ಬೆಂಗಳೂರು: ದೇಶದಲ್ಲಿ ಪ್ರತಿ ವರ್ಷ ಹೊಸದಾಗಿ 14 ಲಕ್ಷ ಮಂದಿ ಕ್ಯಾನ್ಸರ್ ರೋಗಕ್ಕಿಡಾಗುತ್ತಿದ್ದು, ಅದರಲ್ಲಿ 7ಲಕ್ಷ ರೋಗಿಗಳು ಚಿಕಿತ್ಸೆ ಫಲಿಸದೆ ಮೃತಪಡುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್. ಪಾಟೀಲ್ ತಿಳಿಸಿದರು.
ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ನಡೆದ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ವಿಶ್ವದಲ್ಲಿಯೇ ಅತಿ ಹೆಚ್ಚು ಜನರನ್ನು ಬಲಿ ತೆಗೆದುಕೊಳ್ಳುವ ರೋಗಗಳಲ್ಲಿ ಕ್ಯಾನ್ಸರ್ ದ್ವಿತೀಯ ಸ್ಥಾನದಲ್ಲಿದೆ. ಇಂದು ಹೆಚ್ಚಿನ ರೋಗಿಗಳು ಅಂತಿಮ ಹಂತದಲ್ಲಿ ಆಸ್ಪತ್ರೆ ಕಡೆ ಮುಖಮಾಡುತ್ತಿದ್ದು, ಇದಕ್ಕೆ ಜಾಗ್ರತೆ ಕೊರತೆಯೇ ಮುಖ್ಯ ಕಾರಣವಾಗಿದೆ. ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ತಿದ್ದುಪಡಿ ಮಾಡಿಕೊಂಡಲ್ಲಿ ಕ್ಯಾನ್ಸರ್‌ನಿಂದ ದೂರ ಉಳಿಯಬಹುದು ಎಂದು ಹೇಳಿದರು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಸಿ. ರಾಮಚಂದ್ರ ಮಾತನಾಡಿ, ಆಹಾರ ಪದ್ಧತಿ ಹಾಗೂ ಆಧುನಿಕ ಜೀವನಶೈಲಿಯಿಂದಲೇ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಚೀನಾ ದೆಶದ ಜನರು ತಮ್ಮ ಊಟದಲ್ಲಿ ಹೆಚ್ಚು ಹಣ್ಣು-ತರಕಾರಿಗಳಿಗೆ ಆದ್ಯತೆ ನೀಡುತ್ತಾರೆ. ಹೀಗಾಗಿ, ಅಲ್ಲಿನ ಜನತೆ ಆರೋಗ್ಯಯುತವಾಗಿ ಅಧಿಕ ವರ್ಷ ಜೀವಿಸುತ್ತಾರೆ. ಆದರೆ, ನಮ್ಮಲ್ಲಿ ಆಹಾರ ಪದ್ಧತಿ ಸಂಪೂರ್ಣವಾಗಿ ವಿರುದ್ಧವಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ ಎಂದರು.
ಕಿದ್ವಾಯಿ ಆಸ್ಪತ್ರೆ ವೈದ್ಯೆ ಡಾ. ಸವಿತಾ ಮಾತನಾಡಿ, ತಂಬಾಕು ಸೇವನೆಯಿಂದ ಶೇ.90 ಬಾಯಿಯ ಕ್ಯಾನ್ಸರ್ ಬರುತ್ತಿದೆ. ಈ ಹಿಂದೆ 40ರಿಂದ 60ವರ್ಷ ವಯೋಮಿತಿಯೊಳಗಿನವರಿಗೆ ಬಾಯಿಯ ಕ್ಯಾನ್ಸರ್ ಬರುತಿತ್ತು. ಆದರೆ, ಇದೀಗ 20ವರ್ಷದ ಯುವಕರಲ್ಲಿ ಸಹ ಕಾಣಿಸಿಕೊಳ್ಳುತ್ತಿದೆ ಎಂದರು.
ವಿಶೇಷ ಅಂಚೆ ಲಕೋಟೆ ಬಿಡುಗಡೆ
ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಭಾರತೀಯ ಅಂಚೆ ಇಲಾಖೆಯ ಸಹಯೋಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಶೇಷ ಅಂಚೆ ಲಕೋಟೆ ಸಿದ್ಧಪಡಿಸಿತ್ತು. ಇದನ್ನು ಅಂಚೆ ಇಲಾಖೆ ಜಯನಗರ ವಿಭಾಗದ ಹಿರಿಯ ಅಧೀಕ್ಷಕಿ ವಿ. ತಾರಾ ಬಿಡುಗಡೆ ಮಾಡಿದರು. ಕ್ಯಾನ್ಸರ್ ರೋಗದ ಬಗ್ಗೆ ಅರಿವಿನ ಸಂದೇಶ ಹೊತ್ತಿರುವ ಅಂಚೆ ಲಕೋಟೆ ಜನರಲ್ಲಿ ಅರಿವು ಮೂಡಿಸಲು ಸಹಾಯಕವಾಗಿದೆ ಅವರು ತಿಳಿಸಿದರು.