ಬೆಂಗಳೂರು: ನಗರದಲ್ಲಿ ನಿಯಮಬಾಹಿರವಾಗಿ ಕಾರ್ಯಾಚರಣೆ ಮಾಡುವ ಶೇರಿಂಗ್ ಮತ್ತು ಪೂಲಿಂಗ್ ಸೇವೆಯನ್ನು ತಕ್ಷಣದಿಂದ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ, ಅಂತಹ ಟ್ಯಾಕ್ಸಿ ಸೇವಾ ಕಂಪನಿಗಳ ಅಗ್ರಿಗೇಟರ್ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ ಎಚ್ಚರಿಸಿದ್ದಾರೆ.
ಶಾಂತಿನಗರದಲ್ಲಿರುವ ಸಾರಿಗೆ ಇಲಾಖೆ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವಾ ಕಂಪನಿಗಳ ಪ್ರತಿನಿಧಿಗಳು ಹಾಗೂ ಚಾಲಕರ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಆಯುಕ್ತರು ಈ ಸೂಚನೆ ನೀಡಿದರು.
ಕಟ್ಟುನಿಟ್ಟಿನ ಸೂಚನೆಗಳ ನಡುವೆಯೂ ನಿಯಮಬಾಹಿರವಾಗಿ ಮುಂದುವರಿಸಿರುವ “ಓಲಾ ಶೇರಿಂಗ್’ ಮತ್ತು “ಉಬರ್ ಪೂಲಿಂಗ್’ ಸೇವೆಯನ್ನು ತಕ್ಷಣದಿಂದ ರದ್ದುಗೊಳಿಸಬೇಕು. ಇಲ್ಲದಿದ್ದರೆ, ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಾಗಿ ಪಡೆದಿರುವ ಅಗ್ರಿಗೇಟರ್ ಲೈಸೆನ್ಸ್ ರದ್ದುಗೊಳಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ಸಭೆಯಲ್ಲಿ ಓಲಾ ಮತ್ತು ಉಬರ್ ಕಂಪನಿಗಳ ಅಕ್ರಮ ಶೇರಿಂಗ್ ಮತ್ತು ಪೂಲಿಂಗ್ ಸೇವೆ ಕುರಿತು ಟ್ಯಾಕ್ಸಿ ಚಾಲಕ ಹಾಗೂ ಮಾಲೀಕರ ಸಂಘಟನೆಯ ಪದಾಧಿಕಾರಿಗಳು ಈ ಬಗ್ಗೆ ಗಮನ ಸೆಳೆದರು. ಆಗ ಈ ಎರಡೂ ಕಂಪನಿಗಳ ಪ್ರತಿನಿಧಿಗಳಿಗೆ ಸಾರಿಗೆ ಆಯುಕ್ತರು, ಈ ಹಿಂದೆ ಅಕ್ರಮ ಬೈಕ್ ಟ್ಯಾಕ್ಸಿ ಸೇವೆ ವಿರುದ್ಧ ಚಾಟಿ ಬೀಸಿದ್ದನ್ನು ನೆನಪಿಸಿದರು. ಜತೆಗೆ ಅಗ್ರಿಗೇಟರ್ ನಿಯಮ ಉಲ್ಲಂಘನೆ ಪುನರಾವರ್ತನೆಯಾದರೆ ಅದೇ ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.
ಇದೇ ವೇಳೆ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಕಂಪನಿಗಳು ಚಾಲಕರಿಗೆ ನೀಡುತ್ತಿರುವ ಅನಗತ್ಯ ಕಿರುಕುಳ, ಗ್ರಾಹಕರಿಂದ ಅಧಿಕ ದರ ಪಡೆದು ಸುಲಿಗೆ ಮಾಡುತ್ತಿರುವ ಬಗ್ಗೆಯೂ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಆಯುಕ್ತರು ವಿನಾಕಾರಣ ಚಾಲಕರಿಗೆ ತೊಂದರೆ ಕೊಡುವುದನ್ನು ನಿಲ್ಲಿಸುವಂತೆ ಎರಡೂ ಕಂಪನಿಗಳಿಗೆ ತಾಕೀತು ಮಾಡಿದರು. ಇನ್ನು ಆ್ಯಪ್ ಆಧಾರಿತ ಟ್ಯಾಕ್ಸಿ ದರ ಪರಿಷ್ಕರಣೆ ಬಗ್ಗೆಯೂ ಚರ್ಚಿಸಲಾಯಿತು. ಈ ಸಂಬಂಧ ಶೀಘ್ರ ಸಮಿತಿಯೊಂದನ್ನು ರಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.
ಮೀಟರ್‌ಗೆ ಅವಕಾಶ ಕೊಡಿ – ಮನವಿ: ನಗರದಲ್ಲಿ ಆಟೋ ಮಾದರಿಯಲ್ಲಿ ಮೀಟರ್ ಟ್ಯಾಕ್ಸಿ ಸೇವೆಗೂ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ. ಸರ್ಕಾರ ನಿಗದಿಪಡಿಸುವ ದರದಲ್ಲೇ ಸೇವೆ ನೀಡಲು ಸಿದ್ಧ ಎಂದೂ ಆಯುಕ್ತರ ಗಮನಕ್ಕೆ ತರಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಆಯುಕ್ತರು ಹೇಳಿದ್ದಾರೆ ಎಂದು ಆ್ಯಪ್ ಆಧಾರಿತ ಟ್ಯಾಕ್ಸಿ ಚಾಲಕರ ಮುಖಂಡ ತನ್ವೀರ್ ಪಾಷಾ ತಿಳಿಸಿದರು.
ಅಲ್ಲದೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟ್ಯಾಕ್ಸಿ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು, ಟ್ಯಾಕ್ಸಿ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ಮಾದರಿ ಒಂದೇ – ಹೆಸರು ಬೇರೆ: ಆ್ಯಪ್ ಆಧಾರಿತ ಟ್ಯಾಕ್ಸಿಯಲ್ಲಿ ಪ್ರತ್ಯೇಕ ಬುಕಿಂಗ್ ಮಾಡಿ, ಒಬ್ಬರಿಗಿಂತ ಹೆಚ್ಚು ಪ್ರಯಾಣಿಕರು ಪ್ರಯಾಣಿಸುವುದು. ಆ ಪ್ರಯಾಣ ದರವನ್ನು ಎಲ್ಲರೂ ಹಂಚಿಕೊಂಡು ಪಾವತಿಸುವುದಕ್ಕೆ ಶೇರಿಂಗ್ ಅಥವಾ ಪೂಲಿಂಗ್ ಎನ್ನಲಾಗುತ್ತದೆ. ಸಾರಿಗೆ ಇಲಾಖೆ ನೀಡುವ ಅಗ್ರಿಗೇಟರ್ ಲೈಸೆನ್ಸ್‌ನಲ್ಲಿ ಈ ಸೇವೆಗೆ ಅವಕಾಶವಿಲ್ಲ. ನಿಯಮದ ಪ್ರಕಾರ ಗ್ರಾಹಕರನ್ನು ಒಂದು ಸ್ಥಳದಿಂದ ಹತ್ತಿಸಿಕೊಂಡು ಮತ್ತೂಂದು ಸ್ಥಳದಲ್ಲಿ ಇಳಿಸಬೇಕು.