Advertisement

ಎಲ್ಲೇ ಇದ್ದರೂ ಕನ್ನಡವೇ ಜೀವ; ಕೆನಡಾದಲ್ಲಿ ಕನ್ನಡ ಕಹಳೆ ಮೊಳಗಿಸಿದ ಚಂದ್ರ ಆರ್ಯ ಅಂತರಂಗ

09:52 AM May 21, 2022 | Team Udayavani |

ಬೆಂಗಳೂರು: “ಎಲ್ಲಾ ದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’ - ಹೀಗೆ ಕುವೆಂಪು ಗೀತೆಯನ್ನು ಹೇಳುತ್ತ ಕೆನಡಾ ಸಂಸತ್ತಿನಲ್ಲಿ ಎಲ್ಲರೂ ಅಚ್ಚರಿ ಪಡುವಂತೆ ಕನ್ನಡದಲ್ಲಿ ಭಾಷಣ ಮಾಡಿದ ಸಂಸದ ಚಂದ್ರ ಆರ್ಯ ಈಗ ಕನ್ನಡಿಗರ ನೆಚ್ಚಿನ ಹೀರೋ. “ಉದಯವಾಣಿ’ಯ ಜತೆಗಿನ ವಿಶೇಷ ಸಂದರ್ಶನದಲ್ಲಿ ಚಂದ್ರ ಆರ್ಯ ಅವರು ಮಾತೃಭಾಷೆಯ ಬಗೆಗಿನ ತಮ್ಮ ಅಭಿಮಾನವನ್ನು ತೆರೆದಿಟ್ಟಿದ್ದಾರೆ.

Advertisement

ದೂರದ ನೆಲದಲ್ಲಿ ಕನ್ನಡ ಪ್ರೀತಿ ತೋರಿದ ನಿಮ್ಮ ಅಭಿಮಾನಕ್ಕೆ ಇಡೀ ನಾಡು ತಲೆದೂಗಿದೆ. ಕೆನಡಾ ಸಂಸತ್ತಿ ನಲ್ಲಿ ಕನ್ನಡ ಕಹಳೆ ಮೊಳಗಿಸಲು ನಿಮಗೆ ಪ್ರೇರಣೆ ಏನು?
ನಾನು ಯಾವುದೇ ದೇಶಕ್ಕೆ ಕಾಲಿಟ್ಟರೂ ಅಲ್ಲಿ ಕನ್ನಡಿಗರನ್ನು, ಕನ್ನಡ ಸಂಘಟನೆಗಳನ್ನು ಹುಡುಕಿ ಹೋಗು ತ್ತಿದ್ದೆ. ಒಮಾನ್‌ನಲ್ಲಿ ಇದ್ದಾಗಲೂ ಅದನ್ನೇ ಮಾಡಿದ್ದೆ. ಕೆನಡಾದ ರಾಜ ಧಾನಿ ಒಟ್ಟಾವಾಗೆ ಬಂದಾಗಲೂ ಗೂಗಲ್‌ನಲ್ಲಿ ಕನ್ನಡ ಸಂಘಟನೆಗಳನ್ನು ಹುಡುಕಿ, ಅವರಿಗೆ ಫೋನ್‌ ಮಾಡಿ, ಕನ್ನಡದ ಚಟುವಟಿಕೆಗಳಲ್ಲಿ ಭಾಗಿಯಾದೆ. ಸಂಸತ್ತಿನಲ್ಲಿ ಕನ್ನಡದಲ್ಲಿ ಭಾಷಣ ಮಾಡುವ ಮುನ್ನ ಸ್ಪೀಕರ್‌ ಬಳಿ ಹೀಗೊಂದು ಆಲೋಚನೆಯನ್ನು ಮಂಡಿಸಿದ್ದೆ. ಅವರು ಖುಷಿಪಟ್ಟು ಒಪ್ಪಿಗೆ ನೀಡಿದರು.

ನಿಮ್ಮ ನಿತ್ಯದ ಬದುಕಿನಲ್ಲಿ ಕನ್ನಡ ಹೇಗೆ ಹಾಸುಹೊಕ್ಕಾಗಿದೆ?
ಒಟ್ಟಾವಾದಲ್ಲಿ ಕನ್ನಡ ಮಾತಾಡುವ ಕುಟುಂಬಗಳು ಹೆಚ್ಚೆಂದರೆ 150 ಸಿಗಬಹುದೇನೋ. ಉಳಿದಂತೆ ನಾನು ನನ್ನ ಹೆಂಡತಿ ಜತೆಗೆ ಕನ್ನಡ ಮಾತಾಡಬೇಕಷ್ಟೆ! ಪ್ರತೀ ವಾರ ಕನ್ನಡ ಭಾಷೆಯ ಕುರಿತಾಗಿ ಏನಾದರೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ನಾವು ಕನ್ನಡ ಪ್ರೀತಿಯನ್ನು ಜೀವಂತ ವಾಗಿರಿಸಿದ್ದೇವೆ.

ಮಾತೃಭಾಷೆಯಿಂದ ಎಷ್ಟರ ಮಟ್ಟಿಗೆ ವಂಚಿತನಾಗಿದ್ದೀರಿ ಅನ್ನಿಸುತ್ತಿದೆ?
ನನಗೆ ಆರಂಭದಿಂದಲೂ ಕನ್ನಡ ಸಾಹಿತ್ಯ ಓದುವ ಮಹದಾಸೆ ಇತ್ತು. ಆದರೆ ಶಿಕ್ಷಣದ ದಿನಗಳಲ್ಲಿ ಭಾಷೆಯನ್ನು ಕಲಿಯಲು ಸಾಧ್ಯವೇ ಆಗಲಿಲ್ಲ. ಸಂಸತ್ತಿನಲ್ಲಿ ಕುವೆಂಪು ಕವಿತೆ ವಾಚಿಸಿದೆ ಬಿಟ್ಟರೆ, ಆ ಕವಿಯ ಬಗ್ಗೆ ಹೆಚ್ಚು ನಾನು ಓದಿಕೊಂಡಿಲ್ಲ ಎಂಬ ಕೊರಗಿದೆ. ಆದರೂ ಕುವೆಂಪು ನನ್ನ ಇಷ್ಟದ ಕವಿ. ಕನ್ನಡವನ್ನು ನನ್ನೊಳಗೆ ಜೀವಂತವಾಗಿಡಲು ಸದಾ ಕಾರ್ಯೋ ನ್ಮುಖನಾಗಿದ್ದೇನೆ. 3-4 ವರ್ಷಗಳ ಹಿಂದೆ “ತಿಥಿ’ ಸಿನೆಮಾ ನೋಡಿದ್ದಾಗ, ಅದರಲ್ಲಿ ವ್ಯಕ್ತವಾದ ತುಮಕೂರು ಭಾಗದ ಭಾಷೆಯ ಸೊಗಡು ಬಹಳ ಇಷ್ಟವಾಗಿತ್ತು. ಇಡ್ಲಿ, ದೋಸೆ, ಅವಲಕ್ಕಿ- ಹೀಗೆ ಕರುನಾಡಿನ ತಿನಿಸುಗಳು ನಮ್ಮ ಮನೆಯಲ್ಲಿ ತಪ್ಪುವುದೇ ಇಲ್ಲ.

ಶಿರಾದ ಪುಟ್ಟ ಹಳ್ಳಿಯಿಂದ ಕೆನಡಾ ತನಕದ ನಿಮ್ಮ ಪಯಣದ ಬಗ್ಗೆ ಹೇಳಿ.
ಬಳ್ಳಾರಿ, ಚಿತ್ರದುರ್ಗ, ರಾಮನಗರ ಗಳಲ್ಲಿ ಶಿಕ್ಷಣ ಮುಗಿಸಿದೆ. ಧಾರವಾಡ ದಲ್ಲಿ ಎಂಬಿಎ ಪೂರೈಸಿದೆ. ಕರ್ನಾಟಕ ರಾಜ್ಯ ಸರಕಾರದ ಹಣಕಾಸು ಸಂಸ್ಥೆಗಳಲ್ಲಿ ಹುದ್ದೆಗಳನ್ನು ನಿರ್ವಹಿಸಿ, ವಿವಿಧ ದೇಶಗಳಲ್ಲಿ ಕೆಲಸ ಮಾಡಿ, ಕೆಲವು ವರ್ಷಗಳ ಹಿಂದೆ ಕೆನಡಾದ ಒಟ್ಟಾವಾಗೆ ಬಂದು ನೆಲೆ ನಿಂತೆ. ಇಲ್ಲಿ ಇನ್ವೆಸ್ಟ್‌ ಒಟ್ಟಾವಾದ ಮಂಡಳಿಯಲ್ಲಿ ಸೇವೆ ಸಲ್ಲಿಸಿ, ಮಧ್ಯಮ ವರ್ಗದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇನೆ.

Advertisement

ರಾಜಕೀಯ ಸೇರಿದ್ದು ಹೇಗೆ?
ರಾಜಕೀಯ ಸೇರುವ ಮೊದಲು ಇಲ್ಲಿ ನಾನು ಸಮಾಜಸೇವಕನಾಗಿದ್ದೆ. ಆ ಸಂದರ್ಭದಲ್ಲಿ ಇನ್ನೊಬ್ಬರಿಗೆ ಉಪ ದೇಶಿಸುವ ಬದಲು ನಾನೇ ಆ ಕೆಲಸ ಮಾಡಿದರೆ ಹೇಗೆ ಅಂತ ಅನ್ನಿಸಿತು. ನಾನು ರಾಜಕೀಯಕ್ಕೆ ಬರಲು ಇದೇ ಮೂಲ ಕಾರಣ. ಮಧ್ಯಮ ವರ್ಗದ ಸಶಕ್ತೀಕರಣಕ್ಕೆ ನನ್ನದೇ ಕೊಡುಗೆಗಳನ್ನು ನೀಡುವ ಆಲೋಚನೆಗಳೂ ಇದ್ದವು. ಆ ಸಂದರ್ಭದಲ್ಲಿ ಇಲ್ಲಿನ ಲಿಬರಲ್‌ ಪಾರ್ಟಿಯಲ್ಲಿ ನನಗೆ ರಾಜಕೀಯ ಪ್ರವೇಶಿಸಲು ಸೂಕ್ತ ಅವಕಾಶಗಳು ಲಭಿಸಿದವು.

 

Advertisement

Udayavani is now on Telegram. Click here to join our channel and stay updated with the latest news.

Next