ಕೊಳ್ಳೇಗಾಲ: ಕಾಂಗ್ರೆಸ್ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಭಾರೀ ಜನಸ್ತೋಮ ದೊಂದಿಗೆ ಶಕ್ತಿ ಪ್ರದರ್ಶನ ಮಾಡುವ ಮೂಲಕ ತಮ್ಮ ನಾಮಪತ್ರವನ್ನು ನಗರದ ಮಿನಿ ವಿಧಾನಸೌಧದಲ್ಲಿ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಗೀತಾ ಹುಡೇದ ರಿಗೆ ಸೋಮವಾರ ಸಲ್ಲಿಸಿದರು.
ನಗರದ ಬಸ್ ನಿಲ್ದಾಣದ ಬಳಿ ಇರುವ ವಿನಾಯಕ ದೇವಸ್ಥಾನದಲ್ಲಿ ಮಾಜಿ ಶಾಸಕ ರಾದ ಎಸ್.ಜಯಣ್ಣ, ಜಿ.ಎನ್.ನಂಜುಂಡ ಸ್ವಾಮಿ ಸೇರಿದಂತೆ ತಮ್ಮ ಅಪಾರ ಬೆಂಬಲಿಗ ರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ವಿವಿಧ ಮಂಗಳವಾದ್ಯ, ಡೋಳ್ಳು, ತಮಟೆ ಸದ್ದಿ ನೊಂದಿಗೆ ಮುಖ್ಯ ರಸ್ತೆಗಳಲ್ಲಿ ತೆರಳುವ ಮೂಲಕ ಸಾರ್ವಜನಿಕರ ಗಮನ ಸೆಳೆದು ತಾಲೂಕು ಕಚೇರಿಯ ಆವರಣದ ಬಳಿ ಬಂದು ಸೇರಿದರು.
ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ತಮ್ಮ ಪತ್ನಿ ಮಂಜುಳ, ಮಾಜಿ ಶಾಸಕರಾದ ಎಸ್. ಜಯಣ್ಣ, ಜಿ.ಎನ್.ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತೋಟೇಶ್, ಚಂದ್ರು ತೆರಳಿ ಅರ್ಜಿ ಪರಿಶೀಲಿಸಿದ ಬಳಿಕ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ 4 ಸೆಟ್‌ಗಳಲ್ಲಿ ಉಮೇದುವಾರಿಕೆಯನ್ನು ಚುನಾವಣಾ ಧಿಕಾರಿಗಳಿಗೆ ಸಲ್ಲಿಸಿದ್ದು ಈ ಬಾರಿಯ 2023ರ ವಿಧಾನಸಭಾ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಅಭ್ಯರ್ಥಿಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದರಿಂದ ಪಕ್ಷಕ್ಕೆ ಮತ್ತಷ್ಟು ಆನೆ ಬಲ ಬಂದಂತೆ ಆಗಿದೆ. ಕ್ಷೇತ್ರ ದಲ್ಲಿಯೂ ಸಹ ವೀರಶೈವ ಸಮಾಜದವರು ಕಾಂಗ್ರೆಸ್ ಬೆಂಬಲಿಸುವುದರಿಂದ ವಾಟಾಳು ಮಠದ ಶ್ರೀಗಳು ಈ ಹಿಂದೆ ಭವಿಷ್ಯ ನುಡಿದಂತೆ 1 ಲಕ್ಷದ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿಗೆ ಪ್ರತಿಸ್ಪರ್ಧಿ ಯಾರು ಎಂದು ಕಾದುನೋಡಬೇಕಾಗಿದೆ. ಮಾಜಿ ಶಾಸಕ ಎಸ್.ಬಾಲರಾಜ್ ಕಾಂಗ್ರೆಸ್ ತೊರೆಯುವುದಿಲ್ಲ. ಅವರನ್ನು ಮತ್ತೂಂದು ಬಾರಿ ಭೇಟಿ ಮಾಡಿ ಮನವೊಲಿಸುವ ಪ್ರಯತ್ನವನ್ನು ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಚುನಾವಣಾ ಪ್ರಚಾರ ಸಮಿತಿ ಸಂಚಾಲಕ ಹಾಗೂ ಚಿತ್ರ ನಿರ್ದೇಶಕ ಎಸ್ .ನಾರಾಯಣ್, ನಗರಸಭೆ ಅದ್ಯಕ್ಷೆ ರೇಖಾ ಹಾಗೂ ಮುಖಂಡರು, ಸಾವಿರಾರು ಕಾರ್ಯಕರ್ತರು ಇದ್ದರು.