Advertisement

Canada Analysis: ಕೆನಡಾ ಮತ್ತೊಂದು ಪಾಕಿಸ್ತಾನವಾಗಲಿದೆ? ಖಲಿಸ್ತಾನಿ ಪರ ಟ್ರುಡೋ ಮೋಹ!

05:54 PM Oct 23, 2024 | ನಾಗೇಂದ್ರ ತ್ರಾಸಿ |

ಪಾಕಿಸ್ತಾನ ತನ್ನ ದೇಶದ ಆರ್ಥಿಕ ಭದ್ರತೆ, ಜನರ ಕಾಳಜಿಗಿಂತ ಹೆಚ್ಚಾಗಿ ಪ್ರೀತಿಸಿದ್ದು ಭಯೋತ್ಪಾದಕರನ್ನು. ಅಲ್‌ ಖೈದಾ, ಲಷ್ಕರ್‌ ಇ ತೊಯ್ಬಾದಂತಹ ಉಗ್ರ ಸಂಘಟನೆಗಳನ್ನು ಪಾಕಿಸ್ತಾನ ಬೆಂಬಲ ನೀಡುವ ಮೂಲಕ ಆ ಉಗ್ರರನ್ನು ಭಾರತದ ವಿರುದ್ಧ ಬಳಸಿಕೊಳ್ಳುತ್ತಾ ಬಂದಿದೆ. ಪಾಕಿಸ್ತಾನ ಕೇವಲ ಈ ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುತ್ತಿಲ್ಲ. ಇದರೊಂದಿಗೆ ತನ್ನ ದೇಶದ ನೆಲವನ್ನು ಉಗ್ರರಿಗೆ ಸ್ವರ್ಗವನ್ನಾಗಿ ಮಾಡಿಕೊಟ್ಟಿದೆ!

Advertisement

ಪಾಕಿಸ್ತಾನದಲ್ಲಿ ಇಂದು ಹಲವಾರು ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ. ಈ ಮೂಲಕ ಪಾಕ್‌ ತನ್ನ ದೇಶದ ಜನರ ಜೀವನವನ್ನು ಅಪಾಯಕ್ಕೆ ಸಿಲುಕಿಸಿದೆ. ಅಷ್ಟೇ ಅಲ್ಲ ಭಾರತದ ವಿರುದ್ಧ ಪ್ರಾಯೋಜಿತ ಭಯೋತ್ಪಾದನೆಯನ್ನು ಮುಂದುವರಿಸಿದೆ.

ಭಯೋತ್ಪಾದಕರನ್ನು ಪೋಷಿಸಿ, ಆಶ್ರಯ ನೀಡುವ ಮೂಲಕ ಪಾಕಿಸ್ತಾನ ಇಂದು ಹೀನಾಯ ಸ್ಥಿತಿಗೆ ತಲುಪಿದೆ. ಇದೀಗ ಕೆನಡಾದ ಪ್ರಸ್ತುತ ನಿಲುವನ್ನು ಗಮನಿಸಿದರೆ ಅದು ಕೂಡಾ ಮತ್ತೊಂದು ಪಾಕಿಸ್ತಾನವಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಹೌದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಕೂಡಾ ಚುನಾವಣ ರಾಜಕೀಯದ ಲಾಭಕ್ಕಾಗಿ ಖಲಿಸ್ತಾನಿ ಉಗ್ರರ ಪರ ವಕಾಲತ್ತು ವಹಿಸುವ ಮೂಲಕ ಪಾಕಿಸ್ತಾನದ ರೀತಿಯಲ್ಲಿ ತಪ್ಪು ಮಾಡುತ್ತಿರುವುದಾಗಿ ವಿಶ್ಲೇಷಿಸಲಾಗಿದೆ.

Advertisement

ಕೆನಡಾದಲ್ಲಿ ಟ್ರುಡೋ ಅವರ ಲಿಬರಲ್‌ ಪಕ್ಷ (Liberal Party) ಕೆನಡಾ ಮತದಾರರ ವಿಶ್ವಾಸವನ್ನು ಕಳೆದುಕೊಳ್ಳತೊಡಗಿದೆ. ಈ ಹಿನ್ನೆಲೆಯಲ್ಲಿ ಟ್ರುಡೋ ಕೆನಡಾದಲ್ಲಿರುವ ಅಂದಾಜು 7 ಲಕ್ಷ ಜನಸಂಖ್ಯೆ ಹೊಂದಿರುವ ಸಿಖ್‌ ಸಮುದಾಯವನ್ನು ಒಲೈಕೆ ಮಾಡುವಲ್ಲಿ ಮುತುವರ್ಜಿ ವಹಿಸಿರುವುದಾಗಿ ವಿಶ್ಲೇಷಿಸಲಾಗುತ್ತಿದೆ.

ಖಲಿಸ್ತಾನಿ ಪರ ಕೆನಡಾ ಪ್ರಧಾನಿ, ಭಾರತ ವಿರೋಧಿ!

ಭಾರತ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಅನ್ನು ಬಳಸಿಕೊಂಡು ಖಲಿಸ್ತಾನಿ ಪರ ಬೆಂಬಲಿಗರನ್ನು ಗುರಿಯಾಗಿಸಿ ಹತ್ಯೆ ನಡೆಸುತ್ತಿದೆ ಎಂದು ಕೆನಡಾ ಸರ್ಕಾರ ಆರೋಪಿಸಿತ್ತು. ಆದರೆ ಭಾರತದ ವಿರುದ್ಧ ಆರೋಪವನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಕೆನಡಾ ಹೇಳುವ ಮೂಲಕ ರಾಜತಾಂತ್ರಿಕ ಸಂಘರ್ಷ ಒಂದು ಹಂತಕ್ಕೆ ಬಂದು ತಲುಪಿದಂತಾಗಿದೆ.

ಕೆನಡಾ ಸರ್ಕಾರದ ಆರೋಪಕ್ಕೆ ಭಾರತದ ವಿದೇಶಾಂಗ ಸಚಿವಾಲಯ ಕಟು ಆಕ್ಷೇಪದ ಪ್ರತಿಕ್ರಿಯೆ ನೀಡಿತ್ತು. ಭಾರತ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಬಳಸಿಕೊಂಡಿದೆ ಎಂದು ಟ್ರುಡೋ ಸರ್ಕಾರ ಉಲ್ಲೇಖಿಸಿ ಆರೋಪಿಸಿದೆ. ಇದು ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ನ ಕ್ರಿಮಿ*ನಲ್ಸ್‌ ಮೇಲೆ ಕೆನಡಾ ಎಷ್ಟು ಮೃಧು ಧೋರಣೆ ಹೊಂದಿದೆ ಎಂಬುದನ್ನು ತೋರಿಸುತ್ತದೆ. ಬಿಷ್ಣೋಯಿ ಗ್ಯಾಂಗ್‌ ಸದಸ್ಯರನ್ನು ಗಡಿಪಾರು ಮಾಡುವಂತೆ ಕೋರಿ ಭಾರತ 26 ಮನವಿಯನ್ನು ಕೆನಡಾ ಸರ್ಕಾರಕ್ಕೆ ಸಲ್ಲಿಸಿದೆ. ಆದರೆ ಯಾವುದೇ ನಿರ್ಧಾರ ಈವರೆಗೂ ತೆಗೆದುಕೊಂಡಿಲ್ಲ. ಅಷ್ಟೇ ಅಲ್ಲ ಭಾರತಕ್ಕೆ ಬೇಕಾಗಿದ್ದ 29 ವಾಂಟೆಡ್‌ ಕ್ರಿಮಿನಲ್‌ ಪ್ರಕರಣಗಳ ಬಗ್ಗೆಯೂ ಮನವಿ ಮಾಡಿಕೊಂಡಿದೆ. ಆದರೆ ಕೆನಡಾ ಆ ಬಗ್ಗೆ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ.

ಖಲಿಸ್ತಾನಿಗಳ ಪರ ಕೆನಡಾ ಪ್ರೀತಿ!

ಅಚ್ಚರಿಯ ವಿಷಯ ಎಂಬಂತೆ ಖಲಿಸ್ತಾನಿ ಭಯೋತ್ಪಾದಕರಿಗೋಸ್ಕರ ಭಾರತದ ಜತೆಗಿನ ರಾಜತಾಂತ್ರಿಕ ಸಂಬಂಧವನ್ನು ತ್ಯಾಗ ಮಾಡಲು ಕೆನಡಾ ತಯಾರಾಗಿದೆ.! ಖಲಿಸ್ತಾನಿ ಭಯೋತ್ಪಾದಕರು ಕೆನಡಾದಲ್ಲಿ ಭಾರತದ ವಿರುದ್ಧ ಬೃಹತ್‌ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ದೇಶದಲ್ಲಿರುವ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಲಾಗಿದೆ. ಈ ಹಿಂದೆಯೂ ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಿತ್ತು. ಆದರೆ ಈ ಎಲ್ಲಾ ಸತ್ಯಗಳ ಹೊರತಾಗಿಯೂ ಕೆನಡಾ ಕ್ಷುಲ್ಲಕ ಲಾಭಕ್ಕಾಗಿ ಘೋಷಿತ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವುದು ವಿಪರ್ಯಾಸ ಎಂದು ಭಾರತ ದೂರಿದೆ.

ಜಸ್ಟಿನ್‌ ಟ್ರುಡೋ ವೋಟ್‌ ಬ್ಯಾಂಕ್‌ ರಾಜಕೀಯದ ನಿಲುವಿನಿಂದಾಗಿ ಭಾರತ ಕೂಡಾ ಕೆನಡಾ ರಾಜತಾಂತ್ರಿಕ ಅಧಿಕಾರಿಯನ್ನು ವಜಾಗೊಳಿಸುವ ಮೂಲಕ ತಿರುಗೇಟು ನೀಡಿತ್ತು.

ಜೀ ನ್ಯೂಸ್‌ ಗೆ ಲಭಿಸಿರುವ ಅಂಕಿಅಂಶದ ಪ್ರಕಾರ, 2021ರಲ್ಲಿ ಖಲಿಸ್ತಾನಿ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ 141 ಮಂದಿ ಕೆನಡಾದ ಆಶ್ರಯ ಕೋರಿದ್ದರು. ಅವರಲ್ಲಿ 36 ಮಂದಿಗೆ ಪ್ರವೇಶ ಕಲ್ಪಿಸಿತ್ತು. 2022ರಲ್ಲಿ ಆ ಸಂಖ್ಯೆ ಏರಿಕೆ ಕಂಡಿದ್ದು, 801 ಮಂದಿ ಖಲಿಸ್ತಾನಿ ಪರ ಬೆಂಬಲಿಗರು ಆಶ್ರಯ ಕೋರಿ ಅರ್ಜಿ ಸಲ್ಲಿಸಿದ್ದು, ಅವರಲ್ಲಿ 428 ಮಂದಿಗೆ ಅನುಮತಿ ನೀಡಿತ್ತು. 2023ರಲ್ಲಿ 613 ಅರ್ಜಿ ಸಲ್ಲಿಕೆಯಾಗಿದ್ದು, ಅವರಲ್ಲಿ 364 ಮಂದಿಗೆ ಅನುಮತಿ ನೀಡಿತ್ತು. 2024ರ ಮಾರ್ಚ್‌ ವರೆಗೆ 119 ಅರ್ಜಿ ಸಲ್ಲಿಕೆಯಾಗಿದ್ದು, ಅವರಲ್ಲಿ 79 ಮಂದಿಗೆ ಕೆನಡಾ ಆಶ್ರಯ ನೀಡಿರುವುದಾಗಿ ವಿವರಿಸಿದೆ.

ಜಸ್ಟಿನ್‌ ಟ್ರುಡೋ ಅವರು ತನ್ನ ದೇಶದಲ್ಲಿನ ಖಲಿಸ್ತಾನಿ ಭಯೋತ್ಪಾದಕರ ರಕ್ಷಣೆ ಬಗ್ಗೆ ಮಾತನಾಡುತ್ತಾರೆ. ಆದರೆ ಕೆನಡಾ ಖಲಿಸ್ತಾನಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ. ಇದು ಭಾರತದ ಭದ್ರತೆಗೆ ಅಪಾಯಕಾರಿಯಾಗಿದೆ. ಅಂಕಿ ಅಂಶದ ಮೂಲಕ ಕೆನಡಾ ಪ್ರಧಾನಿಯ ಇಬ್ಬಗೆಯ ನೀತಿ ಬಯಲಾಗಿದೆ ಎಂದು ವರದಿ ವಿವರಿಸಿದೆ.

ಟ್ರುಡೋ ಸೂಕ್ತ ಸಮಯದಲ್ಲಿ ತನ್ನ ನಿಲುವಿನಲ್ಲಿ ಬದಲಾವಣೆ ಹೊಂದಬಹುದು ಎಂದು ಕೆನಡಾ ಮತದಾರರು ವಿಶ್ವಾಸ ಹೊಂದಿರಬಹುದು ಆದರೆ ಇದೇ ಧೋರಣೆ ಮುಂದುವರಿದರೆ ಕೆನಡಾ ಕೂಡಾ ಮತ್ತೊಂದು ಪಾಕಿಸ್ತಾನವಾಗುವುದರಲ್ಲಿ ಯಾವುದೇ ಸಂದೇಶ ಇಲ್ಲ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next