Advertisement

ಪರೀಕ್ಷೆ ರದ್ದು; ಕೋರ್ಟ್‌ ಆದೇಶ ಜಾರಿಗೊಳಿಸಿ

05:49 PM Dec 16, 2021 | Team Udayavani |

ಹುಬ್ಬಳ್ಳಿ: ಧಾರವಾಡ ಹೈಕೋರ್ಟ್‌ ಪೀಠ ಮೂರು ವರ್ಷದ ಎಲ್‌ಎಲ್‌ಬಿಯ 2 ಮತ್ತು 4ನೇ ಸೆಮಿಸ್ಟರ್‌ ಪರೀಕ್ಷೆಗಳ ವೇಳಾಪಟ್ಟಿ ರದ್ದುಗೊಳಿಸಿ, ಮುಂದಿನ ಸೆಮಿಸ್ಟರ್‌ಗೆ ಪ್ರಮೋಟ್‌ ಮಾಡಲು ಆದೇಶಿಸಿದ್ದು, ಅದನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಜಾರಿಗೊಳಿಸಬೇಕೆಂದು ಕಾನೂನು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

Advertisement

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಡಿ. 15ರಿಂದ ನಿಗದಿಪಡಿಸಿದ್ದ 3 ವರ್ಷದ ಎಲ್‌ ಎಲ್‌ಬಿಯ 2 ಮತ್ತು 4ನೇ ಸೆಮಿಸ್ಟರ್‌ ಪರೀಕ್ಷೆಗಳ ವೇಳಾಪಟ್ಟಿಯನ್ನು ಧಾರವಾಡ ಹೈಕೋರ್ಟ್‌ ಪೀಠ ಮಂಗಳವಾರ ರದ್ದುಗೊಳಿಸಿದೆ. ಅಲ್ಲದೆ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್‌ಗೆ ಪ್ರಮೋಟ್‌ ಮಾಡಲು ಸೂಚಿಸಿ ಆದೇಶಿಸಿದೆ. ಅದನ್ನು ವಿವಿ ಶೀಘ್ರ ಜಾರಿಗೊಳಿಸಬೇಕು, ತಕ್ಷಣ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿ ಕಾನೂನು ವಿದ್ಯಾರ್ಥಿಗಳು ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಭಟನಾನಿರತ ಸಂತೋಷ ನಂದೂರ, ಕಳೆದ ಆರು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇವೆ. ಧಾರವಾಡ ಹೈಕೋರ್ಟ್‌ ಪೀಠ 3 ವರ್ಷದ ಎಲ್‌ಎಲ್‌ಬಿಯ 2 ಮತ್ತು 4ನೇ ಸೆಮಿಸ್ಟರ್‌ ಪರೀಕ್ಷೆ ರದ್ದುಪಡಿಸಿ ಆದೇಶಿಸಿದೆ ಮತ್ತು ಮುಂದಿನ ಸೆಮಿಸ್ಟರ್‌ಗೆ ಪ್ರಮೋಟ್‌ ಮಾಡಲು ತಿಳಿಸಿದೆ. ಆದರೆ ಕರಾಕಾವಿವಿಯ ಕುಲಪತಿಯವರು ತರಗತಿಗಳನ್ನು ಆರಂಭಿಸುತ್ತಿಲ್ಲ. ಕಳೆದ ನಾಲ್ಕು ತಿಂಗಳಿಂದ ತರಗತಿಗಳಿಂದ ದೂರ ಉಳಿದಿದ್ದೇವೆ.

ಕುಲಪತಿಯವರು ತಕ್ಷಣ ತರಗತಿ ಆರಂಭಿಸಬೇಕು. ಕೋರ್ಟ್‌ ಆದೇಶದಂತೆ 3 ವರ್ಷದ ಎಲ್‌ಎಲ್‌ಬಿಯ 2ಮತ್ತು 4ನೇ ಸೆಮಿಸ್ಟರ್‌ ಪ್ರಮೋಟ್‌ ಆಗಿದೆ ಎಂದು ಅಧಿಸೂಚನೆ ಹೊರಡಿಸಬೇಕು. ಯುಜಿಸಿ ಕ್ಯಾಲೆಂಡರ್‌ ಪ್ರಕಾರ ಶೈಕ್ಷಣಿಕ ತರಗತಿ ಆರಂಭಿಸಬೇಕು. ಅಂದರೆ ಬೇರೆ ವಿವಿಯ ವಿದ್ಯಾರ್ಥಿಗಳೊಂದಿಗೆ ನಾವು ಸರಿಸಮನಾಗಿ ಅಧ್ಯಯನ ಮುಗಿಸಬಹುದು ಎಂದರು.

ಕರಾಕಾವಿವಿ ಕುಲಪತಿ ಪ್ರೊ|ಈಶ್ವರ ಭಟ್‌ ಮಾತನಾಡಿ, ಹೈಕೋರ್ಟ್‌ ಪೀಠ 3 ವರ್ಷದ ಎಲ್‌ ಎಲ್‌ಬಿಯ 2ಮತ್ತು 4ನೇ ಸೆಮಿಸ್ಟರ್‌ ಪರೀಕ್ಷೆ ನಡೆಸಬಾರದೆಂದು ಆದೇಶಿಸಿದೆ. ಇದು 5 ವರ್ಷದ ಎಲ್‌ಎಲ್‌ಬಿ ಕೋರ್ಸ್‌ನವರು ಮತ್ತು ರಿಪಿಟರ್ಗೆ ಅನ್ವಯಿಸಲ್ಲ. ಅವರಿಗೆ ಪರೀಕ್ಷೆ ನಡೆಸಲಾಗುವುದು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಡಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಹೆಜ್ಜೆ ಇರಿಸುತ್ತಿದೆಯೇ ವಿನಃ ವಿದ್ಯಾರ್ಥಿಗಳೊಂದಿಗೆ ಯಾವುದೇ ಸಂಘರ್ಷಕ್ಕೆ ಮುಂದಾಗಿಲ್ಲ.

Advertisement

ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಕೊಟ್ಟರೆ ಸಾಲದು ಅವರು ವಕಾಲತ್ತು ನಡೆಸಲು ಬಿಸಿಐ ಸನ್ನದ್ಧು ಮುಖ್ಯ. ಇದು ಒಂದಿಬ್ಬರು ವಿದ್ಯಾರ್ಥಿಗಳ ವಿಷಯವಲ್ಲ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ. ಹೀಗಾಗಿ ಪರೀಕ್ಷೆ ನಡೆಸುವುದು, ಬಿಡುವುದರ ಬಗ್ಗೆ ನ್ಯಾಯಾಲಯ ಮತ್ತು ಸರಕಾರದ ನಿರ್ದೇಶದನ್ವಯ ಹೆಜ್ಜೆ ಇರಿಸಲಾಗುವುದು. ಕೋವಿಡ್‌ -19ರ ಸಂದರ್ಭದಲ್ಲಿ ಕೋರ್ಟ್‌ ಮತ್ತು ಸರಕಾರದ ಆದೇಶದನ್ವಯ ನಡೆದುಕೊಳ್ಳಲಾಗಿತ್ತು. ಅದನ್ನು ಈಗ
ಮಾಡಲು ಆಗಲ್ಲ. ಖಾಸಗಿ ವಿಶ್ವವಿದ್ಯಾಲಯಗಳು ಈಗಾಗಲೇ ಆಪ್‌ಲೈನ್‌ ತರಗತಿ ಆರಂಭಿಸಿವೆ. ಆದರೆ ನಮ್ಮದು ಕಾನೂನು ಇಲಾಖೆ ವ್ಯಾಪ್ತಿಗೆ ಬರುವುದರಿಂದ ಅದರ ನಿರ್ದೇಶನದಂತೆ ನಡೆದುಕೊಳ್ಳಬೇಕಾಗುತ್ತದೆ.

ನಮ್ಮದೇ ಆದ ವಕೀಲರು, ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ, ತಜ್ಞರ ಸಲಹೆ ಪಡೆದು ಮುಂದಿನ ಹೆಜ್ಜೆ ಇರಿಸಲಾಗುವುದು. ರಾಜ್ಯಾದ್ಯಂತ ವಿವಿ ವ್ಯಾಪ್ತಿಯಲ್ಲಿ 26 ಸಾವಿರ ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ 3 ವರ್ಷದ ಕೋರ್ಸ್‌ಗೆ ಶೇ.60 ಹಾಗೂ 5ವರ್ಷದ ಕೋರ್ಸ್‌ಗೆ ಶೇ. 40ರಷ್ಟಿದ್ದಾರೆ. 3 ವರ್ಷದ ಕೋರ್ಸ್‌ಗೆ 18,203 ವಿದ್ಯಾರ್ಥಿಗಳು, 5 ವರ್ಷದ ಕೋರ್ಸ್‌ಗೆ 13,577 ವಿದ್ಯಾರ್ಥಿಗಳಿಗೆ ಪರೀಕ್ಷೆಗಾಗಿ ಹಾಲ್‌ ಟಿಕೆಟ್‌ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next