ಬೆಂಗಳೂರು: ಸಾರ್ವಜನಿಕ ವಲಯದ ಪ್ರತಿಷ್ಠಿತ ಕೆನರಾ ಬ್ಯಾಂಕ್ 2018-19ನೇ ಸಾಲಿನ ವಿತ್ತ ವರ್ಷದ ನಾಲ್ಕನೇ ತ್ತೈಮಾಸಿಕದ ಹಣಕಾಸು ವರದಿಯಲ್ಲಿ 347.02 ಕೋಟಿ ರೂ.ನಿವ್ವಳ ಲಾಭ ಗಳಿಸಿ, ಉತ್ತಮ ಸ್ಥಿತಿಯನ್ನು ಕಾಯ್ದುಕೊಂಡಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ-ಸಿಇಒ ಆರ್.ಎ.ಶಂಕರನಾರಾಯಣನ್ ತಿಳಿಸಿದ್ದಾರೆ.
ಶುಕ್ರವಾರ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ತ್ತೈಮಾಸಿಕಕ್ಕೆ ಹೋಲಿಸಿದ್ದಲ್ಲಿ 29.50 ಕೋಟಿ ರೂ.ಅಧಿಕ ಲಾಭ ಗಳಿಸಿರುವ ಬ್ಯಾಂಕ್, ಪ್ರತಿ ತ್ತೈಮಾಸಿಕದಲ್ಲೂ ಲಾಭಾಂಶ ಹೆಚ್ಚಿಸಿಕೊಳ್ಳುತ್ತಾ ಪ್ರಗತಿಯತ್ತ ಸಾಗಿದೆ. 2018-19ನೇ ಸಾಲಿನ ವಿತ್ತ ವರ್ಷದ ಅಂತ್ಯದಲ್ಲಿ ಕಾರ್ಯ ನಿರ್ವಹಣಾ ಲಾಭ 9548.24 ಕೋಟಿ ರೂ.ಇದ್ದದ್ದು, ಮಾರ್ಚ್ ಅಂತ್ಯಕ್ಕೆ ಶೇ.10.9 ರಷ್ಟು ಹೆಚ್ಚಳಗೊಂಡು 10,590 ಕೋಟಿ ರೂ.ಗೆ ತಲುಪಿರುವುದೆ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಇದೇ ರೀತಿ, ಬಡ್ಡಿ ಆದಾಯದಲ್ಲೂ ಹೆಚ್ಚಳವಾಗಿದ್ದು, 41,252 ಕೋಟಿ ರೂ.ಗಳಿಂದ 46,810 ಕೋಟಿ ರೂ.ಗಳಿಗೆ ತಲುಪಿದ್ದು ಗಮನಾರ್ಹ ಅಂಶ. ಬ್ಯಾಂಕಿನ ಠೇವಣಿಯಲ್ಲಿ ಶೇ.14.15 ರಷ್ಟು ಏರಿಕೆಯಾಗಿ 5,99,033 ಕೋಟಿ ರೂ.ಗಳಿಗೆ ತಲುಪಿದ್ದಲ್ಲದೆ, 4,44,216 ಕೋಟಿ ರೂ.ಗಳ ಸಾಲ ನೀಡುವ ಮೂಲಕ ಈ ವಿಭಾಗದಲ್ಲಿ ಶೇ.10.82 ರಷ್ಟು ಹೆಚ್ಚಳ ಮಾಡಿಕೊಂಡಿದೆ.
ಒಟ್ಟಾರೆ, ಜಾಗತಿಕ ವಹಿವಾಟು ಸೇರಿದಂತೆ 10,43,249 ಕೋಟಿ ರೂ.ಗಳ ವಹಿವಾಟು ನಡೆಸುವುದರೊಂದಿಗೆ ದೇಶದ ಪ್ರಮುಖ ಬ್ಯಾಂಕಗಳಲ್ಲೊಂದು ಎಂಬುದನ್ನು ರುಜುವಾತುಪಡಿಸಿದೆ. 4ನೇ ತ್ತೈಮಾಸಿಕದ ಅಂತ್ಯದ ಅನುತ್ಪಾದಕ ಆಸ್ತಿ (ಎನ್‌ಪಿಎ)ಯ ಪ್ರಮಾಣ ತೃಪ್ತಿದಾಯಕವಾಗಿದ್ದು, ಮಾ.31ರ ಲೆಕ್ಕಾಚಾರದಲ್ಲಿ ನಿವ್ವಳ ಎನ್‌ಪಿಎ ಶೇ.7.48 ರಿಂದ ಶೇ.5.37ಕ್ಕೆ ಇಳಿಕೆಯಾಗಿದೆ. ಸಿಆರ್‌ಎಆರ್ (ಬೆಸೆಲ್-3) ಶೇ.11.90 ರಷ್ಟಿದ್ದಲ್ಲದೆ, ಸಿಡಿ (ರಿಟರ್ನ್ ಆನ್ ಅಸೆಟ್ಸ್) ಪ್ರಮಾಣ ಪ್ರತಿಶತ 74.16 ರಷ್ಟಿದೆ ಎಂದರು.
ಕೆನರಾ ಬ್ಯಾಂಕ್ ಸದಾ ಎಂಎಸ್‌ಎಂಇ ಮತ್ತು ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು, ಇದನ್ನು ಮುಂದಿನ ದಿನಗಳಲ್ಲೂ ಮುಂದುವರಿಸಲಿದ್ದೇವೆ. ಇದರೊಟ್ಟಿಗೆ ರಿಟೈಲ್ ಹಾಗೂ ಕಾರ್ಪೋರೇಟ್ ಕ್ಷೇತ್ರದತ್ತವೂ ಗಮನ ಹರಿಸಲಿರುವುದು ಬ್ಯಾಂಕಿನ ಬೆಳವಣಿಗೆಗೆ ಕಾರಣವಾಗಿದೆ ಎಂದರು.