Advertisement

ವಿಶೇಷ ಸ್ಥಾನಮಾನ ರದ್ದು ಸಂವಿಧಾನ ವಿರೋಧಿ

09:27 PM Aug 12, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಬಹುಸಂಸ್ಕೃತಿ, ಬಹುಭಾಷೆ, ಬಹುಧರ್ಮ ಭಾರತದ ಅಸ್ಮಿತೆಯಾಗಿದ್ದು, ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ವಿಶೇಷ ಸ್ಥಾನಮಾನದ 370 ನೇ ವಿಧಿ ರದ್ದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಕೇಂದ್ರ ಸರ್ಕಾರ ಮಾಡಿದ ದಾಳಿ ಎಂದು ಸಿಪಿಎಂ ಮಾಜಿ ಶಾಸಕ ಬಾಗೇಪಲ್ಲಿ ಜಿ.ವಿ.ಶ್ರೀರಾಮರೆಡ್ಡಿ ಟೀಕಿಸಿದರು.

Advertisement

ನಗರದ ತಾಪಂ ಸಭಾಂಗಣದಲ್ಲಿ ಅಖೀಲ ಭಾರತ ವಕೀಲರ ಸಂಘದ ರಾಜ್ಯ ಸಮಿತಿಯ ಸಭೆಯ ಭಾಗವಾಗಿ ಕಾಶ್ಮೀರದ 370ನೇ ವಿಧಿ ರದ್ಧತಿ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿ, ಕೇಂದ್ರದ ಈ ನಿರ್ಧಾರದಿಂದ ಕಾಶ್ಮೀರದ ಅಸ್ಮಿತೆಗೆ ಧಕ್ಕೆ ಬರುತ್ತದೆಯೆಂದರು.

ಧರ್ಮದ ಆಧಾರದಲ್ಲಿ ವಿಂಗಡಣೆ: ಕಾಶ್ಮೀರ ರಾಜ್ಯವನ್ನು ವಿಭಜನೆಗೊಳಿಸುವುದು ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿದ್ದ ಪ್ರಮುಖ ಅಂಶ. ಕಾಶ್ಮೀರವನ್ನು ಕೂಡ ಧರ್ಮದ ಆಧಾರದ ಮೇಲೆ ವಿಭಜನೆ ಮಾಡಿದೆ. ಕಾಶ್ಮೀರನ್ನು ಮುಸ್ಲಿಂ ರಾಜ್ಯವಾಗಿ, ಜಮ್ಮುವನ್ನು ಹಿಂದೂ ರಾಜ್ಯವಾಗಿ ಹಾಗೂ ಲಡಾಕ್‌ ಅನ್ನು ಬೌದ್ಧ ಧರ್ಮದ ರಾಜ್ಯವಾಗಿ ವಿಂಗಡಿಸುವ ಪಿತೂರಿ ಕೇಂದ್ರದ ಬಿಜೆಪಿ ಸರ್ಕಾರ ಮಾಡಿದೆ.

ಇದರಿಂದ ಕಾಶ್ಮೀರ ಧಾರ್ಮಿಕತೆ, ಸಂಸ್ಕೃತಿ, ಭಾಷೆ ಹಾಗೂ ಅಸ್ಮಿತೆ ಜೊತೆಗೆ ಆ ರಾಜ್ಯದ ಆರ್ಥಿಕತೆಗೂ ಧಕ್ಕೆ ಬರುತ್ತದೆ ಎಂದು ತಿಳಿಸಿದರು. ವಿಶೇಷ ಸ್ಥಾನಮಾನ ರದ್ದು ಸಂವಿಧಾನ ವಿರೋಧಿಯಾಗಿದ್ದು, ಇದು ದೇಶದ ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ನಿಲುವುಗಳಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದರು.

ರಿಯಲ್‌ ಎಸ್ಟೇಟ್‌: 370ನೇ ವಿಧಿ ರದ್ದತಿ ಹಿಂದೆ ಅಂಬಾನಿ, ಅದಾನಿ ಕೈವಾಡ ಇದೆ. ಜಮ್ಮು ಕಾಶ್ಮೀರದಲ್ಲಿ ಫ‌ಲವತ್ತಾದ ಭೂಮಿ ಇದ್ದು, ಈ ಭೂಮಿಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡಿ ರಿಯಲ್‌ ಎಸ್ಟೇಟ್‌ಗೆ ಕುಮ್ಮಕ್ಕು ನೀಡುವ ಸಲುವಾಗಿ ಕೇಂದ್ರ ಸರ್ಕಾರ 35 ಎ ವಿಧಿ ರದ್ದುಗೊಳಿಸಿದೆ. 370ನೇ ವಿಧಿ ರದ್ದುಗೊಳಿಸುವುದರಿಂದ ಅಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ.

Advertisement

ವಿಶೇಷವಾಗಿ ಭಯೋತ್ಪಾದನಾ ಚಟುವಟಿಕೆ ಇನ್ನಷ್ಟು ಹೆಚ್ಚಾಗುವ ಆತಂಕ ಇದೆ. ಅಲ್ಲಿನ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ಕೇಂದ್ರ ಸರ್ಕಾರ ರಾಜ್ಯಗಳ ವಿಭಜನೆಯನ್ನು ಧರ್ಮದ ಆಧಾರದಲ್ಲಿ ನಡೆಸುತ್ತಿರುವುದು ಆತಂಕಕಾರಿ ವಿಚಾರ ಎಂದರು. ವಿಚಾರ ಸಂಕಿರಣದಲ್ಲಿ ಅಖೀಲ ಭಾರತ ವಕೀಲರ ಒಕ್ಕೂಟದ ರಾಜ್ಯಾಧ್ಯಕ್ಷ ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಶ್ರೀನಿವಾಸ್‌, ಖಜಾಂಚಿ ರಾಮಚಂದ್ರರರೆಡ್ಡಿ, ಉಪಾಧ್ಯಕ್ಷ ಎನ್‌.ರಾಘುರಾಮ್‌, ಕರ್ನಾಟಕ ವಕೀಲರ ಪರಿಷತ್ತು ಹಾಗೂ ಅಖಿಲ ಭಾರತ ವಕೀಲರ ಸಂಘದ ಉಪಾಧ್ಯಕ್ಷರಾದ ಕೋಟೇಶ್ವರರಾವ್‌, ವಕೀಲರಾದ ಪಾಪಿರೆಡ್ಡಿ, ಶಿವಾರೆಡ್ಡಿ, ಹರೀಂದ್ರ, ರಮೇಶ್‌ ಮತ್ತಿತರರಿದ್ದರು.

ನ.23, 24ಕ್ಕೆ ರಾಜ್ಯ ಸಮ್ಮೇಳನ:ಅಖೀಲ ಭಾರತ ವಕೀಲರ ಸಂಘದ ರಾಜ್ಯ ಸಮ್ಮೇಳನವನ್ನು ಬರುವ ನ.23, 24 ರಂದು ಮೈಸೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಒಂದು ವೇಳೆ ಮೈಸೂರಿನಲ್ಲಿ ಸಾಧ್ಯವಾಗದಿದ್ದರೆ ಬೆಂಗಳೂರಿನಲ್ಲಿ ಆಯೋಜಿಸಲು ರಾಜ್ಯ ಸಮತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಅಲ್ಲದೇ ರಾಷ್ಟ್ರೀಯ ಸಮ್ಮೇಳನ ಕೇರಳದ ಕೊಚ್ಚಿಯಲ್ಲಿ ಡಿ.27 ರಿಂದ 29ರ ವರೆಗೂ ನಡೆಯಲಿದ್ದು, ರಾಜ್ಯದಿಂದ ಭಾಗವಹಿಸುವ ಪ್ರತಿನಿಧಿಗಳ ಬಗ್ಗೆ ವಿಶೇಷವಾಗಿ ರಾಜ್ಯ ಸಮ್ಮೇಳನದ ಬಗ್ಗೆ ರಾಜ್ಯ ಅಖೀಲ ಭಾರತ ವಕೀಲರ ಸಂಘದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷರಾದ ವಕೀಲ ಶಂಕರಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next