Advertisement

ಕೊಳಚೆ ಪ್ರದೇಶಗಳಲ್ಲಿ ಕೆನಾ ಪ್ಲಾಂಟ್‌ ಬೆಳೆಸಲು ಜಿ.ಪಂ. ಉತ್ತೇಜನ

04:10 AM Jun 13, 2018 | Karthik A |

ಉಡುಪಿ: ಮಳೆಗಾಲದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಹೆಚ್ಚಿನೆಲ್ಲ ಮನೆಗಳಲ್ಲಿ ಬಚ್ಚಲು ಮನೆಯ ಕೊಳಚೆ ನೀರು ನಿಂತು ಪರಿಸರ ಕೆಡಲು ಕಾರಣವಾಗುತ್ತದೆ. ಇದಕ್ಕಾಗಿ ಕೊಳಚೆ ನೀರನ್ನು ಹಿರಿಕೊಳ್ಳುವ ವಿಶಿಷ್ಟ ಗುಣ ಹೊಂದಿರುವ ಕೆನಾ ಗಿಡಗಳನ್ನು ಬೆಳೆಸಲು ಆಯಾಯ ಗ್ರಾ.ಪಂ.ಗಳು ಮುತುವರ್ಜಿ ವಹಿಸಿಕೊಳ್ಳಲು ಜಿ.ಪಂ. ಉತ್ತೇಜನ ಕೊಟ್ಟಿದೆ. ಈಗಾಗಲೇ ಜಿಲ್ಲಾಡಳಿತ, ಜಿ.ಪಂ. ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ (SLRM) ಯೋಜನೆಯಡಿ ದೊಡ್ಡಣಗುಡ್ಡೆಯಲ್ಲಿರುವ ತೋಟಗಾರಿಕಾ ಇಲಾಖೆ ಜಾಗದಲ್ಲಿ ಕೆನಾ ಪ್ಲಾಂಟೇಶನ್‌ ಅನ್ನು ನಿರ್ಮಿಸಿ ಕೆನಾ ಗಿಡಗಳನ್ನು ಬೆಳೆಸಲಾಗುತ್ತಿದೆ. ಈ ಗಿಡಗಳನ್ನು ಕೊಳಚೆ ನಿಲ್ಲುವ ಎಲ್ಲ ಮನೆಯವರೂ ನೆಟ್ಟು ಕೊಳಚೆ ಮುಕ್ತ ಪರಿಸರಕ್ಕೆ ಸಹಕರಿಸಬೇಕು. ಆಯಾಯ ಪಂಚಾಯತ್‌ಗಳು ಕೂಡ ಉತ್ತೇಜಿಸಬೇಕಿದೆ ಎಂದು ಜಿ.ಪಂ. ಹೇಳಿದೆ.

Advertisement

ಕೆನಾ ಗಿಡಗಳ ವೈಶಿಷ್ಟ್ಯ


ತನ್ನಷ್ಟಕ್ಕೇ ಬೆಳೆಯುತ್ತಿದ್ದ ಹಾಗೂ ಹಿಂದೆ ಹಳ್ಳಿ ಪ್ರದೇಶಗಳಲ್ಲಿ ಎಲ್ಲೆಡೆ ಕಂಡುಬರುತ್ತಿದ್ದ ಈ ಗಿಡಗಳು ಇಂದು ಅಪರೂಪದಂತಾಗಿವೆ.  ಕೆಸರು, ಮಲಿನಯುಕ್ತ ನೀರು ನಿಲ್ಲುವ ಜಾಗಗಳಲ್ಲಿ ಕೆನಾ ಗಿಡಗಳಿದ್ದರೆ ತುಂಬಾ ಪ್ರಯೋಜನಕಾರಿ. ನೀರನ್ನು ಬಹುಬೇಗನೆ ಹೀರಿಕೊಳ್ಳುತ್ತವೆೆ. ಬ್ಯಾಕ್ಟೀರಿಯಾಗಳು ಉತ್ಪಾದನೆಯಾಗದಂತೆ ತಡೆಯುತ್ತವೆ. ಒಂದು ಗಿಡ ಇದ್ದರೆ ಬೇರಿನಲ್ಲಿರುವ ಗೆಡ್ಡೆಗಳ ಮೂಲಕ ಗಿಡಗಳ ಸಂಖ್ಯೆ ದ್ವಿಗುಣಗೊಳ್ಳುತ್ತಾ ಹೋಗುತ್ತದೆ. ಒಂದು ಗಿಡ ನೆಟ್ಟರೆ ಕೆಲವೇ ಸಮಯಗಳಲ್ಲಿ ಹತ್ತಾರು ಆಗುತ್ತದೆ. ಇವುಗಳಿರುವ ಪ್ರದೇಶದಲ್ಲಿ ಸೊಳ್ಳೆಗಳು ಕೂಡ ಉತ್ಪಾದನೆಯಾಗುವುದಿಲ್ಲ. ಕಿತ್ತಳೆ ಹಳದಿ ಕೆಂಪು ಮಿಶ್ರಿತ ಅಂದವಾದ ಹೂವುಗಳನ್ನೂ ಇದು ಬಿಟ್ಟು ಪರಿಸರ ಸುಂದರವಾಗಿ ಕಾಣುವಂತೆ ಮಾಡುತ್ತದೆ.

ಶೇ. 50 ರಿಯಾಯಿತಿ
ದೊಡ್ಡಣಗುಡ್ಡೆಯಲ್ಲಿ ಕೆನಾ ಗಿಡದ ಪ್ಲಾಂಟೇಶನ್‌ ನಿರ್ಮಿಸಲಾಗಿದ್ದು, ಸಾಕಷ್ಟು ಗಿಡಗಳನ್ನು ಇಲ್ಲಿ ಬೆಳೆಸಲಾಗಿದೆ. ಮಲಿನ ಮುಕ್ತಕ್ಕೆ ಈ ಗಿಡಗಳು ಸಹಕಾರಿಯಾಗಿವೆ. ಇದಕ್ಕೆ ಹಳ್ಳಿಯಲ್ಲಿ ಕಾಬಾಳೆ ಎನ್ನುತ್ತಾರೆ. ಒಂದು ಗಿಡಕ್ಕೆ 20 ರೂ. ದರವಿದೆ. ಪರಿಸರ ದಿನಾಚರಣೆಯ ಪ್ರಯುಕ್ತ ಜಿ.ಪಂ., ಜಿಲ್ಲಾಡಳಿತದ ನಿರ್ದೇಶನದಲ್ಲಿ ಕೆಲ ದಿನಗಳವರೆಗೆ ಇದನ್ನು 10 ರೂ. ದರಕ್ಕೆ ಮಾರಾಟ ಮಾಡುತ್ತಿದ್ದೇವೆ. ಗ್ರಾ.ಪಂ. ಮಟ್ಟದಲ್ಲಿ ಉತ್ತಮ ಸ್ಪಂದನೆ ಇದೆ. ಅರಿವು ಮೂಡಿಸುವ ಕಾರ್ಯ ಹೆಚ್ಚಾಗಿ ಆಗಬೇಕಿದೆ. ಉಡುಪಿ ಸುತ್ತಮುತ್ತಲ ಕೆಲ ಗ್ರಾ.ಪಂ. ವ್ಯಾಪ್ತಿಯ ಕೊಳಚೆ ಪ್ರದೇಶದಲ್ಲಿ ಈಗಾಗಲೇ ಈ ಗಿಡವನ್ನು ನೆಡುತ್ತಿದ್ದೇವೆ ಎಂದು ಎಸ್‌ಎಲ್‌ಆರ್‌ಎಂ ಉತ್ಪನ್ನ ತಯಾರಿ ಮತ್ತು ಮಾರಾಟ ಮಳಿಗೆಯ ಭಾಸ್ಕರ್‌ ಶೆಟ್ಟಿ ತಿಳಿಸಿದ್ದಾರೆ.

ಗ್ರಾ.ಪಂ.ಗಳಿಗೆ ನಿರ್ದೇಶನ
ನಿಟ್ಟೆ, ವಂಡ್ಸೆ, ಹೆಬ್ರಿ ಮೊದಲಾದೆಡೆಗಳಲ್ಲಿರುವ SLRM ಕೇಂದ್ರಗಳಲ್ಲಿ  ಪರಿಸರ ಸ್ನೇಹಿ ಕೆನಾ ಗಿಡಗಳನ್ನು ಬೆಳೆಸಲಾಗುತ್ತಿದೆ. ಮಾರಾಟವೂ ಪ್ರಾರಂಭವಾಗಿದೆ. ಕೆಲ ಮನೆಗಳಲ್ಲಿ ಕೆನಾ ಗಿಡಗಳಿದ್ದರೂ, ಕೊಳಚೆ ನೀರನ್ನು ಹೀರಿಕೊಳ್ಳುವ ವಿಶಿಷ್ಟ ಗುಣ ಹೊಂದಿದೆ ಎನ್ನುವ ಅರಿವು ಹಲವರಿಗಿಲ್ಲ. ಗ್ರಾ.ಪಂ. ಮೂಲಕ ಕೆನಾ ಗಿಡಗಳನ್ನು ಮನೆ ಪರಿಸರ, ಮುಖ್ಯವಾಗಿ ಕಾಲನಿಗಳನ್ನು ನೆಡಲು ನಿರ್ದೇಶನ ನೀಡಲಾಗಿದೆ. ಈಗಾಗಲೇ SLRM ಕೇಂದ್ರದವರು ಪಂಚಾಯತ್‌ಗಳ ಮೂಲಕ ಕೆಸರು ನಿಲ್ಲುವ ಪ್ರದೇಶಗಳಲ್ಲಿ ಕೆನಾ ಗಿಡ ನೆಡುವ ಕಾರ್ಯ ನಡೆಸುತ್ತಿದ್ದಾರೆ. ಈಗಷ್ಟೇ ಚಾಲನೆ ಕೊಡಲಾಗಿದೆ. ಜನರು ಪಾತ್ರೆ ತೊಳೆದ ನೀರು, ಬಚ್ಚಲು ಮನೆ ನೀರು ನಿಲ್ಲುವಲ್ಲಿ ಕೆನಾ ಗಿಡಗಳನ್ನು ನೆಟ್ಟರೆ ಆ ಭಾಗದ ಜಲಮೂಲವೂ ಶುದ್ಧವಾಗುತ್ತದೆ. ಬಾವಿಗಳಿಗೆ ಕೊಳಚೆ ನೀರು ಸೇರುವುದನ್ನು ತಪ್ಪಿಸಬಹುದು.
– ಶ್ರೀನಿವಾಸ ರಾವ್‌, ಜಿ.ಪಂ. ಮುಖ್ಯ ಯೋಜನಾಧಿಕಾರಿ

ಉತ್ತೇಜನ ಕೊಡುತ್ತೇವೆ
ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆ ಜಾಗದಲ್ಲಿಯೇ ಕೆನಾ ಪ್ಲಾಂಟ್‌ ಬೆಳೆಸಲು ಇಲಾಖೆಯಿಂದ ಉತ್ತೇಜನ ಕೊಡಲಾಗಿದೆ. ಪ್ರಾಥಮಿಕ ಅನುದಾನ ಒದಗಿಸಲಾಗಿದ್ದು, ಸುತ್ತ ಬೇಲಿ ಹಾಕಿ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. SLRMನವರು ನಿರ್ವಹಣೆ ಮಾಡುತ್ತಿದ್ದು, ಅವರೇ ಮಾರಾಟ ಮಾಡುತ್ತಾರೆ.
– ನಿದೀಶ್‌, ತೋಟಗಾರಿಕಾ ಇಲಾಖೆ ತಾಂತ್ರಿಕ ಅಧಿಕಾರಿ

Advertisement

— ಚೇತನ್‌ ಪಡುಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next