Advertisement

ಹಳಕರ್ಟಿ ಖದೀರಿ ದರ್ಗಾ ಉರುಸ್‌ ರದ್ದು

05:55 PM Sep 01, 2020 | Suhan S |

ವಾಡಿ: ಹೊರ ರಾಜ್ಯಗಳ ಲಕ್ಷಾಂತರ ಭಕ್ತರನ್ನು ಹೊಂದಿರುವ ಹಳಕರ್ಟಿ ಖದೀರಿ ದರ್ಗಾ ಉರುಸ್‌ (ಜಾತ್ರೆ) ಕೋವಿಡ್‌-19 ಹಿನ್ನೆಲೆಯಲ್ಲಿ ಈ ವರ್ಷ ರದ್ದುಗೊಳಿಸಲಾಗಿದ್ದು, ಸೆ.1ರಿಂದ ಮೂರು ದಿನಗಳ ಕಾಲ ಇಡೀ ದರ್ಗಾ ಪೊಲೀಸ್‌ ಸುಪರ್ದಿಯಲ್ಲಿ ಇರಲಿದೆ ಎಂದು ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಹೇಳಿದರು.

Advertisement

ಹಳಕರ್ಟಿ ದರ್ಗಾದಲ್ಲಿ ದರ್ಗಾ ಶರೀಫ್‌ ಅಬುತುರಾಬ ಶಹಾ ಖಾದ್ರಿ ಅವರೊಂದಿಗೆ ಸೋಮವಾರ ನಡೆದ ಸಭೆಯಲ್ಲಿ ಕೊರೊನಾ ನಿಯಂತ್ರಣದ ನಿಯಮಾವಳಿಗಳನ್ನು ಉರುಸ್‌ ಸಮಿತಿಗೆ ವಿವರಿಸಿ ಮಾತನಾಡಿದ ಅವರು, ಕೋವಿಡ್ ಹರಡುವಿಕೆ ತಡೆಗಟ್ಟಲು ಧಾರ್ಮಿಕ ಹಾಗೂ ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಅವಕಾಶ ಇಲ್ಲ. ಪರಿಣಾಮ ಹಳಕರ್ಟಿ ದರ್ಗಾ ಉರುಸ್‌, ಸಂಧಲ್‌ ಮೆರವಣಿಗೆ, ಸರ್ವಧರ್ಮ ಸಮ್ಮೇಳನ, ಖವ್ವಾಲಿ ಗಾಯನ ಸೇರಿದಂತೆ ಯಾವುದೇ ಸಾಂಪ್ರದಾಯಿಕ ಕಾರ್ಯಕ್ರಮ ನಡೆಸುವಂತಿಲ್ಲ. ಮಂಗಳವಾರದಿಂದ ಮೂರು ದಿನಗಳ ಕಾಲ ಭಕ್ತರು ದರ್ಗಾ ಆವರಣಕ್ಕೆ ಬರುವಂತಿಲ್ಲ. ಹೊರ ರಾಜ್ಯಗಳಿಂದ ಬರುವ ಭಕ್ತರಿಗೆ ದರ್ಗಾ ಸಮಿತಿಯೇ ತಡೆಯಬೇಕು. ದರ್ಗಾ ಸಾಹೇಬರ ಕುಟುಂಬಸ್ಥರಿಗೆ ಮಾತ್ರ ಸಾಮಾಜಿಕ ಅಂತರ ಕಾಪಾಡಿಕೊಂಡು ಧಾರ್ಮಿಕ ಆಚರಣೆಗಳನ್ನು ಸರಳ ರೀತಿಯಲ್ಲಿ ಕೈಗೊಳ್ಳಲು ಅವಕಾಶ ನೀಡಲಾಗುವುದು ಎಂದರು.

ಆಗ ಹಳಕರ್ಟಿ ಖ್ವಾದ್ರಿ ದರ್ಗಾದ ಪೀಠಾಧಿಪತಿ ಅಬುರುತಾಬ ಶಹಾ ಖ್ವಾದ್ರಿ ಮಾತನಾಡಿ, ಸರಕಾರದ ಕೋವಿಡ್ ಹೋರಾಟದಲ್ಲಿ ಹಳಕರ್ಟಿ ದರ್ಗಾ ಸಮಿತಿಯೂ ಜತೆಗಿದೆ. ಒಂದು ತಿಂಗಳು ಕಾಲ ಇಡೀ ದರ್ಗಾ ವಲಸೆ ಕಾರ್ಮಿಕರ ಕ್ವಾರಂಟೈನ್‌ ಕೇಂದ್ರ ಮಾಡಲು ಅವಕಾಶ ನೀಡಿದ್ದೇವೆ. ಕೋವಿಡ್ ಸಂಕಷ್ಟದಲ್ಲಿ ಬಡ ಕುಟುಂಬಗಳಿಗೆ ಪಡಿತರ, ಮಾಸ್ಕ್, ಸ್ಯಾನಿಟೈಸರ್‌ ವಿತರಿಸಿದ್ದೇವೆ. ಈಗ ಉರುಸ್‌ ಕೂಡ ರದ್ದುಪಡಿಸುವ ನಿರ್ಣಯ ಕೈಗೊಂಡಿದ್ದೇವೆ.

ಹೈದರಾಬಾದ್‌ನಿಂದ ವಿಶೇಷ ರೈಲಿನಲ್ಲಿ ಬರುತ್ತಿದ್ದ ಸಂಧಲ್‌ ಈ ವರ್ಷ ಬರುವುದಿಲ್ಲ. ಹೈದರಾಬಾದ್‌ ಮತ್ತು ಮಹಾರಾಷ್ಟ್ರದಿಂದ ಆಗಮಿಸುತ್ತಿದ್ದ ಲಕ್ಷಾಂತರ ಜನ ಭಕ್ತರಿಗೂ ಉರುಸ್‌ ರದ್ದಾದ ಬಗ್ಗೆ ಮಾಹಿತಿ ರವಾನಿಸಿದ್ದೇವೆ. ಸರ್ವಧರ್ಮ ಸಮ್ಮೇಳನವೂ ಕೈಬಿಟ್ಟಿದ್ದೇವೆ. ಉರುಸ್‌ ನಿಮಿತ್ತ ಮುದ್ರಣಗೊಂಡಿದ್ದ ಕರಪತ್ರಗಳು ಮತ್ತು ಪೋಸ್ಟರ್‌ಗಳು ನಿಷ್ಕ್ರಿàಯಗೊಳಿಸಿದ್ದೇವೆ. ಕಾನೂನು ಚೌಕಟ್ಟಿನಲ್ಲಿ ಸರಳವಾಗಿ ನಾವು ಕುಟುಂಬಸ್ಥರೇ ಪೂಜೆ ನೆರವೇರಿಸಿ ಸಂಪ್ರದಾಯ ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದರು.

ಸಿಪಿಐ ಕೃಷ್ಣಪ್ಪ ಕಲ್ಲದೇವರು, ಪಿಎಸ್‌ಐ ವಿಜಯಕುಮಾರ ಭಾವಗಿ, ಎಎಸ್‌ಐ ಚೆನ್ನಮಲ್ಲಪ್ಪ ಪಾಟೀಲ, ವಿಶೇಷ ಪೇದೆ ದೊಡ್ಡಪ್ಪ ಪೂಜಾರಿ ಸೇರಿದಂತೆ ದರ್ಗಾ ಸಮಿತಿಯಮುಖಂಡರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next