ಬೆಂಗಳೂರು: ಶೇಷಾದ್ರಿಪುರ ರಸ್ತೆಯ ಅಪೋಲೋ ಆಸ್ಪತ್ರೆ ವೈದ್ಯರು ಈಜಿಪ್ಟ್ ಪ್ರಜೆ ಮಗ್ದ ಹರೌನ್ (31) ಎಂಬ ಮಹಿಳೆಗೆ ವಿನಾಕಾರಣ ಕ್ಯಾನ್ಸರ್ ಇದೆ ಎಂದು ಚಿಕಿತ್ಸೆ ಪ್ರಾರಂಭಿಸಿದ್ದರಿಂದ ಅವರು ಸಾವು ಬದುಕಿನ ನಡುವೆ ನರಳುತ್ತಿದ್ದಾರೆ ಎಂದು ಮಾನವ ಬಂಧುತ್ವ ಸಂಘಟನೆ ಆರೋಪಿಸಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಸಂಚಾಲಕ ಮತ್ತು ವಕೀಲ ಅನಂತ್‌ನಾಯ್ಕ, ಮಗ್ದ ಹರೌನ್ ಅವರು 2017ರಲ್ಲಿ ಅಪೋಲೋ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಹೊಟ್ಟೆ ನೋವಿನಿಂದ 2018ರ ಆಗಸ್ಟ್‌ನಲ್ಲಿ ಅದೇ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ಮಾಡಿದ ವೈದ್ಯರು, “ಕ್ಯಾನ್ಸರ್ ಇದೆ ಚಿಕಿತ್ಸೆ ತೆಗೆದುಕೊಳ್ಳಬೇಕು’ ಎಂದು ಹೇಳಿದ್ದರು.
ಮಗ್ದ ಅವರಿಗೆ ಕ್ಯಾನ್ಸರ್ ಚಿಕಿತ್ಸೆ ಆರಂಭಿಸಲಾಗಿದೆ. ಎರಡೇ ತಿಂಗಳಲ್ಲಿ 9 ಕಿಮೋಥೆರಪಿ ಮತ್ತು ಎರಡು ಮೇಜರ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆ ವೇಳೆ ಅವರ ದೇಹದಲ್ಲಿನ ಕಿಮೋಪಾಟ್ ಅಂಶವನ್ನು ಇಳಿಸಲಾಗಿದೆ. ಇದರಿಂದ ಅವರ ತಲೆ ಕೂದಲು ಸಂಪೂರ್ಣವಾಗಿ ಉದುರಿದ್ದು, ನಡೆದಾಡಲು ಸಹ ಆಗದೆ, ವ್ಹೀಲ್ ಚೇರ್ ಬಳಸುವ ಹಂತ ತಲುಪಿದ್ದಾರೆ. ಮಾತನಾಡಲೂ ಆಗದೆ, ದಿನದ ಕಾರ್ಯಗಳಿಗೆ ಮತ್ತೂಬ್ಬರನ್ನು ಅವಲಂಬಿಸುವಂತಾಗಿದೆ ಎಂದರು.
ಮಗ್ದ ಅವರ ಈಜಿಪ್ಟ್ ವಿಸಾ ಅವಧಿಯೂ ಮುಗಿದಿದೆ. ತಮ್ಮ ದೇಶಕ್ಕೂ ಹಿಂದಿರುಗದ ಸ್ಥಿತಿಯಲ್ಲಿದ್ದು, ಚಿಕಿತ್ಸೆ ನೆಪದಲ್ಲಿ ಅಪೋಲೋ ಆಸ್ಪತ್ರೆ ಮಗ್ದ ಅವರಿಂದ ಲಕ್ಷಾಂತರ ರೂ. ತೆಗೆದುಕೊಳ್ಳಲಾಗಿದೆ. ಕೂಡಲೇ ಗೃಹ ಸಚಿವರು ಮಧ್ಯ ಪ್ರವೇಶಿಸಿ ಮಗ್ದ ಈಜಿಪ್ಟ್ ದೇಶಕ್ಕೆ ಹಿಂದಿರುಗಲು ನೆರವಾಗಬೇಕು. ಆಸ್ಪತ್ರೆ ಮಗ್ದ ಅವರಿಗೆ 10 ಕೋಟಿ ಪರಿಹಾರ ನೀಡಬೇಕು ಎಂದು ಅನಂತ್‌ನಾಯ್ಕ ಒತ್ತಾಯಿಸಿದ್ದಾರೆ.
ಪೊಲೀಸರು ಶಾಮೀಲು – ಆರೋಪ: “ಪ್ರಕರಣ ಸಂಬಂಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆದರೆ, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿಲ್ಲ’ ಎಂದು ವಕೀಲ ಅನಂತ್‌ನಾಯ್ಕ ಅರೋಪಿಸಿದ್ದಾರೆ. ಆಸ್ಪತ್ರೆ ವೈದ್ಯರ ವಿರುದ್ಧ ಜೀವಹಾನಿ, ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ಧಕ್ಕೆ, ತೀವ್ರ ಗಾಯ, ಕೊಲೆ ಯತ್ನ ಮತ್ತು ಬೆದರಿಕೆ ಆರೋಪದ ಮೇಲೆ ದೂರು ದಾಖಲಿಸಿಕೊಳ್ಳುವ ಅವಕಾಶವಿದೆ. ಆದರೆ, ಇದುವರೆಗೆ ಎಫ್ಐಆರ್ ಸಹ ದಾಖಲಿಸಿಲ್ಲ. ಹೀಗಾಗಿ ಪೊಲೀಸರು ಆಸ್ಪತ್ರೆ ಆಡಳಿತ ಮಂಡಳಿ ಜತೆ ಶಾಮೀಲಾಗಿರುವ ಶಂಕೆಯಿದೆ ಎಂದು ಆರೋಪಿಸಿದ್ದಾರೆ.
ಕ್ಯಾನ್ಸರ್ ಇಲ್ಲ ಎಂದಿದ್ದ ಕಿದ್ವಾಯಿ?: ಹಲವು ಚಿಕಿತ್ಸೆಯ ನಂತರವೂ ಸಮಸ್ಯೆ ಮುಂದುವರೆದದ್ದರಿಂದ ಮಗ್ದ ಅವರು 2018 ನ.3ರರಂದು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ತಪಾಸಣೆಗೆ ಒಳಗಾಗಿದ್ದರು. ಈ ವೇಳೆ ಅವರ ದೇಹದಲ್ಲಿ ಯಾವುದೇ ಕ್ಯಾನ್ಸರ್ ಕಣಗಳು ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೊಟ್ಟೆಯಲ್ಲಿದ್ದ ಸಣ್ಣ ಗಡ್ಡೆಯನ್ನು ಅಪೋಲೋ ವೈದ್ಯರು ಮತ್ತೂಮ್ಮೆ ಪರಿಶೀಲಿಸದೆ ಕ್ಯಾನ್ಸರ್ ಗಡ್ಡೆ ಎಂದು ಭಾವಿಸಿ ಚಿಕಿತ್ಸೆ ಪ್ರಾರಂಭಿಸಿದ್ದೇ ಇಷ್ಟೆಲ್ಲ ಸಮಸ್ಯೆಗೆ ಕಾರಣ ಎಂದು ಹೇಳಲಾಗಿದೆ.