Advertisement

ನೋಟು ರದ್ದತಿ ಪ್ರಸ್ತಾವ ಕೇಂದ್ರದ್ದು ಆರ್‌ಬಿಐನದ್ದಲ್ಲ

03:45 AM Jan 11, 2017 | Harsha Rao |

ನವದೆಹಲಿ: ಈವರೆಗೆ ಕೇಂದ್ರ ಸರ್ಕಾರವು, “ಅಪನಗದೀಕರಣದ ನಿರ್ಧಾರದ ಪ್ರಸ್ತಾಪ ಮೊದಲು ಬಂದಿದ್ದು ರಿಸರ್ವ್‌ ಬ್ಯಾಂಕ್‌ನಿಂದ. ಇದಕ್ಕೆ ಸರ್ಕಾರ ಅನುಮೋದನೆ ನೀಡಿತು ಅಷ್ಟೇ’ ಎಂದು ಹೇಳಿಕೊಳ್ಳುತ್ತಿತ್ತು. ಆದರೆ 500 ರೂ. ಹಾಗೂ 1000 ರೂ. ನೋಟು ರದ್ದತಿ ವಿಷಯದಲ್ಲಿ ಮೊದಲು ಪ್ರಸ್ತಾಪ ಹೋಗಿದ್ದು ಸರ್ಕಾರದಿಂದ. ಅದೂ ಕೂಡ ಅಪನಗದೀಕರಣ ಘೋಷಣೆಯಾದ ನ.8ರ ಒಂದು ದಿನ ಮುನ್ನ. ಅಂದರೆ ನ.7ರಂದು ಎಂಬ ವಿಷಯ ಈಗ
ಅಧಿಕೃತವಾಗಿ ಜಗಜ್ಜಾಹೀರಾಗಿದೆ.

Advertisement

ಕೇಂದ್ರ ಸರ್ಕಾರ ನ.7ರಂದು ಮೊದಲು ಪ್ರಸ್ತಾಪ ಕಳಿಸಿತು. “ಭಯೋತ್ಪಾದನೆ, ಕಪ್ಪುಹಣ ಹಾಗೂ ಖೋಟಾನೋಟು- ಈ ಮೂರು ಪಿಡುಗುಗಳನ್ನು ನಿಗ್ರಹಿಸಲು ರಿಸರ್ವ್‌ ಬ್ಯಾಂಕ್‌ನ ಕೇಂದ್ರೀಯ ಮಂಡಳಿ 500 ಹಾಗೂ 1000 ರೂ. ನೋಟುಗಳನ್ನು ಅಮಾನ್ಯ ಮಾಡುವ ಬಗ್ಗೆ ಪರಿಶೀಲಿಸಬಹುದು’ ಎಂಬುದೇ ಈ ಪ್ರಸ್ತಾಪವಾಗಿತ್ತು ಎಂದು ಕಾಂಗ್ರೆಸ್‌ ಮುಖಂಡ, ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಅಧ್ಯಕ್ಷರಾಗಿರುವ ಹಣಕಾಸು ಇಲಾಖಾ ವ್ಯವಹಾರಗಳ ಸಂಸದೀಯ ಸಮಿತಿಗೆ 7 ಪುಟಗಳ ಲಿಖೀತ ಪತ್ರದಲ್ಲಿ ಆರ್‌ಬಿಐ ತಿಳಿಸಿದೆ.

ಸರ್ಕಾರದಿಂದ ಪ್ರಸ್ತಾಪ ಬಂದ ನಂತರ ನ.8ರ ಬೆಳಗ್ಗೆ ಆರ್‌ಬಿಐ ಕೇಂದ್ರೀಯ ಮಂಡಳಿ ಸಭೆ ಸೇರಿತು. “ಕಪ್ಪುಹಣ, ಖೋಟಾನೋಟು ಹಾಗೂ ಭಯೋತ್ಪಾದನೆ ನಿಗ್ರಹ- ಈ ಮೂರು ಕಾರಣಗಳಿಗಾಗಿ 500 ರೂ. ಮತ್ತು 1000 ರೂ. ನೋಟುಗಳ ಅಪನಗದೀಕರಣ ಮಾಡಬಹುದು’ ಎಂದು ಶಿಫಾರಸು ಮಾಡಿತು. ಅದೇ ದಿನ ರಾತ್ರಿ 8 ಗಂಟೆಗೆ
ಪ್ರಧಾನಿ ಮೋದಿ ಅವರು ಅಪನಗದೀಕರಣದ ಘೋಷಣೆ ಮಾಡಿದರು.

ಆದರೆ, ಅಪನಗದೀಕರಣ ಘೋಷಣೆಯಾಗಿ 8 ದಿನಗಳ ನಂತರ ಕೇಂದ್ರ ಸಚಿವ ಪೀಯೂಶ್‌ ಗೋಯಲ್‌ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತ, “ಆರ್‌ಬಿಐ ಕೇಂದ್ರೀಯ ಮಂಡಳಿ ನೋಟು ರದ್ದತಿ ನಿರ್ಧಾರ ತೆಗೆದುಕೊಂಡಿದೆ. ಕೇಂದ್ರೀಯ ಮಂಡಳಿ ನಿರ್ಧಾರಕ್ಕೆ ಸರ್ಕಾರ ಅನುಮೋದನೆ ನೀಡಿತು’ ಎಂದಿದ್ದರು. ಇತ್ತೀಚೆಗೆ ಮಾಹಿತಿ ಹಕ್ಕು ಅಡಿ
ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಕೂಡ ಈ ಸಂಗತಿ ತಿಳಿದುಬಂದಿತ್ತು. ನೋಟು ನಿಷೇಧದ ಕೆಲವೇ ಗಂಟೆಗಳ ಮುನ್ನ ಸರ್ಕಾರದ ಪ್ರಸ್ತಾವಕ್ಕೆ ಆರ್‌ಬಿಐ ಸಮ್ಮತಿಸಿತ್ತು ಎಂದು ಗೊತ್ತಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next