Advertisement

ಕೆನರಾ ಬ್ಯಾಂಕ್‌ ಸ್ಥಾಪನೆ ನಿರ್ಣಯದ ನೆಲೆ ಕಾಸರಗೋಡಿನ “ಬಂಗ್ಲೆ’

03:45 AM Jul 03, 2017 | |

ಕಾಸರಗೋಡು: ಕರಂದಕ್ಕಾಡಿ ನಲ್ಲಿರುವ ಅಗ್ನಿಶಾಮಕ ದಳ ನಿಲ್ದಾಣದ ಬದಿಯಿಂದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿರುವ ಕಚ್ಚಾ ರಸ್ತೆ ನೇರ ಸಾಗುತ್ತಿರುವುದು ಬಂಗ್ಲೆ ಪ್ರದೇಶಕ್ಕೆ. ನಗರದ ಮದ್ಯೆ ಇದ್ದರೂ ಈ ಪರಿಸರ ಕಾಡಿನ ವಾತಾವರಣ   ಮೂಡಿಸುತ್ತಿದೆ. ಹಳೆ ತಲೆಮಾರು  ಈ ಪ್ರದೇಶದಲ್ಲಿದ್ದ    ಭವ್ಯ ಕಟ್ಟಡವನ್ನು ಬಂಗ್ಲೆ ಎಂದು ಹೆಸರಿಸಿದ್ದು, ಇಂದು ಕಟ್ಟಡ ನೆಲಸಮವಾಗಿ ಕುರುಹು ಕೂಡ ಕಾಣದಿದ್ದರೂ ಎಲ್ಲರೂ ಈ ಪ್ರದೇಶವನ್ನು ಕರೆಯುವುದು “ಬಂಗ್ಲೆ’ ಎಂದೇ.

Advertisement

ಈ ಪ್ರದೇಶ ಹಿಂದೆ ಅಮ್ಮೆಂಬಳ ಕುಟುಂಬದವರದ್ದಾಗಿತ್ತು. ಅಮ್ಮೆಂಬಳ ಸುಬ್ಬರಾಯ ಅವರು  ಇಲ್ಲಿನ  ಬಂಗ್ಲೆಯಲ್ಲಿ ಕೂತು ಕೆನರಾ ಬ್ಯಾಂಕ್‌ ಸ್ಥಾಪನೆಯ ನಿರ್ಣಯಕ್ಕೆ ರೂಪು ರೇಷ ನೀಡಿದ್ದರು ಅನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಅದಕ್ಕೆ ಪ್ರೇರಣೆ ನೀಡಿರುವ ಘಟನೆಯೂ ಕೇಳಲು ಸಾಕಷ್ಟು ಉತ್ಸಾಹ ತೋರುತ್ತಿದೆ.

ಕೆನರಾ ಬ್ಯಾಂಕ್‌ ಸ್ಥಾಪಕ ಅಮ್ಮೆಂಬಳ ಸುಬ್ಬರಾಯ ಪೈ ಅವರ ಸಹೋದರ ದಿ| ವೆಂಕಟರಮಣ ಪೈ  ಅವರು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಮೊದಲ ವಕೀಲ ಅನ್ನುವ ಖ್ಯಾತಿ ಪಡೆದವರು. ಬ್ರಿಟಿಷರ ಕಾಲದಲ್ಲಿ ಇವರನ್ನು ಸರಕಾರ ಮದ್ರಾಸ್‌ ಹೈಕೋರ್ಟಿನ ಜಡ್ಜ್ ಆಗಿ ನೇಮಿಸಿತ್ತು. 

ಇವರು ಅಂದಿನ ಬ್ರಿಟಿಷ್‌ ಬ್ಯಾಂಕ್‌ ಆಗಿದ್ದ ಅರ್ಬಟ್‌ ನೋಟ್‌ ಬ್ಯಾಂಕ್‌ನಲ್ಲಿ 20,000 ರೂ. ಠೇವಣಿ ಇರಿಸಿದ್ದರಂತೆ. ಈ ಬ್ಯಾಂಕ್‌ ಹೇಳದೆ ಕೇಳದೆ ಭಾರತದಲ್ಲಿನ ತನ್ನ ಶಾಖೆ ಮುಚ್ಚಿ ಇಲ್ಲಿಂದ ಪಲಾಯನ ಮಾಡಿದ ವೇಳೆ ತನ್ನ ದೊಡ್ಡ ಮೊತ್ತ ಕಳಕೊಂಡ ವೆಂಕಟರಮಣ ಪೈ ಖನ್ನತೆಗೆ ಒಳಗಾದರಂತೆ. ಆ ವೇಳೆ ಅಮ್ಮೆಂಬಳ ಸುಬ್ಬರಾಯರು ವೆಂಕಟರಮಣ ಪೈ ಅವರನ್ನು ಮದ್ರಾಸ್‌ನಿಂದ ಕಾಸರ ಗೋಡಿಗೆ ಕರೆ ತಂದು ಬಂಗ್ಲೆಯಲ್ಲಿ ನಿಲ್ಲಿಸಿದ್ದರು. ಅಂದು ಇದು ಜಡ್ಜ್ರ ಬಂಗ್ಲೆ ಅನ್ನುವ ಹೆಸರು ಪಡೆದುಕೊಂಡಿತು.

ಬ್ಯಾಂಕ್‌ ತೆರೆಯಲು ಪರವಾನಿಗೆ ಪಡೆಯುವುದು ಸುಲಭವಲ್ಲ. ಹೀಗಾಗಿ ಕೆನರಾ ಮ್ಯೂಚುವಲ್‌ ಫಂಡ್‌ ಅನ್ನುವ ಹೆಸರಲ್ಲಿ 1903ರಲ್ಲಿ ಹಣದ ವಹಿವಾಟು ಸಂಸ್ಥೆಗೆ ರೂಪು ನೀಡಲಾಯಿತು. 

Advertisement

ಇದರ ಪ್ರಥಮ ಶಾಖೆಯನ್ನು ಮಂಗಳೂರಿನ ಡೊಂಗರಕೇರಿಯಲ್ಲಿ ತೆರೆಯಲಾಯಿತು. ಇದು ಫೌಂಡರ್ ಬ್ರಾಂಚ್‌ ಎಂದು ಇಂದು ಗುರುತಿಸ ಲಾಗುತ್ತಿದೆ. 1906ರಲ್ಲಿ ಪರವಾನಿಗೆ ದೊರೆತ ಬಳಿಕ ಕೆನರಾ ಬ್ಯಾಂಕಿನ ದ್ವಿತೀಯ ಶಾಖೆಯನ್ನು ಕಾಸರಗೋಡಿನಲ್ಲಿ ತೆರೆಯಲಾಯಿತು. ಈ ಶಾಖಾ ಕಟ್ಟಡ ಶ್ರೀ ವರದರಾಜ ವೆಂಕಟರಮಣ ಕ್ಷೇತ್ರದ ಸಮೀಪದಲ್ಲಿ ಇಂದೂ ಇದೆ. ಹಿಂದೆ ಈ ಪರಿಸರದಲ್ಲಿ ಬಂದರು ಇತ್ತು. ಇಲ್ಲಿಂದ ಅರಬ್‌ ರಾಷ್ಟ್ರಗಳಿಗೆ ಮಾಪಿಳ ಟೊಪ್ಪಿ, ಚುರುಟು (ಹೊಗೆ ಸೊಪ್ಪಿನ ಬೀಡಿ) ಮುಂತಾದವು ಗಳು ರಫ್ತಾಗುತ್ತಿದ್ದುವು. ಇವರು ತರುವ ಹಣವನ್ನು ಈ ಬ್ಯಾಂಕಿನಲ್ಲಿ ಇರಿಸಲು ಅನುವು ಮಾಡಿಕೊಡಲು ಇಲ್ಲಿಯೇ ಶಾಖೆ ತೆರೆಯಲಾಗಿತ್ತು. ಈ ಕಟ್ಟಡ ಇಂದು ಮಂಜೇಶ್ವರ ಕ್ಷೇತ್ರದ ಸೊತ್ತಾಗಿದೆ.

ಅಂತೂ ಚರಿತ್ರೆಯ ಪುಟದಲ್ಲಿ ಸ್ಥಾನ ಪಡೆದ ಬಂಗ್ಲೆ ಆ ದಿನಗಳಲ್ಲಿ ಮಹಾನ್‌ ಚೇತನಗಳ ಪಾದಸ್ಪರ್ಶದಿಂದ ಪುಳಕಿತಗೊಂಡಿದೆ. ಕಾಶೀ ಮಠಾಧೀಶ ಶ್ರೀ ಸುಧೀಂದ್ರ ತೀರ್ಥರು ಈ ಬಂಗ್ಲೆಗೆ ಚಿತ್ತೆ$çಸಿದ್ದಾರೆ. ಕೋಲ್ಕತಾದ ರಾಮಕೃಷ್ಣ ಆಶ್ರಮದ ಸ್ವಾಮೀಜಿ ಭೇಟಿ ಮಾಡಿದ್ದಾರೆ. ಡಾ| ಟಿ.ಎಂ.ಎ. ಪೈ, ಟಿ.ಎ. ಪೈ, ಕರ್ನಾಟಕ ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪ …ಹೀಗೆ ಅನೇಕರು ಇಲ್ಲಿನ ಬಂಗ್ಲೆಗೆ ಭೇಟಿ ನೀಡಿದವರಲ್ಲಿ ಸೇರಿದ್ದಾರೆ.

ಮುಂದೆ ಈ ಬಂಗ್ಲೆಯನ್ನು ದಿ| ಕಾಪು ವಾಮನ ಶೆಣೈ ಅವರು ಖರೀದಿಸಿದರು (1957). 1933ರಲ್ಲಿ ವಾಮನ ಶೆಣೈ ಅವರು ಇಲ್ಲಿನ ಮಲ್ಲಿಕಾರ್ಜುನ ಕ್ಷೇತ್ರದ ಪರಿಸರದಲ್ಲಿ ಶ್ರೀನಿವಾಸ ಮುದ್ರಣಾಲಯ ಸ್ಥಾಪಿಸಿ ಮುದ್ರಣ ರಂಗದಲ್ಲಿ ಹೆಸರು ಪಡದಿದ್ದರು. ಅವರು ಬಂಗ್ಲೆ ಖರೀದಿಸಿದ ಬಳಿಕ 1966ರಲ್ಲಿ ಬಂಗ್ಲೆಯಲ್ಲೂ ಮುದ್ರಣಾಲಯ ತೆರೆದರು. ಆ ವೇಳೆ  ಇಲ್ಲಿಗೆ ಕಾಶೀ ಮಠಾಧೀಶರು ಆಗಮಿಸಿದ್ದರು. ದಿ|ವಾಮನ ಶೆಣೈ ಅವರು ಈ ಬಂಗ್ಲೆಯ ಭವ್ಯತೆಯನ್ನು ಮತ್ತೂ ಬೆಳಗಿದರು. ಇಲ್ಲಿನ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ಹಿಂದೆ ನಡೆದ ಕೋಟಿ ರಾಮನಾಮ ಲಿಖೀತ ಯಜ್ಞಕ್ಕೆ ಬೇಕಾದ ಪುಸ್ತಕ ಒದಗಿಸಿಕೊಟ್ಟವರು ದಿ| ವಾಮನ ಶೆಣೈ ಅವರು. 1937ರಲ್ಲಿ ಇವರು “ಪ್ರವಾಸಿ’ ಹೆಸರಿನ ಕನ್ನಡ ಮಾಸಿಕ ಪ್ರಾರಂಭಿಸಿ ಅನೇಕ ಕತೆಗಳನ್ನೂ ಪ್ರಕಟಿಸಿದ್ದರು. ಹನ್ನೊಂದು ತಿಂಗಳ ಕಾಲ ಈ ಪತ್ರಿಕೆ ನಡೆದಿತ್ತು. ವಾಮನ ಶೆಣೈ ಕಾಲಾನಂತರ ಅವರ ಪುತ್ರ ದಿ| ಗೋಕುಲ್‌ದಾಸ್‌ ಶೆಣೈ ಮುದ್ರಣಾಲಯವನ್ನು ಚಲಾಯಿಸಿದರು. ಇವರು ಲಂಡನ್‌ಗೆ ತೆರಳಿ ಆ ಕಾಲದ ಮುದ್ರಣಾಲಯದ ನೂತನ ಯಂತ್ರವನ್ನೂ ಇಲ್ಲಿಗೆ ತರಿಸಿ ಕಾಸರಗೋಡಿಗೆ ಪರಿಚಯಿಸಿದ್ದರು. ಇವರ ಬಳಿಕ ಇದೀಗ ಪುತ್ರರು ವಹಿವಾಟು ನೋಡುತ್ತಿದ್ದಾರೆ.

ಬಂಗ್ಲೆ ಪ್ರದೇಶ ಇದೀಗ ಶಾಂತಿ ನಗರ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿರುವ ಮನೆಯಲ್ಲಿ ದಿ| ಗೋಕುಲ್‌ದಾಸ್‌ ಶೆಣೈ ಅವರ ಪುತ್ರರಾದ ಕೆ. ಪುಂಡಲೀಕ ಶೆಣೈ ಮತ್ತು ರಾಮಕೃಷ್ಣ ಶೆಣೈ ಅವರ ಕುಟುಂಬ ವಾಸ್ತವ್ಯವಿದೆ. ದಿ| ವಾಮನ ಶೆಣೈ ಈ ಬಂಗ್ಲೆ ಖರೀದಿಸುವ ವೇಳೆ ಒಟ್ಟು ಸ್ಥಳ 15 ಎಕ್ರೆಯಷ್ಟಿತ್ತು. ಉಳುವವನೇ ಹೊಲದೊಡೆಯ ಕಾನೂನಿನಂತೆ ಸೊತ್ತು ಹಲವರಿಗೆ ದೊರೆತಿದ್ದು ಇದೀಗ 9 ಎಕ್ರೆ ಸ್ಥಳ “ಬಂಗ್ಲೆ’ ಪ್ರದೇಶದ ಸೊತ್ತಾಗಿ ಉಳಿದಿದೆ.ನಗರದ ಪ್ರದೇಶದಲ್ಲೇ ಇರುವ  ಕಾಡಿನ ಪ್ರದೇಶ ಹಸಿರು ತಾಣ. ಅನೇಕ ಮರಗಳು, ಔಷಧ ಸಸ್ಯಗಳು ಇಲ್ಲಿವೆ. ಕೆಲವೊಮ್ಮೆ ಸಸ್ಯ ತಜ್ಞರು ಪರಿಶೀಲಿಸಿದರೆ ಅಪೂರ್ವ ಸಸ್ಯ ಸಂಪತ್ತನ್ನು ಇಲ್ಲಿ ಗುರುತಿಸಬಹುದು.

ಈ ಬಂಗ್ಲೆಯ ಇತಿಹಾಸವನ್ನು ಪುಂಡಲೀಕ ಶೆಣೈ ಅವರು ತಿಳಿಸುತ್ತಿದ್ದಂತೆ ಅವರು ಈ ಬಂಗ್ಲೆಯ ಕುರಿತು ಅರಿತಿರುವ ಬಗ್ಗೆ ಹೆಮ್ಮೆ ಎನಿಸುತ್ತದೆ.

ಕೆನರಾ ಬ್ಯಾಂಕ್‌ ಹೀಗೆ ಜನ್ಮತಾಳಿತು..
ನೀವೇ ಏಕೆ ಬ್ಯಾಂಕ್‌ ಸ್ಥಾಪಿಸಬಾರದು?

ದಿ| ವೆಂಕಟರಮಣ ಪೈ ಅವರು ಚಿಕ್ಕಂದಿನಲ್ಲೇ ಕಲಿಯುವಿಕೆಯಲ್ಲಿ ಮುಂದು ಮತ್ತು ಕಾಶೀಮಠ ಸಂಸ್ಥಾನದ ಸನಿಹದಲ್ಲೇ ಇದ್ದು ಗುರುಗಳ ಪ್ರೀತಿಪಾತ್ರರು. ಅಂದಿನ ಶ್ರೀ ಮಠದ ಪೀಠಾಧಿಪತಿ ಶ್ರೀ ಭುವನೇಂದ್ರ ತೀರ್ಥರು ವೆಂಕಟರಮಣ ಪೈ ಅವರಿಗೆ ವಕೀಲಿ ಕಲಿಯಲು ಆದೇಶಿಸಿ ಅನುಗ್ರಹಿಸಿದ್ದರು. ಶ್ರೀ ಗುರುಗಳ ಅಮೃತವಾಣಿಯಂತೆ ಅವರು ಖ್ಯಾತ ವಕೀಲರೂ ಆದರು. ಇದೀಗ ವೆಂಕಟರಮಣ ಪೈ ಅವರು ಅಸ್ವಸ್ಥರಾಗಿರುವುದನ್ನು ತಿಳಿದ ಮಠದ ನಂತರದ ವರದೇಂದ್ರ ತೀರ್ಥರು ಸುಬ್ರಾಯ ಪೈಗಳಲ್ಲಿ ಕಳೆದು ಹೋದ ಹಣದ ಚಿಂತೆ ಬಿಟ್ಟು ನೀವೇ ಏಕೆ ಒಂದು ಬ್ಯಾಂಕ್‌ ಸ್ಥಾಪನೆ ಮಾಡಬಾರದು ಅನ್ನುವ ಪ್ರಸ್ತಾವನೆ ಇರಿಸಿದರು. ಇದುವೇ ಮುಂದೆ ಕೆನರಾ ಬ್ಯಾಂಕ್‌ ಸ್ಥಾಪನೆಗೆ ಮೂಲವಾಯಿತು. ಶ್ರೀಗಳು ನೀಡಿದ ಅಪ್ಪಣೆ ದೊರೆತ ಮಾಹಿತಿಯನ್ನು ಸುಬ್ರಾಯ ಪೈ ಅವರು ಕಾಸರಗೋಡಿನ ಬಂಗ್ಲೆಯಲ್ಲಿ ವಾಸ್ತವ್ಯವಿದ್ದ ಸಹೋದರ ವೆಂಕಟರಮಣ ಪೈ ಅವರಲ್ಲಿ ಪ್ರಸ್ತಾವಿಸಿದರು. ವಕೀಲರಾದ ವೆಂಕಟರಮಣ ಪೈ ಅವರು ಈ ಬಗ್ಗೆ ಕೂಲಂಕಷವಾಗಿ ಚರ್ಚೆಯನ್ನೂ ಸುಬ್ರಾಯ ಪೈ ಅವರಲ್ಲಿ ನಡೆಸಿ ಬ್ಯಾಂಕ್‌ ತೆರೆಯುವ ನಿರ್ಧಾರಕ್ಕೆ ಬಂದೇ ಬಿಟ್ಟರು. ಹೀಗೆ ಕಾಸರಗೋಡಿನ ಬಂಗ್ಲೆಯೊಂದು ದೇಶದ ಆರ್ಥಿಕ ರಂಗದ ಭದ್ರ ಬುನಾದಿಗೆ ನಾಂದಿ ಹಾಡಿತು.

ಚಿತ್ರ-ಬರಹ: 
ರಾಮದಾಸ್‌ ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next