Advertisement

ಅಡಿಕೆಯಲ್ಲಿ ಕ್ಯಾನ್ಸರ್‌ ಕಾರಕ ಅಂಶ: ಕೇಂದ್ರಕ್ಕೆ ಶೀಘ್ರ ವರದಿ

06:15 AM Feb 21, 2018 | Team Udayavani |

ವಿಧಾನ ಪರಿಷತ್ತು: ಅಡಿಕೆಯಲ್ಲಿ ಕ್ಯಾನ್ಸರ್‌ ಕಾರಕ ಅಂಶವಿದೆ ಎಂಬ ಆರೋಪದಿಂದ ನಿಷೇಧದ ಭೀತಿ ಬಗ್ಗೆ ಪತ್ರಿಕಾ ವರದಿ ಹಿನ್ನೆಲೆಯಲ್ಲಿ ಸದ್ಯದಲ್ಲೇ ಅಡಿಕೆ ಬೆಳೆಗಾರರ ಮಂಡಳಿ ರಚಿಸಲಾಗುವುದು. ಜತೆಗೆ ತೋಟಗಾರಿಕೆ ವಿಜ್ಞಾನ ವಿವಿಯ ವರದಿ ಪಡೆದು ಕೇಂದ್ರ ಸರ್ಕಾರಕ್ಕೆ ರವಾನಿಸಲಾಗುವುದು ಎಂದು ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಹೇಳಿದರು.

Advertisement

ಮಂಗಳವಾರ ಶೂನ್ಯವೇಳೆಯಲ್ಲಿ ಆಡಳಿತ ಪಕ್ಷದ ಮುಖ್ಯ ಸಚೇತಕ ಐವಾನ್‌ ಡಿಸೋಜಾ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿ, “ಈಗಾಗಲೇ ಮೂರ್‍ನಾಲ್ಕು ಬಾರಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅಡಿಕೆ ಬೆಲೆ ಕುಸಿದಾಗ ಪ್ರೋತ್ಸಾಹ ಧನ ನೀಡುವಂತೆಯೂ ಕೇಂದ್ರಕ್ಕೆ ಮನವಿ ಮಾಡಲಾಗಿದೆ’ ಎಂದು ಹೇಳಿದರು.

ಅಡಿಕೆಯಲ್ಲಿ ಕ್ಯಾನ್ಸರ್‌ ಕಾರಕ ಅಂಶವಿದೆ ಎಂಬ ಆರೋಪದಿಂದ ನಿಷೇಧಕ್ಕೆ ಒಳಗಾಗುವ ಭೀತಿ ಕುರಿತ ಪತ್ರಿಕಾ ವರದಿ ಗಮನಿಸಿದ್ದೇನೆ. ಈ ಬಗ್ಗೆ ಮತ್ತೂಮ್ಮೆ ಪ್ರಯೋಗಾಲಯ ವರದಿ ಪಡೆದು ಪರಿಶೀಲಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ರಾಜ್ಯ ಸರ್ಕಾರದ ವತಿಯಿಂದಲೂ ಶಿಫಾರಸು ಕಳುಹಿಸಲಾಗುವುದು ಎಂದು ವಿವರಿಸಿದರು.

ಸಂಸದರ ಮೌನ: ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಐವಾನ್‌ ಡಿಸೋಜಾ, ಕ್ಯಾನ್ಸರ್‌ ಕಾರಕ ಅಂಶವಿದೆ ಎಂಬ ಆರೋಪದಿಂದಾಗಿ ಅಡಿಕೆಗೆ ನಿಷೇಧದ ಭೀತಿ ಕುರಿತು ಪತ್ರಿಕೆಯಲ್ಲಿ ವರದಿಯಾಗಿದ್ದು, ಅಡಿಕೆ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಅಧಿಕಾರಿಗಳು ಕೊಟ್ಟ ತಪ್ಪು ಮಾಹಿತಿಯನ್ನೇ ನಂಬಿ ಕೇಂದ್ರ ಸರ್ಕಾರ ಎರಡು ತಿಂಗಳ ಹಿಂದೆಯೇ ಈ ವಿಚಾರ ಪ್ರಸ್ತಾಪಿಸಿದ್ದರೂ ರೈತರ ಪರ ನಿಲ್ಲಬೇಕಾದ ರಾಜ್ಯದ ಸಂಸದರು ಈವರೆಗೆ ಮಾತನಾಡಿರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next