ಸೈದಾಪುರ: ಕೇಂದ್ರ ಕಚೇರಿಯಿಂದ ಮಾನ್ಯತೆ ಪಡೆದ ಸಂಸ್ಥೆಯ ಹೊರತಾಗಿ ಬೇರೆ ಸಂಸ್ಥೆಯ ಅನಧಿಕೃತ ಬೀಜ ಮಾರಾಟ ಮಾಡಿದರೆ ಅಂಗಡಿ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಡಾ| ಅಬೀದ್ ಎಸ್.ಎಸ್. ಅವರು ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿನ ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಜಂಟಿ ಕೃಷಿ ನಿರ್ದೇಶಕ ಹಾಗೂ ಸಹಾಯಕ ಕೃಷಿ ನಿರ್ದೇಶಕರು ಜಂಟಿಯಾಗಿ ಭೇಟಿ ನೀಡಿ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ 7 ಬಿ.ಟಿ. ಹತ್ತಿ ಬಿತ್ತನೆ ಬೀಜ ಸರಬರಾಜು ಸಂಸ್ಥೆಗಳು ಕೇಂದ್ರ ಕಚೇರಿಯಿಂದ ಮಾನ್ಯತೆ ಪಡೆದಿದ್ದು, ಈ ಸಂಸ್ಥೆಗಳು ಹೊರತಾಗಿ ಯಾವುದೇ ಸಂಸ್ಥೆಯ ಬಿತ್ತನೆ ಬೀಜ ಮಾರಾಟ ಮಾಡಬಾರದೆಂದು ಕಟ್ಟುನಿಟ್ಟಾಗಿ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು. ಮಾನ್ಯತೆ ಪಡೆದ ಅಜಿತ್ ಸೀಡ್ಸ್, ಅಂಕುಷ್ ಸೀಡ್ಸ್, ಮೈಕೋ, ನುಜಿವೀಡ್ ಸೀಡ್ಸ್ ಲಿಮಿಟೆಡ್, ಪ್ರವರ್ಧನ, ಶ್ರೀರಾಮ ಬಯೋ ಸೀಡ್ಸ್, ಜೆನಿಟಿಕ್ಸ್, ವೀಡ್ ಸೀಡ್ ಸೈನ್ಸ್ ಈ ಸಂಸ್ಥೆಯ ಬೀಜಗಳನ್ನು ಮಾತ್ರ ಮಾನ್ಯತೆ ಪಡೆದಿರುತ್ತವೆ. ಆದ್ದರಿಂದ ರೈತರು ಕೂಡ ಈ ಸಂಸ್ಥೆಯ ಬೀಜಗಳನ್ನು ಮಾತ್ರ ಖರೀದಿಸಿ ಬಿತ್ತನೆ ಮಾಡಬೇಕೆಂದು ತಿಳಿಸಿದರು.
ನಂತರ ಸಹಾಯಕ ಕೃಷಿ ನಿರ್ದೇಶಕಿ ಶ್ವೇತಾ ತಾಳೆಮರ ಮಾತನಾಡಿ, ಕೃಷಿಗೆ ಸಂಬಂಧಿಸಿದ ಯಾವುದೇ ಪರಿಕರಗಳನ್ನು ರೈತರಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ತಪ್ಪದೇ ರಶೀದಿ ನೀಡಬೇಕು. ಯಾವುದೇ ಪರಿಕರ ಮಾರುವ ಮೊದಲು ಪರಿಕರದ ಪ್ರದಾನ ಪ್ರಮಾಣಪತ್ರ, ಪರಿಕರದ ಪರವಾನಗಿಗಳಲ್ಲಿ ನಮೂದಿಸಿದ ನಂತರವೇ ಮಾರಾಟ ಮಾಡಬೇಕು. ನಮೂದಿಸಿದ ಕೆಲ ಅಂಗಡಿ ಮಾರಾಟಗಾರರಿಗೆ ಮಾರಾಟ ನಿಲ್ಲಿಸುವ ಸೂಚನೆ ನೀಡಲಾಯಿತು. ಇದಕ್ಕೂ ಮೊದಲು ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಆಗಿರುವುದನ್ನು ಖಚಿತಪಡಿಸಿಕೊಂಡರು. ಕಡಿಮೆ ಇರುವ ರಸಗೊಬ್ಬರಗಳನ್ನು ದಾಸ್ತಾನು ಮಾಡಲು ಸೂಕ್ತ ಕ್ರಮವಹಿಸಲಾಗಿದೆ ಎಂದು ತಿಳಿಸಿದರು. ಸೈದಾಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮೇನಕ ಸೇರಿದಂತೆ ಇತರರಿದ್ದರು.