ಟೊರಂಟೊ: ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ, ವಿಶ್ವದ ಹಿಂದೂಗಳೆಲ್ಲರಿಗೂ ಒಂದು ಸಂತೋಷದ ಸುದ್ದಿ ನೀಡಿದ್ದಾರೆ.
ಕೆನಡಾದಲ್ಲಿನ್ನು ನವೆಂಬರ್ ತಿಂಗಳನ್ನು, ರಾಷ್ಟ್ರೀಯ ಹಿಂದೂ ಪರಂಪರಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಗ್ಗೆ ಚಂದ್ರ ಆರ್ಯ ಮಂಡಿಸಿದ ಖಾಸಗಿ ಮಸೂದೆಯನ್ನು ಅಲ್ಲಿನ ಸರ್ಕಾರ ಮಾನ್ಯ ಮಾಡಿದೆ.
ಈ ಸುದ್ದಿಯನ್ನು ಟ್ವೀಟ್ ಮೂಲಕ ಹಂಚಿಕೊಂಡಿರುವ ತುಮಕೂರಿನ ಚಂದ್ರ ಅವರು, “ನವೆಂಬರ್ ತಿಂಗಳನ್ನು ರಾಷ್ಟ್ರೀಯ ಹಿಂದೂ ಪರಂಪರಾ ದಿನವನ್ನಾಗಿ ಆಚರಿಸುವ ಮಸೂದೆಯನ್ನು ಕೆನಡಾ ಸರ್ಕಾರ ಮಾನ್ಯ ಮಾಡಿದೆ. ಮನುಕುಲಕ್ಕೆ ಮತ್ತು ಕೆನಡಾಕ್ಕೆ ಹಿಂದೂ ಸಮುದಾಯ ನೀಡಿದ ಕೊಡುಗೆಯನ್ನು ಗುರ್ತಿಸಬೇಕೆಂಬ ದೀರ್ಘಕಾಲದ ಬೇಡಿಕೆಗೆ ಈಗ ಸಮ್ಮತಿ ಸಿಕ್ಕಿದೆ.
ಇದು ಕೆನಡಾ ಹಿಂದೂಗಳಿಗೆ ಸಮಾಜದ ಎಲ್ಲ ಆಯಾಮಗಳಲ್ಲಿ ಬೆಳೆಯಲು ಸ್ಫೂರ್ತಿಯಾಗಲಿದೆ ಎಂದು ಭಾವಿಸಿದ್ದೇನೆ’ ಎಂದಿದ್ದಾರೆ. ಕೆನಡಾದಲ್ಲಿ ಇತ್ತೀಚೆಗೆ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಯನ್ನೂ ಅವರು ವಿರೋಧಿಸಿದ್ದಾರೆ.