Advertisement

ಕೆನಡಾದಲ್ಲೂ ಐಪಿಎಲ್‌ ಮಾದರಿ ಟಿ20 ಲೀಗ್‌

06:15 AM Feb 17, 2018 | Team Udayavani |

ಟೊರೆಂಟೊ: ಬಹು ಆಕರ್ಷಣೀಯ ಐಪಿಎಲ್‌ನಂತೆ ಕೆನಡಾದಲ್ಲೂ ಟಿ20 ಲೀಗ್‌ ಒಂದನ್ನು ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ಕೆನಡಾದ ಟೊರೆಂಟೊ ನಗರದಲ್ಲಿ ನೆಲೆಸಿರುವ ಭಾರತ ಮೂಲದ ಉದ್ಯಮಿ ರಾಯ್‌ ಸಿಂಗ್‌ ಇಂಥದ್ದೊಂದು ಮಹತ್ವದ ಕ್ರಿಕೆಟ್‌ ಟೂರ್ನಿ ಆರಂಭಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

Advertisement

ಕ್ರಿಕೆಟ್‌ ಪಂದ್ಯಾವಳಿ ಆರಂಭಿಸುವುದರ ಬಗ್ಗೆ ನಿಖರ ಯೋಜನೆ ಹಾಕಿಕೊಂಡಿರುವ ರಾಯ್‌, ಮೂಲಭೂತ ಸೌಕರ್ಯ ಕೊರತೆ ನೀಗಿಸುವ ಸಲುವಾಗಿ ನಯಾಗಾರ ಫಾಲ್ಸ್‌ ಬಳಿ ಒಂದು ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಹೊಣೆ ಹೊತ್ತುಕೊಂಡಿದ್ದಾರೆ. ಜತೆಗೆ ಖ್ಯಾತ ರಾಷ್ಟ್ರೀಯ ಕ್ರಿಕೆಟ್‌ ಆಟಗಾರರ ಮೂಲಕ “ಕೆನಡಾ ಪ್ರೀಮಿಯರ್‌ ಲೀಗ್‌’ ಆರಂಭಿಸುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ.

ಐಪಿಎಲ್‌ ಮಾದರಿಯ ಟಿ20ಟೂರ್ನಿ ಕೆನಡದಾದ್ಯಂತ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಯನ್ನು ತರಬಲ್ಲದು ಎಂದು ನಂಬಿರುವ ಕ್ರಿಕೆಟ್‌ ಪ್ರೇಮಿ ಉದ್ಯಮಿ ರಾಯ್‌, “ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಅಮೋಘ ಯಶಸ್ಸು ಕಾಣುತ್ತಿದೆ. ಕೆನಡಾ ಮತ್ತು ಅಮೆರಿಕದಲ್ಲೂ ನಾವು ಇಂಥದ್ದೇ ಲೀಗ್‌ ಆರಂಭಿಸಲು ಸಾಧ್ಯವಿದೆ. ಆದರೆ ಸದ್ಯಕ್ಕಿರುವ ಕೊರತೆಯೆಂದರೆ ಮೂಲಭೂತ ಸೌಕರ್ಯ ಸಮಸ್ಯೆ’ ಎಂದಿದ್ದಾರೆ.

“ಈ ಕೊರತೆ ನೀಗಿಸುವ ನೆಲೆಯಲ್ಲಿ ನಾವು 153 ಎಕ್ರೆ ಜಮೀನನ್ನು ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಸಲುವಾಗಿ ಖರೀದಿಸಿದ್ದೇವೆ. ನಯಾಗರ ಜಲಪಾತಕ್ಕೆ ಎಂಟೇ ನಿಮಿಷ ದೂರದಲ್ಲಿ ದೊಡ್ಡ ಬಜೆಟ್‌ನ ಕ್ರೀಡಾಂಗಣವೊಂದು ನಿರ್ಮಾಣವಾಗುವುದರಲ್ಲಿದೆ’ ಎಂದು ಸಿಂಗ್‌ ತಿಳಿಸಿದ್ದಾರೆ.

ಉದ್ಯಮಕ್ಕೆ ವಿಪುಲ ಅವಕಾಶ
“ಪ್ರತಿ ಋತುವಿನಲ್ಲೂ 27 ಪಂದ್ಯಗಳ ಲೀಗ್‌ ನಡೆಯಲಿದೆ. 10 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಿ ಪಂದ್ಯ ನಡೆಸಲಾಗುತ್ತದೆ. ಒಬ್ಬ ಕ್ರಿಕೆಟ್‌ ಪ್ರೇಮಿಯಾಗಿ ನಾನು ಟಿ20 ಕ್ರಿಕೆಟ್‌ನಲ್ಲಿ ಉದ್ಯಮಕ್ಕೆ ವಿಪುಲ ಅವಕಾಶವಿರುವುದನ್ನು ಗಮನಿಸಿದ್ದೇನೆ. ಆದರೆ ಇದಕ್ಕೆ ಕೊಂಚ ವೆಚ್ಚ ತಗಲಬಹುದು. ಈ ಲೀಗ್‌ ಆರಂಭಿಸಿದರೆ ಕೇವಲ ಉತ್ತರ ಅಮೆರಿಕದಲ್ಲೇ ಸುಮಾರು 27 ಮಿಲಿಯನ್‌ ವೀಕ್ಷಕರು ಸಿಗಲಿದ್ದಾರೆ’ ಎಂದು ರಾಯ್‌ ವಿವರಿಸಿದ್ದಾರೆ.

Advertisement

ಕೆನಡಾ ಪ್ರೀಮಿಯರ್‌ ಲೀಗ್‌ ಪ್ರಚಾರಕ್ಕಾಗಿ ವೆಸ್ಟ್‌ ಇಂಡೀಸಿನ ಸ್ಟಾರ್‌ ಆಟಗಾರರಾದ ವಿವಿಯನ್‌ ರಿಚರ್ಡ್ಸ್‌, ರಿಚಿ ರಿಚರ್ಡ್ಸ್‌ನ್‌, ಡ್ವೇನ್‌ ಬ್ರಾವೊ ಮೊದಲಾದವರನ್ನು ಬಳಸಿಕೊಳ್ಳುವುದಾಗಿ ರಾಯ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next