ಕರ್ನಾಟಕ ಶಾಲೆ ಮತ್ತು ಪರೀಕ್ಷೆ ಮೌಲ್ಯ ನಿರ್ಣಯ ಮಂಡಳಿ 2023-24ನೇ ಸಾಲಿನಲ್ಲಿ ನಡೆಸಿದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-1ರ ಉತ್ತರಪತ್ರಿಕೆಗಳ ಮೌಲ್ಯಮಾಪನದ ವೇಳೆ ಹೆಚ್ಚುವರಿ ಅಂಕಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಿತ್ತು. ಈ ಸಂಬಂಧ ಶೈಕ್ಷಣಿಕ ವಲಯ ಮಾತ್ರವಲ್ಲದೆ ಸಾರ್ವಜನಿಕರಿಂದಲೂ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿಯನ್ನು ಕೈಬಿಡುವಂತೆ ಮಂಡಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ.
ಕರ್ನಾಟಕ ಶಾಲೆ ಮತ್ತು ಪರೀಕ್ಷೆ ಮೌಲ್ಯ ನಿರ್ಣಯ ಮಂಡಳಿ ಈ ಬಾರಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದೆ. ಅದರಂತೆ ಈಗಾಗಲೇ ಒಂದು ಪರೀಕ್ಷೆ ನಡೆದು ಫಲಿತಾಂಶ ಪ್ರಕಟಿಸಲಾಗಿದೆ. ಆದರೆ ಈ ಪರೀಕ್ಷೆಯಲ್ಲಿ ಭಾರೀ ಸಂಖ್ಯೆಯ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಉತ್ತೀರ್ಣಕ್ಕೆ ಅಗತ್ಯವಿರುವಷ್ಟು ಅಂಕ ಗಳಿಸಲು ವಿಫಲರಾಗಿದ್ದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಂಡಳಿ, ಬೇರೆ ವಿಷಯಗಳಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಪರಿಗಣಿಸಿ, ಹಿನ್ನಡೆ ಕಂಡಿರುವ ವಿಷಯದಲ್ಲಿ ಹೆಚ್ಚುವರಿ ಅಂಕಗಳನ್ನು ನೀಡಿ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಿತ್ತು. ಮಂಡಳಿಯ ಈ ನಿರ್ಧಾರದಿಂದಾಗಿ 1.70 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-1ರಲ್ಲಿ ತೇರ್ಗಡೆಯಾಗಿ ದ್ದರು. ಇದರ ಹೊರತಾಗಿಯೂ ಒಟ್ಟಾರೆ ಫಲಿತಾಂಶ ಕಡಿಮೆಯಾಗಿತ್ತು.
ಪರೀಕ್ಷಾ ಮಂಡಳಿ ಮತ್ತು ಶಿಕ್ಷಣ ಇಲಾಖೆಯ ಈ ಕ್ರಮಕ್ಕೆ ರಾಜ್ಯಾದ್ಯಂತ ಸಾರ್ವತ್ರಿಕ ವಿರೋಧ ಕೇಳಿಬಂದಿತ್ತು. ಈ ತೆರನಾಗಿ ಹೆಚ್ಚುವರಿ ಅಂಕಗಳನ್ನು ನೀಡಿ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವುದಾದಲ್ಲಿ ಈ ಪರೀಕ್ಷೆಗಳನ್ನು ನಡೆಸುವುದಾದರೂ ಯಾಕಾಗಿ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಶಿಕ್ಷಣ ಇಲಾಖೆಯ ಮುಂದಿಟ್ಟಿದ್ದರು. ಇಲಾಖೆಯ ಈ ನಿರ್ಧಾರದಿಂದಾಗಿ ವರ್ಷವಿಡೀ ಶ್ರಮವಹಿಸಿ ಅಧ್ಯಯನ ನಡೆಸಿ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಂಡಳಿ ದ್ರೋಹ ಬಗೆದಿದೆ ಎಂಬ ಆರೋಪ ಕೂಡ ವ್ಯಕ್ತವಾಗಿತ್ತು. ಇದರ ಜತೆಯಲ್ಲಿ ಹೆಚ್ಚುವರಿ ಅಂಕ ನೀಡಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವುದರಿಂದ ಅವರ ಭವಿಷ್ಯದ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಅಲ್ಲದೆ ಮುಂದಿನ ಬಾರಿಯೂ ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ಸ್ ನ ನಿರೀಕ್ಷೆಯಲ್ಲಿ ಕಲಿಕೆಯನ್ನು ನಿರ್ಲಕ್ಷಿಸುವ ಸಾಧ್ಯತೆ ಇದೆ ಎಂದು ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಕ್ರವಾರ ಶಿಕ್ಷಣ ಇಲಾಖೆ ಮತ್ತು ಮಂಡಳಿಯ ಅಧಿಕಾರಿಗಳ ಸಭೆ ನಡೆಸಿ ಈ ಬಗ್ಗೆ ಸಮಾಲೋಚನೆ ನಡೆಸಿದರು. ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ ನೀಡುವ ತೀರ್ಮಾನದ ಬಗೆಗೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಿಎಂ ಮತ್ತು ಡಿಸಿಎಂ, ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಯನ್ನು ನಗಣ್ಯ ಎಂದು ಪರಿಗಣಿಸಲಾಗದು. ಹಾಗೆಂದು ಅನುತ್ತೀರ್ಣರಾದ ವಿದ್ಯಾರ್ಥಿ ಗಳಿಗೆ ಹೆಚ್ಚುವರಿ ಅಂಕ ನೀಡಿ ತೇರ್ಗಡೆಗೊಳಿಸುವ ಅಗತ್ಯವಿಲ್ಲ. ಮುಂದಿನ ವರ್ಷದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚುವರಿ ಅಂಕ ನೀಡುವ ಪದ್ಧತಿಯನ್ನು ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶ ನೀಡಿದ್ದಾರೆ. ಸರಕಾರದ ಈ ನಿರ್ಧಾರದಿಂದ ಪರೀಕ್ಷೆಯ ಉದ್ದೇಶ, ಶಿಕ್ಷಣದ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಹಿತವನ್ನು ಕಾಯ್ದುಕೊಂಡಂತಾಗಿದೆ. ಮಂಡಳಿ ಅಥವಾ ಇಲಾಖೆಯ ಲೋಪದೋಷಗಳನ್ನು ಹೊರತುಪಡಿಸಿದಂತೆ ವಿದ್ಯಾರ್ಥಿಗಳಿಗೆ ಬೇಕಾಬಿಟ್ಟಿಯಾಗಿ ಹೆಚ್ಚುವರಿ ಅಂಕ ನೀಡುವ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿದಂತಾಗಿದ್ದು, ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಟ್ಟಂತಾಗಿದೆ.