ್ನಡ ಹಾಗೂ ವಿಜಯಪುರ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಸ್ಪರ್ಧೆಗಿಳಿಸಲು ಪ್ರಬಲ ಅಭ್ಯರ್ಥಿಗಳೇ ಇಲ್ಲ. ಆದರೂ ಪಟ್ಟು ಹಿಡಿದು ಕ್ಷೇತ್ರಗಳನ್ನು ತೆಗೆದುಕೊಂಡಿದ್ದು, ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲಿ ಪಕ್ಷದ ಬೇರುಗಳನ್ನು ವಿಸ್ತರಿಸುವ ವ್ಯವಸ್ಥಿತ ಯತ್ನವನ್ನು ಜೆಡಿಎಸ್ ಮಾಡುತ್ತಿದೆ. ಅದಕ್ಕಾಗಿ ಕಾಂಗ್ರೆಸ್ ಬೆಂಬಲವಷ್ಟೇ ಅಲ್ಲ. ಕಾಂಗ್ರೆಸ್‌ನಿಂದ ಅಭ್ಯರ್ಥಿಗಳನ್ನೂ ಎರವಲು ಪಡೆಯುತ್ತಿದ್ದು, ಕಾಂಗ್ರೆಸ್ ನಾಯಕರು ಮೈತ್ರಿ ಹೆಸರಲ್ಲಿ ಪಕ್ಷದ ನಾಯಕರನ್ನು ಜೆಡಿಎಸ್ ಗೆ ದಾನ ಮಾಡುತ್ತಿರುವುದು ಕೆಲವು ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಾಂಪ್ರದಾಯಿಕ ಮತದಾರರ ಕಳೆದುಕೊಳ್ಳುವ ಭೀತಿ: ಸ್ವಾಂತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷವನ್ನೇ ನಂಬಿಕೊಂಡಿರುವ ದಲಿತರು ಹಾಗೂ ಅಲ್ಪ ಸಂಖ್ಯಾತ ಮತದಾರರು ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಚಿಹ್ನೆ ಇಲ್ಲದಿರುವುದರಿಂದ ಅನಿವಾರ್ಯವಾಗಿ ಬೇರೆ ಪಕ್ಷದ ಚಿಹ್ನೆಗೆ ಮತ ಹಾಕುವ ಪರಿಸ್ಥಿತಿಯನ್ನು ಪಕ್ಷವೇ ಒದಗಿಸಿ ಕೊಡುತ್ತಿದ್ದು, ಇದು ಭವಿಷ್ಯದಲ್ಲಿ ಸಾಂಪ್ರದಾಯಿಕ ಮತದಾರರೂ ಪಕ್ಷದಿಂದ ದೂರವಾಗಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂಬ ಮಾತುಗಳು ಕಾಂಗ್ರೆಸ್ ಪಾಳಯದಲ್ಲಿ ಕೇಳಿ ಬರುತ್ತಿವೆ.
ಶಂಕರ ಪಾಗೋಜಿ