ಬೆಂಗಳೂರು: ರಾಜ್ಯದಲ್ಲಿ ಪ್ರವಾಹದಿಂದಾಗಿ 2019, 2020 ಹಾಗೂ 2021ನೇ ಸಾಲಿನಲ್ಲಿ ಎ ಅಥವಾ ಬಿ ವರ್ಗದಲ್ಲಿ ಹಾನಿಯಾದ ಮನೆಗಳಿಗೆ ಈವರೆಗೂ ನಿರ್ಮಾಣ ಕಾರ್ಯ ಪ್ರಾರಂಭವಾದ ಮನೆಗಳನ್ನು ಪರಿಶೀಲಿಸಿ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸರಕಾರ ಸೂಚನೆ ನೀಡಿದೆ.
ಅದೇ ರೀತಿ ಪ್ರಾರಂಭವಾಗಿರುವ ಮನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮನೆ ಮಾಲಕರಿಗೆ ನೋಟಿಸ್ ನೀಡುವಂತೆಯೂ ಸರಕಾರ ಸೂಚಿಸಿದೆ.
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದ ಎದುರಾಗಿರುವ ಪ್ರವಾಹ ಪರಿಸ್ಥಿತಿ ಕುರಿತು ಅ.10ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಿದಂತೆ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಕೈಗೊಳ್ಳುವ ಕ್ರಮಗಳ ಕುರಿತು ಅ.20ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ಜತೆಗೆ, ಮನೆ ಹಾನಿ ಪರಿಹಾರವನ್ನು ಪಾವತಿಸಲು 2022ರ ಆ.1ರ ಆದೇಶ ಮಾರ್ಪಡಿಸಿ 2019, 2020 ಹಾಗೂ 2021ನೇ ಸಾಲಿನಲ್ಲಿ ಭಾಗಶಃ ಹಾನಿಯಾದ ಸಿ ವರ್ಗದಲ್ಲಿ 50 ಸಾವಿರ ರೂ.ಗಳಂತೆ ಮನೆ ಪರಿಹಾರ ಪಡೆದಿರುವ ಮನೆಗಳು ಪುನಃ 2022ನೇ ಸಾಲಿನಲ್ಲಿ ಜಂಟಿ ಸಮೀಕ್ಷೆ ಅನುಸಾರ ಅತಿವೃಷ್ಠಿಯಿಂದ ಎ, ಬಿ ಮತ್ತು ಸ ವರ್ಗದಲ್ಲಿ ಹಾನಿಯಾದಲ್ಲಿ ಪರಿಹಾರ ಪಾವತಿಸಬೇಕು ಎಂದು ಸರಕಾರ ಸೂಚಿಸಿದೆ.