Advertisement

ಕೆನರಾ ಬ್ಯಾಂಕ್‌ ನೌಕರರಿಗೆ ಬಿಡಿಎ ಮನೆ?

12:11 PM Sep 05, 2018 | |

ಬೆಂಗಳೂರು: ನಗರದಲ್ಲಿನ ಜಾಗದ ಕೊರತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ವರದಾನವಾಗಿದೆ. ಈ ಹಿಂದೆ ಪೊಲೀಸ್‌ ಇಲಾಖೆ ತನ್ನ ಉದ್ಯೋಗಿಗಳಿಗಾಗಿ ಬಿಡಿಎಯಿಂದ ಫ್ಲ್ಯಾಟ್‌ ಖರೀದಿಗೆ ಮುಂದಾಗಿತ್ತು. ಇದೀಗ ಅದೇ ಹಾದಿಯಲ್ಲಿ ಸಾಗಿರುವ ಕೆನರಾ ಬ್ಯಾಂಕ್‌, ತನ್ನ ನೌಕರರಿಗಾಗಿ ಫ್ಲ್ಯಾಟ್‌ ಖರೀದಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೊರೆ ಹೋಗಿದೆ. ಹೀಗಾಗಿ ಬ್ಯಾಂಕಿಂಗ್‌ ಕ್ಷೇತ್ರವನ್ನು ಕೂಡ ತನ್ನತ್ತ ಸೆಳೆಯುವಲ್ಲಿ ಬಿಡಿಎ ಸಫ‌ಲವಾಗಿದೆ.

Advertisement

ಬ್ಯಾಂಕ್‌ ವಲಯಗಳು ಈ ಹಿಂದೆ ಉದ್ಯೋಗಿಗಳ ವಸತಿಗಾಗಿ ತಾವೇ ವಸತಿ ಸಮುತ್ಛಯಗಳ ನಿರ್ಮಾಣಕ್ಕೆ ಮುಂದಾಗುತ್ತಿದ್ದವು. ಆದರೆ ಈಗ ಸನ್ನಿವೇಶ ಬದಲಾಗಿದೆ. ರಿಯಲ್‌ ಎಸ್ಟೇಟ್‌ ವಲಯ ಸಾಕಷ್ಟು ವ್ಯಾಪಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪ್ರದೇಶ ವ್ಯಾಪ್ತಿಯಲ್ಲಿ ಭೂ ಸಮಸ್ಯೆ ಎದುರಾಗಿದೆ.

ಇದರ ಜತೆಗೆ ಜಾಗದ ಬೆಲೆ ಕೂಡ ದಿನೇ ದಿನೆ ಗನಗನಕ್ಕೇರುತ್ತಿದೆ. ಅಲ್ಲದೆ ಕಟ್ಟಡ ಸಾಮಗ್ರಿಗಳ ವೆಚ್ಚ, ನಿರ್ಮಾಣ ಕಾರ್ಮಿಕರ ಕೂಲಿ ಸೇರಿದಂತೆ ಇನ್ನಿತರ ವಸ್ತುಗಳ ಬೆಲೆ ಕೂಡ ದುಪ್ಪಟ್ಟಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಹಾಗೂ ಇದರಿಂದ ಹೊರಬರಲು ಬ್ಯಾಂಕಿಂಗ್‌ವಲಯ ಕೂಡ, ತನ್ನ ಉದ್ಯೋಗಿಗಳ ವಸತಿಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೊರೆ ಹೋಗುತ್ತಿದೆ.

150 ಫ್ಲ್ಯಾಟ್‌ ಖರೀದಿ ಸಾಧ್ಯತೆ: ಬ್ಯಾಂಕಿಗ್‌ ವಲಯದಲ್ಲಿ ಹೆಸರು ಮಾಡಿರುವ ಕೆನರಾ ಬ್ಯಾಂಕ್‌ ತನ್ನ ಉದ್ಯೋಗಿಗಳಿಗಾಗಿ 150 ಫ್ಲ್ಯಾಟ್‌ಗಳನ್ನು ಬಿಡಿಎಯಿಂದ ಖರೀದಿಸುವ ಆಲೋಚನೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಗಳು ಈಗಾಗಲೇ ಪ್ರಾಧಿಕಾರಕ್ಕೆ ಪತ್ರ ಬರೆದಿದು,ª ಖರೀದಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಅಲ್ಲದೆ, ಒಂದೇ ಕಡೆ ಫ್ಲ್ಯಾಟ್‌ ನೀಡುವಂತೆ ಹಿರಿಯ ಅಧಿಕಾರಿಗಳು ಮನವಿ ಮಾಡಿದ್ದಾರೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ. ಮೈಸೂರು ರಸ್ತೆ ಸಮೀಪದ ವಳಗೇರಹಳ್ಳಿಯಲ್ಲಿ ಬಿಡಿಎ ನಿರ್ಮಿಸಿರುವ ಫ್ಲ್ಯಾಟ್‌ಗಳಿವೆ. ಸುಮಾರು 360 ವಸತಿ ಫ್ಲ್ಯಾಟ್‌ಗಳಲ್ಲಿ ಈಗಾಗಲೇ 50 ಫ್ಲ್ಯಾಟ್‌ಗಳು ಖರೀದಿಯಾಗಿವೆ. ಇನ್ನುಳಿದ 310ರಲ್ಲಿ 150 ಫ್ಲ್ಯಾಟ್‌ಗಳನ್ನು ಕೆನರಾ ಬ್ಯಾಂಕ್‌ ಉದ್ಯೋಗಿಗಳಿಗೆ ನೀಡುವ ಆಯ್ಕೆ ಕೂಡ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಂದಿದೆ.

Advertisement

ಮೆಟ್ರೋಗೆ ಸಮೀಪ: ಮೈಸೂರು ರಸ್ತೆ ಆರ್‌.ವಿ.ಎಂಜಿನಿಯರಿಂಗ್‌ ಕಾಲೇಜು ಸಮೀಪ ವಳಗೇರಹಳ್ಳಿ ಇದೆ. ಜ್ಞಾನಭಾರತಿ ಗೇಟ್‌ ಇಲ್ಲಿಗೆ ಒಂದು ಕಿ.ಮೀ ದೂರದಲ್ಲಿದೆ. ಜತೆಗೆ ಮೆಟ್ರೋ ನಿಲ್ದಾಣಕ್ಕೂ ಸಮೀಪವಾಗಿದೆ. ಈ ಎಲ್ಲ ಅಂಶಗಳನ್ನು ಮನಗಂಡು ಕೆನರಾ ಬ್ಯಾಂಕ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಫ್ಲ್ಯಾಟ್‌ ಖರೀದಿಗೆ ಚಿಂತನೆ ನಡೆಸಿದೆ.

ಸಭೆಯಲ್ಲಿ ಅಂತಿಮ ತೀರ್ಮಾನ: ಕೆನರಾ ಬ್ಯಾಂಕ್‌ಗೆ ಫ್ಲ್ಯಾಟ್‌ ನೀಡಬೇಕೆ, ಬೇಡವೇ ಎಂಬುವುದು ಬಿಡಿಎ ಮಂಡಳಿ ಸಭೆಯಲ್ಲಿ ಚರ್ಚೆಯಾಗಲಿದೆ. ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಸಮ್ಮುಖದಲ್ಲಿ ಸದ್ಯದಲ್ಲೇ ಮಂಡಳಿ ಸಭೆ ನಡೆಯಲಿದ್ದು, ಇಲ್ಲಿ ಎಲ್ಲವೂ ಅಂತಿಮಗೊಳ್ಳಲಿದೆ.

ಕೆನರಾ ಬ್ಯಾಂಕ್‌ ಕೂಡ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಹಿನ್ನೆಲೆಯಲ್ಲಿ ಫ್ಲ್ಯಾಟ್‌ ನೀಡುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಮಂಡಳಿ ಇದಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದರೆ ಸಾರ್ವಜನಿಕರಿಗೆ ನೀಡಿರುವ ಬೆಲೆಯಲ್ಲೇ ಕೆನರಾ ಬ್ಯಾಂಕ್‌ ಸಿಬ್ಬಂದಿಗೂ ಫ್ಲ್ಯಾಟ್‌ಗಳನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ಲ್ಯಾಟ್‌ ಖರೀದಿ ಸಂಬಂಧ ಕೆನರಾ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಈಗಾಗಲೇ ಬಿಡಿಎಗೆ ಪತ್ರ ಬರೆದಿದ್ದಾರೆ. ಸದ್ಯದಲ್ಲೇ ಮಂಡಳಿ ಸಭೆ ನಡೆಯಲಿದ್ದು, ಅಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
-ರಾಕೇಶ್‌ ಸಿಂಗ್‌, ಬಿಡಿಎ ಆಯುಕ್ತರು

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next