Advertisement
ಬುಧವಾರದ ದ್ಘಾಟನಾ ಪಂದ್ಯದ ಟಾಸ್ ವೇಳೆ ಕೆನಡಾ ತಂಡ ಬೆಲ್ಜಿಯಂ ತಂಡಕ್ಕೆ ಕ್ರೀಡಾಧ್ವಜ (ಪೆನ್ನಂಟ್) ನೀಡುವ ಬದಲು ಒಂದು ಪತ್ರವನ್ನು ನೀಡಿತ್ತು. “ವಿಶ್ವಕಪ್ ಕೂಟದ ಸಲುವಾಗಿ ಮಕ್ಕಳು ಹಾಕಿಯಲ್ಲಿ ಮುಂದುವರಿಯಲಿ ಎಂಬ ಕಾರಣಕ್ಕೆ ಒಡಿಶಾದ ಬಲಿಗುಡದಲ್ಲಿರುವ ಅನಾಥಶ್ರಮಕ್ಕೆ ದೇಣಿಗೆ ನೀಡಿದೆ. ಈ ದೇಣಿಗೆ ಸಹಾಯದಿಂದ ಅವರ ಹಾಕಿ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇದರಿಂದ ಅಲ್ಲಿನ ಮಕ್ಕಳು ವಿಶ್ವ ಕಪ್ ಟೂರ್ನಿಯನ್ನು ವೀಕ್ಷಿಸಬಹುದು’ ಎಂದು ಇದರಲ್ಲಿ ಉಲ್ಲೇಖೀಸಲಾಗಿತ್ತು.
ಕೆನಡಾದ ಈ ಯೋಜನೆಗೆ ನೆರವಾದವರು, ಭಾರತದಲ್ಲಿ ಸರಕಾರೇತರ ಸಂಸ್ಥೆಯನ್ನು ನಡೆಸುತ್ತಿರುವ ಆ್ಯಂಡ್ರಿಯಾ ತುಮಶ್ರಿನ್. ಜರ್ಮನಿಯ ಮಾಜಿ ಹಾಕಿ ಆಟಗಾರ್ತಿಯಾಗಿರುವ ಆ್ಯಂಡ್ರಿಯಾ ಕಳೆದ 7 ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದಾರೆ. ಕೆನಡಾ ತಂಡಕ್ಕೆ ಆ್ಯಂಡ್ರಿಯಾ ಅವರ ಪರಿಚಯವಿದ್ದ ಕಾರಣ ವಿಶ್ವಕಪ್ ವೇಳೆ ಕೆನಡಾ ತಂಡಕ್ಕೆ ನೆರವಾಗಲು ಆಹ್ವಾನಿಸಲಾಗಿತ್ತು. ಭಾರತದಲ್ಲಿ ಹಾಕಿ ಆಡುತ್ತಿರುವ ಮಕ್ಕಳಿಗೆ ಏನಾದರೂ ಸಹಾಯ ಅಗತ್ಯವಿದೆಯೇ ಎಂದು ಅವರಲ್ಲಿ ಕೇಳಲಾಗಿತ್ತು. ಆಗ, ಸ್ವತಃ ಆ್ಯಂಡ್ರಿಯಾ ಅವರು ಬಲಿಗುಡದಲ್ಲಿರುವ ಅನಾಥಶ್ರಮದ ಮಕ್ಕಳ ಹಾಕಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಆ ಅನಾಥಶ್ರಮದ ಮಕ್ಕಳ ಕುರಿತು ತಿಳಿಸಿದ್ದಾರೆ. ಈ ಅನಾಥಶ್ರಮವನ್ನು “ಕ್ಯಾಟಲಿಸ್ಟ್ ಫಾರ್ ಸೋಶಿಯಲ್ ಆ್ಯಕ್ಷನ್’ ಎಂಬ ಸಂಸ್ಥೆ ನಡೆಸುತ್ತಿದೆ.