ಬೆಂಗಳೂರು: ಪ್ರಸಕ್ತ ವಿತ್ತೀಯ ವರ್ಷದ ಎರಡನೇ ತ್ತೈಮಾಸಿಕದಲ್ಲಿ ಕೆನರಾ ಬ್ಯಾಂಕ್‌ನ ಲಾಭ ಶೇ. 43ರಷ್ಟು ಜಿಗಿದಿದ್ದು, 3,606 ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದು ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಸತ್ಯನಾರಾಯಣ ರಾಜು ತಿಳಿಸಿದ್ದಾರೆ.
ಗುರುವಾರ ನಡೆದ ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆನರಾ ಬ್ಯಾಂಕ್ ಕಾರ್ಯಾಚರಣೆ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇ.10.30ರಷ್ಟು ಬೆಳವಣಿಗೆ ಕಂಡು ಬಂದಿದೆ. ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇ.42.81ಕ್ಕೆ ಏರಿಕೆಯಾಗಿದೆ. ಜಾಗತಿಕ ವ್ಯವಹಾರದಲ್ಲಿ ವರ್ಷದಿಂದ ವರ್ಷಕ್ಕೆ ಶೇ. 10.12 ಬೆಳವಣಿಗೆ ಗಮನಿಸಬಹುದು ಎಂದು ತಿಳಿಸಿದರು.
ಸೆಪ್ಟಂಬರ್ 2022, 2023ರ ಹೋಲಿಕೆ
ಜಾಗತಿಕ ವ್ಯವಹಾರದಲ್ಲಿ ಶೇ.10.12ರಷ್ಟು ಬೆಳವಣಿಗೆಯೊಂದಿಗೆ 21,56,181 ಕೋಟಿ ತಲುಪಿದೆ. ಜಾಗತಿಕ ಮುಂಗಡದಲ್ಲಿ ಶೇ.12.11ರಷ್ಟು ಹೆಚ್ಚಳವಾಗಿದ್ದು, 9,23,966 ಕೋಟಿ ತಲುಪಿದೆ. ಸೆಪ್ಟೆಂಬರ್ 2022ರಲ್ಲಿ ಇದ್ದ 2,525 ಕೋಟಿ ನಿವ್ವಳ ಲಾಭವು 2023ರ ಸೆಪ್ಟೆಂಬರ್‌ಗೆ 3,606 ಕೋಟಿಗೆ ಜಿಗಿದಿದೆ. ಕಾರ್ಯಾಚರಣೆ ಲಾಭ ಶೇ.10.30ರಷ್ಟು ಬೆಳವಣಿಗೆಯೊಂದಿಗೆ 7,616 ಕೋಟಿ ತಲುಪಿದೆ. ನಿವ್ವಳ ಬಡ್ಡಿ ಆದಾಯದಲ್ಲಿ ಶೇ.19.76ರಷ್ಟು ಬೆಳವಣಿಗೆಯೊಂದಿಗೆ 8,903 ಕೋಟಿಗೆ ಹೋಗಿದೆ. ನಿವ್ವಳ ಬಡ್ಡಿ ಅಂತರ (ನಿಮ್) ಅನುಪಾತ 19 ಬಿಪಿಎಸ್ ರಷ್ಟು ಬೆಳವಣಿಗೆಯೊಂದಿಗೆ ಶೇ.3.02 ಆಗಿರುತ್ತದೆ. ವೆಚ್ಚ-ಆದಾಯದ ಅನುಪಾತ 53 ಬಿಪಿಎಸ್‌ರಷ್ಟು ಇಳಿಕೆಯೊಂದಿಗೆ ಶೇ.43.68 ಆಗಿರುತ್ತದೆ. ರಿಟೇಲ್-ಕೃಷಿ-ಎಂಎಸ್‌ಎಂಇ ಕ್ಷೇತ್ರಗಳಿಗೆ ನೀಡಲಾದ ಸಾಲಗಳಲ್ಲಿ ಶೇ.13.63ರಷ್ಟು ಬೆಳವಣಿಗೆಯೊಂದಿಗೆ 5,16,949 ಕೋಟಿ ಆಗಿರುತ್ತದೆ. ಒಟ್ಟಾರೆ ಮುಂಗಡಗಳ ಶೇ.56 ರಷ್ಟು ಆಗಿರುತ್ತದೆ. ರಿಟೇಲ್ ಸಾಲಗಳಲ್ಲಿ ಶೇ.10.56, ಗೃಹ ಸಾಲಗಳಲ್ಲಿ ಶೇ.12.32, ಶಿಕ್ಷಣ ಸಾಲದಲ್ಲಿ ಶೇ.14.68, ವಾಹನ ಸಾಲದಲ್ಲಿ ಶೇ.9.29ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ವಿವರಿಸಿದರು.
ಶಾಖೆಗಳು ಹಾಗೂ ಎಟಿಎಮ್‌ಗಳು
ಸೆ.30ಕ್ಕೆ ಒಟ್ಟು 9,518 ದೇಶೀಯ ಶಾಖೆಗಳನ್ನು ಕೆನರಾ ಬ್ಯಾಂಕ್ ಹೊಂದಿದೆ. ಇವುಗಳಲ್ಲಿ 3,059 ಗ್ರಾಮೀಣ ಪ್ರದೇಶ, 2,717 ಅರೆನಗರ ಪ್ರದೇಶ, 1,895 ನಗರ ಪ್ರದೇಶ ಮತ್ತು 1,847 ಮಹಾ ನಗರ ಪ್ರದೇಶಗಳಲ್ಲಿ ಇವೆ. ಒಟ್ಟು 10,553 ಎಟಿಎಂ ಹೊಂದಿದೆ. ಲಂಡನ್, ದುಬಾೖ, ನ್ಯೂಯಾರ್ಕ್ ಮತ್ತು ಗಿಫ್ಟ್ಸಿಟಿ, ಗಾಂಧಿನಗರಗಳಲ್ಲಿ 4 ಅಂತಾರಾಷ್ಟ್ರೀಯ ಶಾಖೆ ಹೊಂದಿದೆ.