Advertisement

ಮೀಸಲಾತಿ ಮಿತಿ ರದ್ದು ಮಾಡಿ

11:14 PM Aug 10, 2021 | Team Udayavani |

ಹೊಸದಿಲ್ಲಿ: ಭಾರೀ ಚರ್ಚೆಯ ಬಳಿಕ ಲೋಕಸಭೆಯಲ್ಲಿ ಮಂಗಳವಾರ, ತಮ್ಮದೇ ಆದ ಒಬಿಸಿ ಪಟ್ಟಿ (ಇತರ ಹಿಂದುಳಿದ ವರ್ಗಗಳ ವರ್ಗಗಳ ಪಟ್ಟಿ) ತಯಾರಿಸಲು ರಾಜ್ಯಗಳಿರುವ ಅಧಿಕಾರವನ್ನು ಪುನಃಸ್ಥಾಪಿಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆ(127ನೇ ತಿದ್ದುಪಡಿ)ಗೆ ಅಂಗೀಕಾರ ದೊರೆತಿದೆ.

Advertisement

ಸೋಮವಾರವಷ್ಟೇ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್‌ ಅವರು ಲೋಕಸಭೆಯಲ್ಲಿ ಈ ಮಸೂದೆ‌ ಮಂಡಿಸಿದ್ದರು. ಮಂಗಳವಾರ ಹಲವು ಗಂಟೆಗಳ ಕಾಲ ನಡೆದ ಆರೋಗ್ಯಪೂರ್ಣ ಚರ್ಚೆಯ ಬಳಿಕ ಸರ್ವಾನುಮತದಿಂದ ಮಸೂದೆಗೆ ಅಂಗೀಕಾರ ದೊರೆಯಿತು. ಇದರಿಂದಾಗಿ, ಇನ್ನು ಮುಂದೆ ರಾಜ್ಯಗಳಿಗೆ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ತಯಾರಿಸಲು ಅವಕಾಶ ಮತ್ತೆ ಸಿಕ್ಕಂತಾಗಿದೆ. 2018ರಲ್ಲಿ ಸರಕಾರ ತಂದಿದ್ದ ತಿದ್ದುಪಡಿಯಿಂದಾಗಿ ರಾಜ್ಯಗಳು ಈ ಅವಕಾಶದಿಂದ ವಂಚಿತವಾಗಿದ್ದವು.

ಮರಾಠಾ, ಜಾಟ್‌, ಪಟೇಲರು, ಕರ್ನಾಟಕದಲ್ಲಿ ಪಂಚಮಸಾಲಿ ಸೇರಿದಂತೆ ವಿವಿಧ ಸಮುದಾಯಗಳು ಮೀಸಲಾತಿಗೆ ಆಗ್ರಹಿಸುತ್ತಿರುವ ಹೊತ್ತಲ್ಲೇ ಈ ಬೆಳವಣಿಗೆ ನಡೆದಿದೆ. ವಿಶೇಷವೆಂದರೆ, ಲೋಕಸಭೆಯ ಚರ್ಚೆ ವೇಳೆ ಕಾಂಗ್ರೆಸ್‌ ಸೇರಿದಂತೆ ಬಹುತೇಕ ವಿಪಕ್ಷಗಳು, ಮೀಸಲಾತಿಗೆ ಇರುವ ಶೇ.50ರ ಮಿತಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿವೆ.

ಐತಿಹಾಸಿಕ ಎಂದ ಸಚಿವ: ಈ ಸಂವಿಧಾನ ತಿದ್ದುಪಡಿ ಮಸೂದೆ ಯಿಂದಾಗಿ ದೇಶದ 671 ಜಾತಿಗಳಿಗೆ ಸಹಾಯಕವಾಗಲಿದ್ದು, ಇದೊಂದು ಐತಿಹಾಸಿಕ ಶಾಸನವಾಗಲಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್‌ ಹೇಳಿದರು. ಇದರಿಂದಾಗಿ ರಾಜ್ಯಗಳಿಗೆ ತಮ್ಮದೇ ಆದ ಒಬಿಸಿ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರ ಮತ್ತೆ ಸಿಗಲಿದ್ದು, ಹಲವು ಸಮುದಾಯಗಳಿಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ದೊರೆಯಲಿದೆ ಎಂದೂ ಹೇಳಿದರು. ಈ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸದೇ ಇದ್ದರೆ, 671 ಒಬಿಸಿ ಸಮುದಾಯಗಳು ಮೀಸಲಾತಿಯಿಂದ ವಂಚಿತವಾಗುತ್ತವೆ ಎಂದೂ ಕುಮಾರ್‌ ತಿಳಿಸಿದರು.

ಮಿತಿ ತೆಗೆದುಹಾಕಿ: ಲೋಕಸಭೆಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ಈ ಮಸೂದೆಗೆ ಕಾಂಗ್ರೆಸ್‌ನ ಸಂಪೂರ್ಣ ಬೆಂಬಲವಿದೆ ಎಂದರು. ಜತೆಗೆ, 2018ರಲ್ಲಿ ಇದಕ್ಕೆ ತಿದ್ದುಪಡಿ ತಂದಿದ್ದ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ ಅವರು, ಅಂದೇ ನಾವು ನೀಡಿದ್ದ ಸಲಹೆಯನ್ನು ಸ್ವೀಕರಿಸಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ ಎಂದರು. ಮೀಸಲಾತಿಗೆ ಇರುವ ಶೇ.50ರ ಮಿತಿಯನ್ನು ತೆಗೆದುಹಾಕಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ರಾಜ್ಯಗಳ ಅಭಿಪ್ರಾಯವನ್ನು ನೀವು ಆಲಿಸಬೇಕು. ಶೇ.50ರ ಮಿತಿಯನ್ನು ಮೀರುವಂಥ ಅಧಿಕಾರವನ್ನು ರಾಜ್ಯಗಳಿಗೆ ನೀಡಬೇಕು ಎಂದೂ ಚೌಧರಿ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ವೀರೇಂದ್ರ ಕುಮಾರ್‌, 30 ವರ್ಷಗಳ ಹಿಂದೆ ನಿಗದಿಪಡಿಸಲಾದ ಮೀಸಲಾತಿ ಮಿತಿಯನ್ನು ಬದಲಿಸಬೇಕೆಂದು ಹಲವು ಸಂಸದರು ಕೇಳಿಕೊಂಡಿದ್ದಾರೆ. ಆದರೆ, ಹಲವು ಬಾರಿ ನ್ಯಾಯಾಲಯಗಳು ಈ ಮಿತಿಯನ್ನು ಶೇ.50ಕ್ಕೇ ಉಳಿಸಿಕೊಳ್ಳುವಂತೆ ಹೇಳಿವೆ. ಹೀಗಾಗಿ, ಎಲ್ಲ ಸಾಂವಿಧಾನಿಕ ಮತ್ತು ಕಾನೂನು ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸೂಕ್ಷ್ಮವಾಗಿ ಈ ಕುರಿತು ಪರಿಶೀಲಿಸಬೇಕಾಗುತ್ತದೆ ಎಂದರು.

Advertisement

ಇದೇ ವೇಳೆ, ಜೆಡಿಯು ನಾಯಕ ಲಲನ್‌ ಸಿಂಗ್‌, ಎಸ್ಪಿ ಸಂಸದ ಅಖೀಲೇಶ್‌ ಯಾದವ್‌, ಬಿಎಸ್ಪಿಯ ರಿತೇಶ್‌ ಪಾಂಡೆ, ಡಿಎಂಕೆ ನಾಯಕ ಟಿ.ಆರ್‌.ಬಾಲು ಅವರು ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಎಂದು ಒತ್ತಾಯಿಸಿದರು.

ಮೋದಿ ಫೋಟೋ ಏಕೆ?:

ಈ ನಡುವೆ ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಪ್ರಕಟಿಸುವ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಕೇಂದ್ರ ಆರೋಗ್ಯ ಖಾತೆ ಸಹಾಯಕ ಸಚಿವೆ ಭಾರತಿ ಪ್ರವೀಣ್‌ ಪವಾರ್‌ ಉತ್ತರಿಸಿದ್ದಾರೆ. ಲಸಿಕೆ ಪಡೆದ ಬಳಿಕವೂ ಕೊರೊನಾ ಮಾರ್ಗಸೂಚಿ ಪಾಲಿಸಬೇಕೆಂದು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಧಾನಿ ಫೋಟೋ ಮತ್ತು ಸಂದೇಶವನ್ನು ಪ್ರಮಾಣಪತ್ರದಲ್ಲಿ ಪ್ರಕಟಿಸಲಾಗಿದೆ ಎಂದಿದ್ದಾರೆ.

ರಾಜ್ಯಸಭೆಯಲ್ಲಿ ಹೈಡ್ರಾಮಾ :

ರಾಜ್ಯಸಭೆಯಲ್ಲಿ ಕೃಷಿ ಕಾಯ್ದೆಗಳು ಹಾಗೂ ರೈತರ ಸಮಸ್ಯೆಗಳ ಕುರಿತ ಚರ್ಚೆಗೆ ಸಂಬಂಧಿಸಿ ವಿಪಕ್ಷಗಳು ಗದ್ದಲವೆಬ್ಬಿಸಿದ ಕಾರಣ ಹಲವು ಬಾರಿ ಕಲಾಪಕ್ಕೆ ಅಡ್ಡಿಯಾಗಿ ಕೊನೆಗೆ ದಿನದ ಮಟ್ಟಿಗೆ ಮುಂದೂಡಿಕೆಯಾಗಿದೆ. ಅಲ್ಲದೆ, ಸದನದಲ್ಲಿ ಕೆಲವು ಕಾಲ ಹೈಡ್ರಾಮಾ ಕೂಡ ನಡೆದಿದೆ. ಕೃಷಿ ಕಾಯ್ದೆಗೆ ಸಂಬಂಧಿಸಿ ಗಮನ ಸೆಳೆಯುವ ನಿರ್ಣಯವನ್ನು “ಅಲ್ಪಾವಧಿ ಚರ್ಚೆ’ಯಾಗಿ ಬದಲಾಯಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌, ಸದನದಲ್ಲಿ ಕೋಲಾಹಲ ಸೃಷ್ಟಿಸಿತು. ಆಪ್‌ ಸಂಸದ ಸೇರಿದಂತೆ ವಿಪಕ್ಷಗಳ ಕೆಲವು ನಾಯಕರು ಮೇಜಿನ ಮೇಲೆ ನಿಂತು ಘೋಷಣೆ ಕೂಗಿದ ಘಟನೆಯೂ ನಡೆಯಿತು.

ಮೊದಲ ಬಾರಿಗೆ ಸುಗಮ ಕಲಾಪ :

ಸಂಸತ್‌ನ ಮುಂಗಾರು ಅಧಿವೇಶನ ಆರಂಭ (ಜು.19) ಆದಾಗಿನಿಂದ ಇಲ್ಲಿಯವರೆಗೆ ಇದೇ ಮೊದಲ ಬಾರಿಗೆ ಲೋಕಸಭೆಯಲ್ಲಿ ಚರ್ಚೆ ಸುಗಮವಾಗಿ ನಡೆದಿದೆ. ಹಿಂದುಳಿದ ವರ್ಗಗಳ ಹಿತಾಸಕ್ತಿಗೆ ಸಂಬಂಧಿಸಿದ ಮಸೂದೆ ಇದಾದ ಕಾರಣ, ಕಲಾಪಕ್ಕೆ ಅಡ್ಡಿಪಡಿಸದೇ ಬೆಂಬಲ ನೀಡುತ್ತೇವೆ ಎಂದು ವಿಪಕ್ಷಗಳು ಸೋಮವಾರವೇ ಘೋಷಿಸಿದ್ದವು. ಅದರಂತೆ, ಪೆಗಾಸಸ್‌, ಕೃಷಿ ಕಾಯ್ದೆ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸುತ್ತಾ ಗದ್ದಲವೆಬ್ಬಿಸುತ್ತಿದ್ದ ಪಕ್ಷಗಳು ಮಂಗಳವಾರ ಯಾವುದೇ ಗದ್ದಲ ಮಾಡದೇ ಚರ್ಚೆಯಲ್ಲಿ ಪಾಲ್ಗೊಂಡವು.

1950ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌, ತಾನು ಆಡಳಿತ ನಡೆಸಿದ 40 ವರ್ಷಗಳಲ್ಲಿ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಲಿಲ್ಲ. ಹಿಂದುಳಿತ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನವನ್ನೂ ನೀಡಲಿಲ್ಲ. ಅದನ್ನು ನೀಡಿದ್ದು ಮೋದಿ ಸರಕಾರ.ಭೂಪೇಂದ್ರ ಯಾದವ್‌, ಕೇಂದ್ರ ಕಾರ್ಮಿಕ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next