Advertisement

ಸಾರ್ವಜನಿಕ ಗಣೇಶೋತ್ಸವ ರದ್ದು

03:17 PM Jul 03, 2020 | Suhan S |

ಬಾಗಲಕೋಟೆ: ಕೋವಿಡ್‌-19 ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಆ.22 ರಂದು ಆಚರಿಸಲ್ಪಡುವ ಗಣೇಶ ಚತುರ್ಥಿ ನಿಮಿತ್ತ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ, ಮೆರವಣಿಗೆ ಮಾಡುವುದನ್ನು ನಿಷೇಧಿಸಲಾಗಿದ್ದು, ತಮ್ಮ ಮನೆಯಲ್ಲಿಯೇ ಗಣಪತಿ ಪ್ರತಿಷ್ಠಾಪನೆ ಮಾಡಿ ಸರಳವಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿ ಕ್ಯಾ.ಡಾ| ಕೆ. ರಾಜೇಂದ್ರ ಹಾಗೂ ಎಸ್‌ಪಿ ಲೋಕೇಶ ಜಗಲಾಸರ ತಿಳಿಸಿದ್ದಾರೆ.

Advertisement

ಈ ಕುರಿತು ಜಂಟಿ ಪ್ರಕಟಣೆ ನೀಡಿರುವ ಅವರು, ಗಣೇಶ ಹಬ್ಬದ ನಿಮಿತ್ತ ಸಾರ್ವಜನಿಕರು ಮತ್ತು ಗಣೇಶ ಮಂಡಳಿಯವರು ಗಣೇಶ ಮೂರ್ತಿ ಮೆರವಣಿಗೆ ಮಾಡುವ ಮೂಲಕ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಮಾಡುತ್ತಾರೆ. ಆ ಕಾಲಕ್ಕೆ ಸಾಕಷ್ಟು ಜನರು ಸೇರುವುದರಿಂದ ಕೋವಿಡ್‌ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಭಕ್ತರು, ಸಾರ್ವಜನಿಕರು ಬಂದು ದರ್ಶನ ಮಾಡುವ ವೇಳೆ ಸರ್ಕಾರದ ಮಾರ್ಗಸೂಚಿ ಅನುಷ್ಠಾನಗೊಳಿಸುವುದು ಕಷ್ಟ. ಆದ್ದರಿಂದ, ಸಾರ್ವಜನಿಕರ ಆರೋಗ್ಯದ ರಕ್ಷಣೆ ಮತ್ತು ಸೋಂಕು ನಿಯಂತ್ರಣಕ್ಕೆ ಹಿನ್ನಡೆ ಉಂಟಾಗುತ್ತದೆ. ಅಲ್ಲದೇ ಸಾಂಕ್ರಾಮಿಕ ರೋಗ ಹರಡುವಿಕೆ ಮತ್ತು ನಿಯಂತ್ರಣ ಕಾಯ್ದೆ ಉಲ್ಲಂಘಿಸಿದಂತಾಗುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್‌-19 ಸಾಂಕ್ರಾಮಿಕ ರೋಗ ನಿಯಂತ್ರಿಸುವ ನಿಟ್ಟಿನಲ್ಲಿ ಮಾರ್ಗಸೂಚಿ ಪ್ರಕಟಿಸಿದ್ದು, ಇವುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ಹಿಂದೆ ರಮಜಾನ್‌ ಆಚರಣೆ ಸಂದರ್ಭದಲ್ಲಿ ಹಲವು ನಿರ್ಬಂಧ ಹೇರಲಾಗಿತ್ತು. ಇದಕ್ಕೆ ಜನರು ಸಾಕಷ್ಟು ಸಹಕಾರ ನೀಡಿರುತ್ತಾರೆ. ಈ ಗಣೇಶ ಹಬ್ಬದಲ್ಲೂ ಸಹ ಕೋವಿಡ್‌ ಮಾರ್ಗಸೂಚಿಗಳ ಅನುಷ್ಠಾನಕ್ಕೆ ಸಹಕರಿಸುವಂತೆ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next