Advertisement

ವಾರಾಂತ್ಯ ಕರ್ಫ್ಯೂ: ನಿಯಮ ಉಲ್ಲಂಘನೆ ಚಳವಳಿ: ಕೆನರಾ ಉದ್ಯಮಿಗಳ ಒಕ್ಕೂಟ ಎಚ್ಚರಿಕೆ

10:40 PM Jan 20, 2022 | Team Udayavani |

ಉಡುಪಿ: ವಾರಾಂತ್ಯ ಕರ್ಫ್ಯೂ ರದ್ದು ಮಾಡಬೇಕು ಅಥವಾ ಎಲ್ಲ ಉದ್ಯಮಗಳಿಗೂ ವಾರಾಂತ್ಯದಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬೇಕು. ಇಲ್ಲವಾದರೆ ಸರಕಾರದ ನಿಯಮ ಉಲ್ಲಂಘಿಸಿ ವಾರಾಂತ್ಯದಲ್ಲಿ ವ್ಯಾಪಾರ ವಹಿವಾಟು ನಡೆಸಲು ಕೆನರಾ ಉದ್ಯಮಿಗಳ ಒಕ್ಕೂಟ ನಿರ್ಧರಿಸಿದೆ.

Advertisement

ಉಡುಪಿ ಮತ್ತು ದಕ್ಷಿಣ ಜಿಲ್ಲೆಗಳ ಒಟ್ಟು 40 ವರ್ತಕರ ಸಂಘಟನೆಗಳನ್ನೊಳಗೊಂಡ ಕೆನರಾ ಉದ್ಯಮಿಗಳ ಒಕ್ಕೂಟದ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ.

ಒಕ್ಕೂಟದ ಅಧ್ಯಕ್ಷ ಸಂತೋಷ್‌ ಕಾಮತ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ವ್ಯಾಪಾರಿ ವರ್ಗ ಲಾಕ್‌ಡೌನ್‌ನಿಂದ ಸಾಕಷ್ಟು ಸಂಕಷ್ಟ ಎದುರಿಸಿದೆ. ಸರಕಾರ ಈಗ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿರುವುದು ಅವೈಜ್ಞಾನಿಕ. ಇದರಿಂದ ವರ್ತಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಸರಿಯಲ್ಲ. ನಮಗೂ ವಾರಾಂತ್ಯ ಕರ್ಫ್ಯೂ ವೇಳೆ ವ್ಯಾಪಾರ, ವಹಿವಾಟು ನಡೆಸಲು ಅವಕಾಶ ನೀಡಬೇಕು. ಸರಕಾರ ಕೂಡಲೇ ವಾರಾಂತ್ಯ ಕರ್ಫ್ಯೂ ಹಿಂದಕ್ಕೆ ಪಡೆಯಬೇಕು ಅಥವಾ ಪೂರ್ಣ ಪ್ರಮಾಣದಲ್ಲಿ ಲಾಕ್‌ಡೌನ್‌ ಮಾಡಬೇಕು. ಕೇವಲ ವರ್ತಕ ವರ್ಗಕ್ಕೆ ಪದೇಪದೆ ಅನ್ಯಾಯ ಮಾಡುವುದು ಸರಿಯಲ್ಲ ಎಂದರು.

ಕ್ಷೌರಿಕರ ಸಂಕಷ್ಟ :

ವಾರಾಂತ್ಯ ಕರ್ಫ್ಯೂನಿಂದ ಕ್ಷೌರಿಕರು ತುಂಬಾ ಸಂಕಷ್ಟದಲ್ಲಿದ್ದಾರೆ. ನಮಗೆ ಹೆಚ್ಚು ವ್ಯಾಪಾರ ಇರುವುದು ವಾರಾಂತ್ಯದಲ್ಲಿ. ಈಗ ಅದೇ ದಿನದಲ್ಲಿ ನಾವು ಅಂಗಡಿ ಬಂದ್‌ ಮಾಡಿ ನಷ್ಟ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ ಎಂದು ಉಡುಪಿ ತಾಲೂಕು ಸವಿತಾ ಸಮಾಜ ಅಧ್ಯಕ್ಷ ರಾಜು ಭಂಡಾರಿ ಕಿನ್ನಿಮೂಲ್ಕಿ ಹೇಳಿದರು.

Advertisement

ಜಿಲ್ಲಾ ಬೇಕರಿ ಅಸೋಸಿಯೇಶನ್‌ ಅಧ್ಯಕ್ಷ ವಾಲ್ಟರ್‌ ಸಲ್ದಾನ ಮಾತನಾಡಿ, ವಾರಾಂತ್ಯ ಕರ್ಫ್ಯೂನಲ್ಲಿ ಬೇಕರಿ ಅವರಿಗೆ ವ್ಯಾಪಾರ ಮಾಡಲು ಅವಕಾಶ ನೀಡಿದ್ದರೂ ಜನರಿಲ್ಲದೆ ನಾವು ಮಾಡಿದ ಪದಾರ್ಥಗಳನ್ನು ತೋಡಿಗೆ ಎಸೆಯುವ ಸ್ಥಿತಿ ಎದುರಾಗಿದೆ ಎಂದರು.

ಸಾಮಾಜಿಕ ಹೋರಾಟಗಾರ ಪ್ರವೀಣ್‌ ವಾಲ್ಕೆ, ಉಡುಪಿ ಜಿಲ್ಲಾ ಟೈಲರ್‌ ಅಸೋಸಿಯೇಶನ್‌ ಅಧ್ಯಕ್ಷ ಗುರುರಾಜ್‌ ಶೆಟ್ಟಿ, ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯ ಮ್ಯಾಕ್ಸಿಮ್‌ ಸಲ್ದಾನ ಉಪಸ್ಥಿತರಿದ್ದರು.

ಬದಲುಕಲು ಬಿಡಿ :

ಜಿಲ್ಲಾ ವರ್ತಕರ ಹಿತರಕ್ಷಣೆ ವೇದಿಕೆಯ ಅಧ್ಯಕ್ಷ ದಿವಾಕರ್‌ ಸನಿಲ್‌, ಅಂಗಡಿ ಮಾಲಕರಿಗೆ ಬದಲುಕಲು ಬಿಡಿ ಎಂದು ಹೋರಾಟ ಆರಂಭಿಸಿದ್ದೇವೆ. ವಾರಾಂತ್ಯ ಕರ್ಫ್ಯೂ ಹಿಂದಕ್ಕೆ ಪಡೆಯದಿದ್ದರೆ ಜಿಲ್ಲೆಯ ಎಲ್ಲ ವರ್ತಕರು ವಾರಾಂತ್ಯದಲ್ಲಿ ಮಳಿಗೆ ತೆರೆಯಲಿದ್ದಾರೆ ಎಂದು ಹೇಳಿದರು.

ಒಕ್ಕೂಟದ ಗೌರವಾಧ್ಯಕ್ಷ ಎಂ.ಜಿ. ಹೆಗಡೆ ಮಾತನಾಡಿ, ರಾಜ್ಯ ಸರಕಾರ ವಾರಾಂತ್ಯ ಕರ್ಫ್ಯೂ ಹೇರುವುದು ಅವೈಜ್ಞಾನಿಕ ಹಾಗೂ ಅನೈತಿಕ. ರಾಜಕೀಯ ನಾಯಕರ ಹಾಗೂ ಧಾರ್ಮಿಕ ಸಂಸ್ಥೆಗಳ ಕಾರ್ಯಕ್ರಮಕ್ಕೆ ಯಾವುದೇ ನಿರ್ಬಂಧ ಹಾಕುವುದಿಲ್ಲ. ಆದರೆ ವರ್ತಕರಿಗೆ ಮಾತ್ರ ವ್ಯಾಪಾರ ನಡೆಸಲು ಅವಕಾಶ ನೀಡುವುದಿಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದರು.

ಸರಕಾರವೇ ಹೊಣೆ :

ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯ ಕರ್ಫ್ಯೂನಿಂದ ನಾವೆಲ್ಲ ಕೆಲಸ ಕಳೆದುಕೊಂಡಿದ್ದೇವೆ. ರಾತ್ರಿ ಮತ್ತು ವಾರಾಂತ್ಯದಲ್ಲಿ ನಮ್ಮ ಕೆಲಸ ಇರುವುದು. ಈಗ ಕಾರ್ಯಕ್ರಮಗಳಿಲ್ಲದೆ ನಾವು ಸಂಪೂರ್ಣ ಸೋತು ಹೋಗಿದ್ದೇವೆ. ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ಸಮಸ್ಯೆಯಿಂದ ಜೀವ ಕಳೆದುಕೊಂಡರೆ ಸರಕಾರವೇ ಇದಕ್ಕೆ ಹೊಣೆ ಆಗಲಿದೆ ಎಂದು ಜಿಲ್ಲಾ ಧ್ವನಿ-ಬೆಳಕು ಸಂಯೋಜಕರ ಸಂಘಟನೆ ಅಧ್ಯಕ್ಷ ರಾಮಕೃಷ್ಣ ಕುಂದರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next